Supreme Court, RN Ravi 
ಸುದ್ದಿಗಳು

"ಮರು ಅಂಗೀಕರಿಸಿದ ಮಸೂದೆಗಳನ್ನು ತಮಿಳುನಾಡು ರಾಜ್ಯಪಾಲರು ರಾಷ್ಟ್ರಪತಿಗೆ ಶಿಫಾರಸು ಮಾಡಿದ್ದು ಹೇಗೆ?" ಸುಪ್ರೀಂ ತರಾಟೆ

ರಾಜ್ಯಪಾಲರು ಮಸೂದೆಯನ್ನು ಶಾಸಕಾಂಗಕ್ಕೆ ಮರಳಿಸಿದ ಬಳಿಕ, 200 ನೇ ವಿಧಿಯ ಅಡಿಯಲ್ಲಿ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಉಲ್ಲೇಖಿಸುವ ಆಯ್ಕೆ ಸ್ವಯಂಚಾಲಿತವಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

Bar & Bench

ರಾಜ್ಯ ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳ ನೇಮಕಾತಿ ಸೇರಿದಂತೆ ರಾಜ್ಯ ವಿಧಾನಸಭೆ ಅಂಗೀಕರಿಸಿದ ಹಲವು ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡದೆ ಇರುವುದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಕಾಯ್ದಿರಿಸಿದೆ.

ರಾಜ್ಯಪಾಲರು ಒಮ್ಮೆ ಮಸೂದೆ ಹಿಂದಕ್ಕೆ ಕಳಿಸಿದ ನಂತರ ಎರಡನೇ ಬಾರಿಗೆ ವಿಧಾನಸಭೆ ಮಸೂದೆಯನ್ನು ಮರುಪರಿಶೀಲಿಸಿ ಅನುಮೋದಿಸಿರುವಾಗ ರಾಜ್ಯಪಾಲರು ಮಸೂದೆಗಳನ್ನು ರಾಷ್ಟ್ರಪತಿಗೆ ಕಳುಹಿಸಲು ಹೇಗೆ ಸಾಧ್ಯ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಪ್ರಶ್ನಿಸಿತು.

"ಮಸೂದೆಗಳು ಸರ್ಕಾರಕ್ಕೆ ಹಿಂತಿರುಗಿಸಿದ ನಂತರ ಅವು (ಮರು) ಅಂಗೀಕರಿಸಲ್ಪಟ್ಟು ರಾಜ್ಯಪಾಲರ ಬಳಿ ಹೀಗೆ ಮರು ಅಂಗೀಕರಿಸಲ್ಪಟ್ಟ ಮಸೂದೆ ಬಂದ ನಂತರ ಅವರು ಅದನ್ನು ರಾಷ್ಟ್ರಪತಿಗಳಿಗೆ ಹೇಗೆ ಕಳುಹಿಸಲು ಸಾಧ್ಯ?" ಎಂದು ನ್ಯಾಯಾಲಯ ಕಿಡಿಕಾರಿತು.

ರಾಜ್ಯ ಶಾಸಕಾಂಗ ಎರಡನೇ ಬಾರಿಗೆ ಮರುಪರಿಶೀಲಿಸಿ ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ ಎಂದು ತಮಿಳುನಾಡು ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ ದೃಢಪಡಿಸಿದರು.

"ಮರು ಅಂಗೀಕರಿಸಲಾದ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಹೇಗೆ ಕಳುಹಿಸಬಹುದು?" ಎಂದು ನ್ಯಾಯಾಲಯವು  ತಮಿಳುನಾಡು ರಾಜ್ಯಪಾಲರನ್ನು ಪ್ರತಿನಿಧಿಸುವ ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರನ್ನು ಕೇಳಿತು.

ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ, ರಾಜ್ಯಪಾಲರು (ಮಸೂದೆಗೆ ಒಪ್ಪಿಗೆ ನೀಡುವುದರ ಹೊರತಾಗಿ) ಒಪ್ಪಿಗೆಯನ್ನು ತಡೆಹಿಡಿಯಬಹುದು ಅಥವಾ ಮಸೂದೆಯನ್ನು ರಾಷ್ಟ್ರಪತಿಗೆ ಉಲ್ಲೇಖಿಸಬಹುದು ಎಂದು ನ್ಯಾಯಪೀಠ ಗಮನಿಸಿತು.

ರಾಜ್ಯಪಾಲರು ಮಸೂದೆಯನ್ನು ಶಾಸಕಾಂಗಕ್ಕೆ ಮರಳಿ ಕಳುಹಿಸಿದ ನಂತರ, 200ನೇ ವಿಧಿಯ ಅಡಿಯಲ್ಲಿ ಮಸೂದೆಯನ್ನು ರಾಷ್ಟ್ರಪತಿಗೆ ಉಲ್ಲೇಖಿಸುವ ಆಯ್ಕೆ ಸ್ವಯಂಚಾಲಿತವಾಗಿ ಹೊರಟುಹೋಗುತ್ತದೆ ಎಂದು ಅದು ನುಡಿಯಿತು.

ರಾಜ್ಯ ಶಾಸಕಾಂಗ ಮಸೂದೆಯನ್ನು ಮತ್ತೊಮ್ಮೆ ಅಂಗೀಕರಿಸಿದರೆ, ರಾಜ್ಯಪಾಲರು ತಮ್ಮ ಒಪ್ಪಿಗೆ ನೀಡಬೇಕಾಗುತ್ತದೆ. ರಾಜ್ಯಪಾಲರು ಒಪ್ಪಿಗೆಯನ್ನು ತಡೆಹಿಡಿದರೆ, ಸ್ವಯಂಚಾಲಿತವಾಗಿ ಆ ನಿಬಂಧನೆ (ವಿಷಯವನ್ನು ರಾಷ್ಟ್ರಪತಿಗೆ ಉಲ್ಲೇಖಿಸುವುದು) ಜಾರಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ವಕೀಲರಾದ ಎಎಂ ಸಿಂಘ್ವಿ, ಮುಕುಲ್ ರೋಹಟಗಿ ಮತ್ತು ಪಿ ವಿಲ್ಸನ್ ವಾದ ಮಂಡಿಸಿದರು.

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳನ್ನು ಕಾಲಮಿತಿಯೊಳಗೆ ನಿರ್ಧರಿಸಲು ಅಥವಾ ಒಪ್ಪಿಗೆ ನೀಡಲು ರಾಜ್ಯಪಾಲರು/ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ರಾಜ್ಯ ಸರ್ಕಾರ ನ್ಯಾಯಾಲಯದ ಮೆಟ್ಟಿಲೇರಿತ್ತು.