ದಿವಂಗತ ಹಿರಿಯ ವಕೀಲ ಇಕ್ಬಾಲ್ ಚಾಗ್ಲಾ ಅವರ ಗೌರವಾರ್ಥ ₹2 ಕೋಟಿ ಮೌಲ್ಯದ ಇಕ್ಬಾಲ್ ಚಾಗ್ಲಾ-ಐಡಿಐಎ ವಿದ್ಯಾರ್ಥಿವೇತನ ದತ್ತಿ ಸ್ಥಾಪಿಸುವುದಕ್ಕಾಗಿ ಇನ್ಕ್ರೀಸಿಂಗ್ ಡೈವರ್ಸಿಟಿ ಬೈ ಇನ್ಕ್ರೀಸಿಂಗ್ ಆಕ್ಸೆಸ್ ಟು ಲೀಗಲ್ ಎಜುಕೇಷನ್ (ಐಡಿಐಎ) ಚಾರಿಟೆಬಲ್ ಟ್ರಸ್ಟ್ ಸಂಸ್ಥೆಯು ಇಕ್ಬಾಲ್ ಅವರ ಪತ್ನಿ ರೋಶನ್ ಚಾಗ್ಲಾ ಅವರೊಂದಿಗೆ ಒಡಂಬಡಿಕೆಗೆ ಸಹಿ ಹಾಕಿರುವುದಾಗಿ ಘೋಷಿಸಿದೆ.
ಭಾರತದ ಪ್ರತಿಷ್ಠಿತ ಕಾನೂನು ಶಾಲೆಗಳಲ್ಲಿ ಅಧ್ಯಯನ ಮಾಡುವ; ಸೌಲಭ್ಯ ವಂಚಿತ ಹಿನ್ನೆಲೆ ಇರುವ ಇಬ್ಬರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಈ ನಿಧಿಯಿಂದ ಬರುವ ವಾರ್ಷಿಕ ಆದಾಯ ಸಹಾಯ ಮಾಡಲಿದೆ.
ಇಕ್ಬಾಲ್ ಚಾಗ್ಲಾ-ಐಡಿಐಎ ಸ್ಕಾಲರ್ಸ್ ಎನಿಸಿಕೊಳ್ಳಲಿರುವ ಈ ವಿದ್ಯಾರ್ಥಿಗಳು ಬೋಧನಾ ಶುಲ್ಕ, ಹಾಸ್ಟೆಲ್ ವೆಚ್ಚ ಒಳಗೊಂಡಂತೆ ಸಮಗ್ರ ನೆರವನ್ನು ಪಡೆಯಲಿದ್ದಾರೆ. ಜೊತೆಗೆ ಇಂಟರ್ನ್‌ಶಿಪ್, ಅಣಕು ನ್ಯಾಯಾಲಯ ಮತ್ತಿತರ ವೃತ್ತಿಪರ ಅಭಿವೃದ್ಧಿ ಅವಕಾಶಗಳಿಗೂ ಈ ವಿದ್ಯಾರ್ಥಿ ವೇತನದಿಂದ ಬೆಂಬಲ ದೊರೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರೋಷನ್ ಚಾಗ್ಲಾ ಅವರು, "ಇಕ್ಬಾಲ್ ಅವರು ಕಾನೂನಿನ ಬಲದಿಂದ ನ್ಯಾಯಯುತ ಸಮಾಜ ಸೃಷ್ಟಿಸಲು ಸಾಧ್ಯ ಎಂದು ಆಳವಾಗಿ ನಂಬಿದ್ದರು. ಈ ದತ್ತಿ ಅವರ ಆಶಯಗಳನ್ನು ಮುಂದುವರೆಸುವ ಮಾರ್ಗವಾಗಿದ್ದು, ಪ್ರತಿಭಾನ್ವಿತ ಯುವಜನರಿಗೆ ಅವರ ಹಿನ್ನೆಲೆ ಏನೇ ಇದ್ದರೂ, ಕಾನೂನು ಅಧ್ಯಯನ ಮಾಡಲು ಮತ್ತು ಬದಲಾವಣೆ ತರಲು ಅವಕಾಶ ದೊರೆಯುವಂತೆ ನೋಡಿಕೊಳ್ಳುತ್ತದೆ" ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಇಕ್ಬಾಲ್ ಅವರ ಪುತ್ರ ನ್ಯಾ. ರಿಯಾಜ್ ಚಾಗ್ಲಾ ಅವರು "ಈ ವಿದ್ಯಾರ್ಥಿವೇತನ ನನ್ನ ತಂದೆಯ ಜೀವನ ಮತ್ತು ಕಾರ್ಯವನ್ನು ಗೌರವಿಸುವುದಷ್ಟೇ ಅಲ್ಲದೆ, ನ್ಯಾಯ ಮತ್ತು ಸಮಾನತೆಗೆ ಬದ್ಧರಾಗಿರುವ ವಕೀಲರ ಭವಿಷ್ಯದ ಪೀಳಿಗೆಯನ್ನೂ ಹುಟ್ಟುಹಾಕುತ್ತದೆ" ಎಂದು ಹೆಮ್ಮೆ ವ್ಯಕ್ತಪಡಿಸಿದರು. ದ
ದತ್ತಿ ಸ್ಥಾಪನೆ ಕುರಿತಂತೆ ಮಾತನಾಡಿದ ಐಡಿಐಎ ವ್ಯವಸ್ಥಾಪಕ ಟ್ರಸ್ಟಿ ಶಿಶಿರ ರುದ್ರಪ್ಪ ಅವರು “ದತ್ತಿಯು ದೂರಗಾಮಿ ಪರಿಣಾಮ ಬೀರಲಿದ್ದು ಕಾನೂನು ಶಿಕ್ಷಣದ ನಿರ್ಣಾಯಕ ಹಂತದಲ್ಲಿ ವಿದ್ಯಾರ್ಥಿಗಳನ್ನು ಬೆಂಬಲಿಸಲು ಮತ್ತು ಅವರು ಆತ್ಮವಿಶ್ವಾಸದಿಂದ ವೃತ್ತಿಯತ್ತ ಹೆಜ್ಜೆ ಇರಿಸಲು ಅನುವು ಮಾಡಿಕೊಡುತ್ತದೆ” ಎಂದರು.
ಎಲ್ಲರನ್ನೂ ಒಳಗೊಳ್ಳುವಂತಹ ಕಾನೂನು ವೃತ್ತಿಯ ನಿರ್ಮಾಣದ ದೃಷ್ಟಿಯಿಂದ ಐಡಿಐಎ ಆರಂಭವಾಗಿದೆ. ಪ್ರಮುಖ ಕಾನೂನು ಶಾಲೆಗಳಲ್ಲಿ ಯಶಸ್ವಿಯಾಗುವ ಸಾಮರ್ಥ್ಯ ಇರುವ ಸೌಲಭ್ಯವಂಚಿತ ವಿದ್ಯಾರ್ಥಿಗಳನ್ನು ಗುರುತಿಸಿ ತರಬೇತಿ ನೀಡುವ ಆಂದೋಲನ ಇದಾಗಿದ್ದು ಅವರಿಗೆ ಸುಸ್ಥಿರವಾದ ಆರ್ಥಿಕ ಬೆಂಬಲ, ಮಾರ್ಗದರ್ಶನ ಮತ್ತು ತರಬೇತಿ ಒದಗಿಸುತ್ತದೆ.