
ದೇಶದಲ್ಲೆಡೆ ಮಧ್ಯಸ್ಥಿಕೆಯನ್ನು ಪ್ರಚುರಪಡಿಸುವುದಕ್ಕಾಗಿ ಬಹುಭಾಷಾ ಸಂಪನ್ಮೂಲಗಳನ್ನು ಕೂಡಲೇ ಅಭಿವೃದ್ಧಿಪಡಿಸಬೇಕೆಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಕರೆ ನೀಡಿದರು.
ನವದೆಹಲಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಪ್ರಥಮ ರಾಷ್ಟ್ರೀಯ ಮಧ್ಯಸ್ಥಿಕೆ ಸಮ್ಮೇಳನ ಮತ್ತು ಭಾರತೀಯ ಮಧ್ಯಸ್ಥಿಕೆ ಸಂಘದ ಉದ್ಘಾಟನೆ ಬಳಿಕ ನಡೆದ ತಾಂತ್ರಿಕ ಅಧಿವೇಶನದಲ್ಲಿ ಅವರು ಮಾತನಾಡಿದರು.
ನ್ಯಾಯಾಲಯ ತೀರ್ಪುಗಳ ರೀತಿಯಲ್ಲಿಯೇ ಮಧ್ಯಸ್ಥಿಕೆಯ ದಾಖಲೆಗಳು ಎಲ್ಲಾ ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತಿರಬೇಕು ಎಂದರು. ಈ ರೀತಿಯ ಒಳಗೊಳ್ಳುವಿಕೆಯಿಂದಾಗಿ ಕಾನೂನು ಪ್ರಕ್ರಿಯೆ ಮತ್ತು ಜನಸಾಮಾನ್ಯರ ನಡುವಿನ ಅಂತರ ಕಡಿಮೆಯಾಗಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು.
ಕಾನೂನು ಶಾಲೆಗಳಲ್ಲಿ ಸಾಂಪ್ರದಾಯಿಕ ಪರ್ಯಾಯ ವಿವಾದ ಪರಿಹಾರ (ADR) ಕೋರ್ಸ್‌ಗಳಿಗಿಂತಲೂ ಪ್ರತ್ಯೇಕವಾಗಿ ಮಧ್ಯಸ್ಥಿಕೆಯನ್ನು ಸ್ವತಂತ್ರ ವಿಷಯವಾಗಿ ಪರಿಚಯಿಸುವ ಅಗತ್ಯವಿದೆ ಎಂದ ಅವರು ವಿವಾದ ಪರಿಹಾರದ ಸ್ವತಂತ್ರ ವಿಧಾನವಾಗಿ ಪರಿಗಣಿಸುವಷ್ಟು ಮಧ್ಯಸ್ಥಿಕೆ ಪ್ರಬುದ್ಧವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಪ್ರೀಂ ಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ ಬಿ ವಿ ನಾಗರತ್ನ ಮಧ್ಯಸ್ಥಿಕೆ ಎಂಬುದು ಉಳಿದೆಲ್ಲ ಪರ್ಯಾಯ ವ್ಯವಸ್ಥೆಗಳಿಗೂ ಪರ್ಯಾಯವಾದುದು ಎಂದರು. ಭಾರತದ ಸಾಂಪ್ರದಾಯಿಕ ವ್ಯಾಜ್ಯ ಪರಿಹಾರ ವಿಧಾನಗಳು ಅದರಲ್ಲಿಯೂ ಗ್ರಾಮ ಪಂಚಾಯತ್‌ಗಳ ವ್ಯಾಜ್ಯ ಇತ್ಯರ್ಥ ನೀತಿಗೆ ಮರಳುವಂತೆ ಒತ್ತಾಯಿಸಿದ ಅವರು . "ಮಂಡ್ಯ ಜಿಲ್ಲೆಯ ನನ್ನ ಸ್ವಂತ ತಾಲ್ಲೂಕಿನಲ್ಲಿ, 1990ರ ದಶಕದವರೆಗೆ ನ್ಯಾಯಾಲಯಗಳು ಇರಲಿಲ್ಲ ಏಕೆಂದರೆ ಎಲ್ಲವನ್ನೂ ಸ್ಥಳೀಯ ಪಂಚಾಯತ್‌ಗಳ ಮೂಲಕ ಇತ್ಯರ್ಥಪಡಿಸಲಾಗುತ್ತಿತ್ತು. ನಾವು (ವ್ಯಾಜ್ಯ ಇತ್ಯರ್ಥಪಡಿಸುತ್ತಿದ್ದವರನ್ನು) ಪಂಚ ಪರಮೇಶ್ವರರು ಎಂದು ಕರೆಯುತ್ತಿದ್ದೆವು" ಎಂಬುದಾಗಿ ನೆನೆದರು. ಮಧ್ಯಸ್ಥಿಕೆ ಕಾಯ್ದೆಯ ಅನುಷ್ಠಾನಕ್ಕಾಗಿ ಅವರು ಇದೇ ವೇಳೆ ವಿವರವಾದ ಕಾರ್ಯಸೂಚಿಗಳನ್ನು ವಿವರಿಸಿದರು.
ಮಧ್ಯಸ್ಥಿಕೆ ಮೊಕದ್ದಮೆಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ತಮ್ಮ ಆದಾಯ ಕಡಿಮೆಯಾಗುತ್ತದೆ ಎಂದು ಕೆಲ ವಕೀಲರು ನಂಬುತ್ತಾರೆ. ಇಂತಹ ಮನಸ್ಥಿತಿ ಇರಿಸಿಕೊಳ್ಳದೆ ವಕೀಲರು ತಮ್ಮನ್ನು ನ್ಯಾಯವನ್ನು ಸುಗಮಗೊಳಿಸುವವರಾಗಿ ಪರಿಗಣಿಸಬೇಕು ಎಂದು ಅವರು ಕರೆ ನೀಡಿದರು.
ಸುಪ್ರೀಂ ಕೋರ್ಟ್‌ನ ಇನ್ನೊಬ್ಬ ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರು ಮಾತನಾಡಿ ಮಧ್ಯಸ್ಥಿಕೆ ಆಂದೋಲನವನ್ನು ಕಟ್ಟುವಲ್ಲಿ ಇಲ್ಲವೇ ಕೆಡವುವಲ್ಲಿ ವಕೀಲರ ಪಾತ್ರ ಮಹತ್ವದ್ದು. ಆದ್ದರಿಂದ ವಕೀಲರಿಗೆ ತರಬೇತಿ ನೀಡಿ ಅವರಿಗೆ ಮಧ್ಯಸ್ಥಿಕೆಯ ಮಹತ್ವವನ್ನು ತಿಳಿಸಬೇಕು ಎಂದರು.
ಗ್ರಾಮೀಣ ಭಾಗದ ಜನರಿಗೆ ಕಾನೂನು ನೆರವಿನ ಮೊದಲ ಘಟಕವಾಗಿರುವ ಕಾನೂನು ಸೇವೆಗಳ ಪ್ರಾಧಿಕಾರಗಳ ಮೂಲ ಸೌಕರ್ಯ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಸರ್ಕಾರ ನೆರವು ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.
ಉದ್ಘಾಟನಾ ಅಧಿವೇಶನದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ, ರಾಷ್ಟ್ರಪತಿ ದ್ರೌಪದಿ ಮುರ್ಮು, ಸುಪ್ರೀಂ ಕೋರ್ಟ್ ಭಾವಿ ಸಿಜೆಐ ಬಿ ಆರ್ ಗವಾಯಿ, ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಪ್ರಭಾರ) ಅರ್ಜುನ್ ರಾಮ್ ಮೇಘವಾಲ್ , ಅಟಾರ್ನಿ ಜನರಲ್ ಆರ್. ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಾತನಾಡಿದರು.