ತಿಮರೋಡಿ ಗಡಿಪಾರು: ಕಾನೂನು ಪ್ರಕ್ರಿಯೆ ಲೋಪವಾಗಿಲ್ಲ ಎಂದ ಸರ್ಕಾರ; ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ತಿಮರೋಡಿ ವಿರುದ್ಧ ಹೊರಡಿಸಲಾಗಿರುವ ಆದೇಶದಲ್ಲಿ ವ್ಯಾಪಕ ಕಾನೂನು ಪ್ರಕ್ರಿಯೆಯ ಲೋಪಗಳಿವೆ ಎಂದ ಹಿರಿಯ ವಕೀಲ ತಾರಾನಾಥ ಪೂಜಾರಿ.
ತಿಮರೋಡಿ ಗಡಿಪಾರು: ಕಾನೂನು ಪ್ರಕ್ರಿಯೆ ಲೋಪವಾಗಿಲ್ಲ ಎಂದ ಸರ್ಕಾರ; ಆದೇಶ ಕಾಯ್ದಿರಿಸಿದ ಹೈಕೋರ್ಟ್‌
Published on

“ಸೌಜನ್ಯ ಸಾವಿಗೆ ನ್ಯಾಯ ದೊರಕಿಸಲು ಹೋರಾಟ ನಡೆಸುತ್ತಿರುವ ಮಹೇಶ್‌ ಶೆಟ್ಟಿ ತಿಮರೋಡಿ ಅವರಿಗೆ ಗಡಿಪಾರು ಆದೇಶ ಹೊರಡಿಸಿರುವುದಲ್ಲಿ ಯಾವುದೇ ಕಾನೂನು ಪ್ರಕ್ರಿಯೆಯ ಲೋಪ ಆಗಿಲ್ಲ” ಎಂದು ಅಡ್ವೊಕೇಟ್‌ ಜನರಲ್ ಕರ್ನಾಟಕ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದರು.

ದಕ್ಷಿಣ‌ ಕನ್ನಡ ಜಿಲ್ಲೆಯಿಂದ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ತಿಮರೋಡಿ ಪರ ಹಿರಿಯ ವಕೀಲ ತಾರಾನಾಥ ಪೂಜಾರಿ ಅವರು “ನಮ್ಮ ಅರ್ಜಿದಾರರ ವಿರುದ್ಧ ಹೊರಡಿಸಲಾಗಿರುವ ಆದೇಶದಲ್ಲಿ ವ್ಯಾಪಕ ಕಾನೂನು ಪ್ರಕ್ರಿಯೆಯ ಲೋಪಗಳಿವೆ” ಎಂದರು.

“ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ತಿಮರೋಡಿ ವಿರುದ್ಧದ ಭಾವನೆ ಹೊಂದಿದೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಎಂಬುದರ ಕುರಿತಾದ ಯಾವುದೇ ವಿವರಗಳನ್ನು ಸಮರ್ಪಕವಾಗಿ ಒದಗಿಸಿಲ್ಲ. ಈಗಾಗಲೇ ಸುಮಾರು 10 ಪ್ರಕರಣಗಳಲ್ಲಿ ಅವರ ವಿರುದ್ಧ ತನಿಖಾಧಿಕಾರಿಗಳು ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ. ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೊಂಬಿ ಮಾಡಿ ಗಲಾಟೆ ನಡೆಸುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ. ಆದರೆ, ಇದಕ್ಕೆ ಸಾಕ್ಷಿಗಳೇ ಇಲ್ಲ” ಎಂದು ಆಕ್ಷೇಪಿಸಿದರು. 

ಇದನ್ನು ಬಲವಾಗಿ ಅಲ್ಲಗಳೆದ ಅಡ್ವೊಕೇಟ್‌ ಜನರಲ್ ಕೆ.ಶಶಿಕಿರಣ ಶೆಟ್ಟಿ “ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಹೇಳುತ್ತಿರುವ ವಿವರಗಳು ಸರಿಯಲ್ಲ. ಸ್ಥಳೀಯ ನಿವಾಸಿಯಾಗಿರುವ ಮಹೇಶ್‌ ಶೆಟ್ಟಿ ತಿಮರೋಡಿ ಸೌಜನ್ಯ ಚಳವಳಿ ಹೆಸರಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿದೆ. ಸರ್ಕಾರ ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ” ಎಂದು ವಿವರಿಸಿದರು.

Also Read
ಗಡಿಪಾರು ಆದೇಶ ಪ್ರಶ್ನಿಸಿದ ಮಹೇಶ್ ತಿಮರೋಡಿ: ಅರ್ಜಿ ವಿಚಾರಣೆ ಮಾನ್ಯತೆ ಹೊಂದಿಲ್ಲ ಎಂದು ಆಕ್ಷೇಪಿಸಿದ ಸರ್ಕಾರ

ಸುದೀರ್ಘ ವಾದ–ಪ್ರತಿವಾದಿ ಆಲಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿರುವುದಾಗಿ ತಿಳಿಸಿತು. ಅಂತೆಯೇ, ಗಡಿಪಾರು ಆದೇಶಕ್ಕೆ ಸಂಬಂಧಿಸಿದಂತೆ ತಿಮರೋಡಿ ವಿರುದ್ಧ ಆತುರದ ಕ್ರಮ ಜರುಗಿಸದಂತೆ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತು. ರಾಜ್ಯ ಪ್ರಾಸಿಕ್ಯೂಷನ್‌ನ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ ಎನ್‌ ಜಗದೀಶ್‌ ಮತ್ತು ತಿಮರೋಡಿ ಪರ ವಕಾಲತ್ತು ವಹಿಸಿರುವ ಹೈಕೋರ್ಟ್‌ ವಕೀಲ ಎಂ ಆರ್ ಬಾಲಕೃಷ್ಣ ಹಾಜರಿದ್ದರು

Kannada Bar & Bench
kannada.barandbench.com