ವ್ಯಾಜ್ಯಗಳನ್ನು ಇತ್ಯರ್ಥಗೊಳಿಸುವುದಷ್ಟೇ ಅಲ್ಲದೆ, ಮಧ್ಯಸ್ಥಿಕೆ ಎಂಬುದು ಅನಿರೀಕ್ಷಿತ ಪಾಲುದಾರಿಕೆಗೂ ನಾಂದಿ ಹಾಡಬಹುದು ಎಂದು ತಿಳಿಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮನಮೋಹನ್ ಮೊಕದ್ದಮೆಗೆ ಬದಲು ವಾಣಿಜ್ಯ ಸಹಯೋಗದಲ್ಲಿ ಇತ್ಯರ್ಥಗೊಂಡ ವಾಣಿಜ್ಯ ಚಿಹ್ನೆ ಪ್ರಕರಣವೊಂದನ್ನು ವಿವರಿಸಿದರು.
ಸೇವಾ ರಫ್ತು ಉತ್ತೇಜನ ಮಂಡಳಿ (ಎಸ್ಇಪಿಸಿ), ಭಾರತೀಯ ಕಾನೂನು ಸಂಸ್ಥೆಗಳ ಸಂಘ (ಎಸ್‌ಐಎಲ್‌ಎಫ್) ಮತ್ತು ಭಾರತೀಯ ರಾಷ್ಟ್ರೀಯ ಕಾನೂನು ವೃತ್ತಿಪರರ ಸಂಘ (ಐಎನ್‌ಎಎಲ್‌ಪಿ) ಜಂಟಿಯಾಗಿ ಶನಿವಾರ ನವದೆಹಲಿಯಲ್ಲಿ ಆಯೋಜಿಸಿದ್ದ "ಭಾರತದ ಕಾನೂನು ಚೌಕಟ್ಟು: ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಅವಕಾಶಗಳ ಅವಲೋಕನ" ಸಮಾವೇಶದಲ್ಲಿ ಅವರು ಕಾನೂನು ವೃತ್ತಿಪರರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಭಾರತದ ಸಣ್ಣ ತಯಾರಕರೊಬ್ಬರು ತನ್ನ ಉತ್ಪನ್ನವನ್ನು ನಕಲಿ ಮಾಡುತ್ತಿದ್ದಾರೆ ಎಂದು ದೂರಿ ಜಾಗತಿಕ ಜೀನ್ಸ್ ಬ್ರಾಂಡ್ ತಯಾರಿಸುವ ಕಂಪೆನಿಯೊಂದು ಮೊಕದ್ದಮೆ ಹೂಡಿತ್ತು. ಈ ಸಂಬಂಧ ತಡೆಯಾಜ್ಞೆ ನೀಡಿದ್ದ ನ್ಯಾಯಾಲಯ ಮಧ್ಯಸ್ಥಿಕೆಗೆ ಪ್ರಕರಣವನ್ನು ವಹಿಸಿತ್ತು. ಈ ವೇಳೆ ಅನಿರೀಕ್ಷಿತವಾದದ್ದೊಂದು ಘಟಿಸಿತು ಎಂದು ಅವರು ಹೇಳಿದರು.
ಪ್ರತಿವಾದಿ ಅತ್ಯುತ್ತಮ ಗುಣಮಟ್ಟದ ಜೀನ್ಸ್ ಉತ್ಪಾದಿಸುತ್ತಿರುವುದನ್ನು ಮಧ್ಯಸ್ಥಿಕೆ ಪ್ರಕ್ರಿಯೆ ವೇಳೆ ಕಂಡುಕೊಂಡ ಜಾಗತಿಕ ಕಂಪೆನಿ ಕಡೆಗೆ ಪ್ರತಿವಾದಿಯನ್ನೇ ತನ್ನ ಅಧಿಕೃತ ತಯಾರಕನನ್ನಾಗಿ ನೇಮಿಸಿಕೊಂಡಿತು ಅಂದು ಅವರು ನೆನೆದರು. ಈ ಪ್ರಕರಣ ಪರ್ಯಾಯ ವಿವಾದ ಪರಿಹಾರದ (ಎಡಿಆರ್) ಪರಿವರ್ತನಾತ್ಮಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಗಡಿಯಾಚೆಗಿನ ವಾಣಿಜ್ಯ ಮತ್ತು ತಾಂತ್ರಿಕ ಸಂಕೀರ್ಣತೆಗೆ ಅನುಗುಣವಾಗಿ ವ್ಯಾಜ್ಯ ಪರಿಹಾರ ಕಾರ್ಯಸೂಚಿಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ನ್ಯಾ. ಮನಮೋಹನ್ ಒತ್ತಿ ಹೇಳಿದರು.
ದತ್ತಾಂಶ ಗೌಪ್ಯತೆ ಮತ್ತು ಸೈಬರ್ ಭದ್ರತೆ ಭಾರತದ ಡಿಜಿಟಲ್ ವ್ಯಾಪಾರ ವ್ಯವಸ್ಥೆಯ ಆಧಾರ ಸ್ತಂಭಗಳಾಗಬೇಕು ಎಂದು ಅವರು ಒತ್ತಿ ಹೇಳಿದರು. ಜಾಗತಿಕ ಹೂಡಿಕೆದಾರರ ವಿಶ್ವಾಸಕ್ಕೆ ಬಲವಾದ ಕಾನೂನಾತ್ಮಕ ಆಡಳಿತ ಮತ್ತು ಕಾನೂನು ವ್ಯವಸ್ಥೆ ಅತ್ಯಗತ್ಯ ಎಂದು ಅವರು ಹೇಳಿದರು. ಎಸ್‌ಐಎಲ್‌ಎಫ್ ಅಧ್ಯಕ್ಷ ಲಲಿತ್ ಭಾಸಿನ್ ಸ್ವಾಗತ ಭಾಷಣ ಮಾಡಿದರು.