Manish Sisodia, Supreme Court Manish Sisodia's Facebook account
ಸುದ್ದಿಗಳು

'ಸಿಸೋಡಿಯಾ ಪ್ರಕರಣದ ವಿಚಾರಣೆಗೆ ಎಷ್ಟು ಸಮಯ ಬೇಕು?' ಇ ಡಿಗೆ ಪ್ರಶ್ನೆ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Bar & Bench

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ ಡಿ) ತನ್ನ ವಿರುದ್ಧ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್ ಸಿಸೋಡಿಯಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕಾಯ್ದಿರಿಸಿದೆ [ಮನೀಶ್ ಸಿಸೋಡಿಯಾ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ತೀರ್ಪು ಕಾಯ್ದಿರಿಸುವ ಮೊದಲು ಇ ಡಿ ಮತ್ತು ಸಿಸೋಡಿಯಾ ಅವರ ವಾದ ಆಲಿಸಿತು.

ಪ್ರಕರಣದ ವಿಚಾರಣೆಗೆ ಇನ್ನೂ ಎಷ್ಟು ಸಮಯ ಬೇಕು ಎಂದು ನ್ಯಾಯಾಲಯ ಈ ವೇಳೆ ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿತು. “ಸುರಂಗದ ಕೊನೆಯಲ್ಲಿ ಬೆಳಕೇನಾದರೂ ಕಂಡೀತೆ? ಪ್ರಕರಣದ ವಿಚಾರಣೆ ಪೂರ್ಣಗೊಳ್ಳಲು ಇನ್ನೂ ಎಷ್ಟು ಸಮಯ ಹಿಡಿಯುತ್ತದೆ” ಎಂದು ನ್ಯಾ. ವಿಶ್ವನಾಥನ್ ಅವರು ಇ ಡಿಯನ್ನು ಪ್ರಶ್ನಿಸಿದರು.

ಸಿಸೋಡಿಯಾ ಅವರು ವಿವಿಧ ದಾಖಲೆಗಳನ್ನು ಒದಗಿಸುವಂತೆ ಕೋರಿ ವಿಚಾರಣಾ ನ್ಯಾಯಾಲಯದ ಮುಂದೆ ಹಲವು ಅರ್ಜಿಗಳನ್ನು ಸಲ್ಲಿಸಿದ್ದರಿಂದ ವಿಚಾರಣೆ  ವಿಳಂಬವಾಯಿತು ಎಂಬ ಇ ಡಿ ವಾದಕ್ಕೆ ನ್ಯಾಯಾಲಯ ಸಮ್ಮತಿಸಲಿಲ್ಲ.‌ ಈ ವಿಚಾರವಾಗಿ ನ್ಯಾಯಮೂರ್ತಿಗಳಿಬ್ಬರೂ ಇ ಡಿಯನ್ನು ಟೀಕಿಸಿದರು.

ಆದರೆ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ ವಿ ರಾಜು ಅವರು ವಿಳಂಬಕ್ಕೆ ಸಿಸೋಡಿಯಾ ಅವರೇ ಕಾರಣ ಎಂದು ಸಮರ್ಥಿಸಿಕೊಂಡರು.

ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಫೆಬ್ರವರಿ 26, 2023 ರಿಂದ ಬಂಧನದಲ್ಲಿದ್ದು, ಸಿಬಿಐ ಮತ್ತು ಇ ಡಿ ಎರಡೂ ಅವರ ವಿರುದ್ಧ ತನಿಖೆ ನಡೆಸುತ್ತಿವೆ. ಸಿಸೋಡಿಯಾ ಜಾಮೀನು ಅರ್ಜಿ ಸಲ್ಲಿಸಿದ್ದರೂ  ಯಾವುದೇ ಪ್ರಯೋಜನವಾಗಿಲ್ಲ.