ಕೆಲ ದಿನಗಳ ಹಿಂದೆ ಕುವೈತ್ನಿಂದ ಗಡಿಪಾರಾಗಿದ್ದ ಬೆಂಗಳೂರಿನ ವ್ಯಕ್ತಿ ಕೊಚ್ಚಿಯ ಎರ್ನಾಕುಲಂನಲ್ಲಿ ನಾಪತ್ತೆಯಾದ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವಂತೆ ಕೇರಳ ಹೈಕೋರ್ಟ್ ಶನಿವಾರ ಕೊಚ್ಚಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ [ಸ್ಯಾಂಟೊನ್ ಲಾಮಾ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ]
ಉಪ ಪೊಲೀಸ್ ಆಯುಕ್ತ (ಡಿಸಿಪಿ) ದರ್ಜೆಗಿಂತ ಕಡಿಮೆಯಿಲ್ಲದ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಮತ್ತು ನ್ಯಾಯಮೂರ್ತಿ ಎಂ.ಬಿ. ಸ್ನೇಹಲತಾ ಅವರ ವಿಭಾಗೀಯ ಪೀಠ ಆದೇಶಿಸಿದೆ. ಬುಧವಾರ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ಕಾಣೆಯಾದ ಸೂರಜ್ ಲಾಮಾ ಅವರ ಮಗ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಸಂಬಂಧ ಈ ಆದೇಶ ನೀಡಲಾಯಿತು.
ಕುವೈತ್‌ನಿಂದ ಗಡಿಪಾರಾಗಿದ್ದ ವ್ಯಕ್ತಿ ಬೆಂಗಳೂರಿನ ಬದಲಿಗೆ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದದ್ದು ಹೇಗೆ ಎಂಬುದರ ಕುರಿತು ತನಿಖೆ ನಡೆಸುವಂತೆ ನ್ಯಾಯಾಲಯ ಈ ಹಿಂದಿನ ವಿಚಾರಣೆ ವೇಳೆ ಕೇಂದ್ರ ಗೃಹ ಸಚಿವಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಆಲ್ಕೋಹಾಲ್ ನಂಜಿನಿಂದ ಬಳಲುತ್ತಿದ್ದ ಸೂರಜ್ ಲಾಮಾ ಅವರನ್ನು ಚಿಕಿತ್ಸೆಗಾಗಿ ಕುವೈತ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂಜಿನಿಂದಾಗಿ ಅವರು ಸ್ಮರಣಶಕ್ತಿಗೆ ಧಕ್ಕೆ ತರುವಂತಹ ಮತ್ತು ಭಾಗಶಃ ಮಾತಿನ ದುರ್ಬಲತೆಗೆ ಕಾರಣವಾಗುವ ಲ್ಯುಕೋಎನ್ಸೆಫಲೋಪತಿಗೆ ತುತ್ತಾಗಿದ್ದರು.
ನಂತರ ಕುವೈತ್ನಿಂದ ಗಡಿಪಾರಾಗಿದ್ದ ಅವರು ಅಕ್ಟೋಬರ್ 5 ರಂದು ಕೊಚ್ಚಿಗೆ ತಲುಪಿದ್ದರು. ಭ್ರಮಾಧೀನರಾಗಿದ್ದರೂ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ಬಳಿಕ ಅಲ್ಲಿಂದ ಹೊರಬಂದ ಅವರು ಅಳುವ ಮೆಟ್ರೊ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ನಂತರ ತ್ರಿಕ್ಕಕ್ಕರ ಪೊಲೀಸರು ಅವರನ್ನು ಬಂಧಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿಂದ ಅವರು ಒಬ್ಬರೇ ಹೊರನಡೆದಿರುವುದು ಅಕ್ಟೋಬರ್ 10 ರಂದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿತ್ತು.
ನಂತರ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ಅವರ ಮಗ ಸ್ಯಾಂಟೊನ್ ಲಾಮಾ ಅವರು ಪೊಲೀಸರು ಮತ್ತು ಆಸ್ಪತ್ರೆ ಅಧಿಕಾರಿಗಳು ಗಂಭೀರ ನಿರ್ಲಕ್ಷ್ಯ ತೋರಿದ ಪರಿಣಾಮ ಘಟನೆ ನಡೆದಿದೆ ಎಂದು ಆರೋಪಿಸಿದ್ದರು. ನಾಪತ್ತೆಯಾದ ವ್ಯಕ್ತಿಯನ್ನು ಪೋಲೀಸ್ ಕಸ್ಟಡಿಯಲ್ಲಿ ಇರಿಸಿಕೊಂಡಿರುವ ಕಾರಣ ಅವರ ಸುರಕ್ಷತೆ ಮತ್ತು ಸಕ್ಷಮ ವೈದ್ಯಕೀಯ ಮತ್ತು ನ್ಯಾಯಾಂಗ ಅಧಿಕಾರಿಗಳೆದುರು ಹಾಜರುಪಡಿಸುವುದು ಅವರ ಕಾನೂನಾತ್ಮಕ ಮತ್ತು ಸಾಂವಿಧಾನಿಕ ಹೊಣೆಯಾಗಿತ್ತು ಎಂದು ನ್ಯಾಯಲಯ ವಿವರಿಸಿದೆ
ಕೇರಳ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸ್ಯಾಂಟನ್ ಲಾಮಾ ಅವರಿಗೆ ನೆರವಾಗಿದ್ದು, ಅಕ್ಟೋಬರ್ 18 ರಂದು ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿದೆ.