Michael Jackson
Michael Jackson 
ಸುದ್ದಿಗಳು

ಜಾಕ್ಸನ್‌ ಕಾರ್ಯಕ್ರಮಕ್ಕೆ ನೀಡಿದ್ದ ತೆರಿಗೆ ವಿನಾಯತಿ ಪ್ರಕರಣ: 1996ರ ನಿರ್ಧಾರಕ್ಕೆ ಬದ್ಧವಾದ ಮಹಾರಾಷ್ಟ್ರ ಸರ್ಕಾರ

Bar & Bench

ವಿಝ್‌ ಕ್ರಾಫ್ಟ್‌ ಎಂಟರ್‌ಟೇನ್‌ಮೆಂಟ್‌ ಸಂಸ್ಥೆಯು 1996ರಲ್ಲಿ ಮುಂಬೈನಲ್ಲಿ ನಡೆಸಿದ್ದ ಪಾಪ್‌ ತಾರೆ ಮೈಕೆಲ್‌ ಜಾಕ್ಸನ್‌ ಸಂಗೀತ ನೃತ್ಯ ಕಾರ್ಯಕ್ರಮಕ್ಕೆ ಅಂದಿನ ಸರ್ಕಾರವು ನೀಡಿದ್ದ ಮನರಂಜನಾ ತೆರಿಗೆ ವಿನಾಯತಿಯನ್ನು ಮಹಾರಾಷ್ಟ್ರ ಸರ್ಕಾರ ಸಚಿವ ಸಂಪುಟವು ಎತ್ತಿ ಹಿಡಿದಿದೆ.

ರಾಜ್‌ ಠಾಕ್ರೆ ನೇತೃತ್ವದ ‘ಶಿವ ಉದ್ಯೋಗ್ ಸೇನಾ’ ಸಂಸ್ಥೆಯ ಸಹಾಯಾರ್ಥದ ಕಾರ್ಯಕ್ರಮವನ್ನು ವಿಜ್‌ ಕ್ರಾಫ್ಟ್‌ ಎಂಟರ್‌ಟೇನ್ಮಂಟ್‌ ಸಂಸ್ಥೆಯು 1996ರಲ್ಲಿ ಆಯೋಜಿಸಿತ್ತು. ದೇಶವ್ಯಾಪಿ ಗಮನಸೆಳೆದ ಕಾರ್ಯಕ್ರಮಕ್ಕೆ ಮಹಾರಾಷ್ಟ್ರ ಸರ್ಕಾರದ ಸಾಂಸ್ಕೃತಿಕ ಇಲಾಖೆಯು ಮನರಂಜನಾ ತೆರಿಗೆಯ ವಿನಾಯತಿ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ಶಿವಸೇನೆ-ಬಿಜೆಪಿ ಬೆಂಬಲಿತ ಸರ್ಕಾರದ ಅಂದಿನ ಈ ನಿರ್ಧಾರವನ್ನು ಪ್ರಶ್ನಿಸಿ 'ಮುಂಬೈ ಗ್ರಾಹಕ ಪಂಚಾಯತ್'‌‌ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಸರ್ಕಾರದ ಈ ನಿರ್ಧಾರವು ಮನಸೋಇಚ್ಚೆಯಿಂದ ಕೂಡಿದ್ದು, ಅಪಾರ ಪ್ರಮಾಣದ ತೆರಿಗೆ ನಷ್ಟಕ್ಕೆ ಕಾರಣವಾಗಿದೆ. ಯಾವ ಬಗೆಯ ಸಹಾಯ ಕಾರ್ಯಕ್ರಮಗಳಿಗೆ ಹಣದ ಬಳಕೆಯಾಗಲಿದೆ ಎನ್ನುವುದನ್ನು ವಿಚಾರಿಸದೆಯೇ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಲಾಗಿತ್ತು.

ಅಲ್ಲದೆ, ತಮ್ಮ ಹಿಡಿತದಲ್ಲಿದ್ದ ಸರ್ಕಾರದ ಪ್ರಭಾವವನ್ನು ಬಳಸಿಕೊಂಡು ಶಿವಸೇನೆಯು ತನ್ನದೇ ಅಂಗಶಾಖೆಯಾದ ‘ಶಿವ್ ಉದ್ಯೋಗ್ ಸೇನಾ’ಗೆ ಅನುಕೂಲಕ ಮಾಡಿಕೊಡುವ ಉದ್ದೇಶದಿಂದ ಮಹಾರಾಷ್ಟ್ರ ಮನರಂಜನಾ ತೆರಿಗೆ ಕಾಯಿದೆಯ ಸೆಕ್ಷನ್‌ 6 ಅನ್ನು ಉಲ್ಲಂಘಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ನ್ಯಾಯಮೂರ್ತಿಗಳಾದ ಡಿ ಕೆ ದೇಶಮುಖ್‌ ಮತ್ತು ಎ ವಿ ಮೆಹ್ತಾ ಅವರಿದ್ದ ವಿಭಾಗೀಯ ಪೀಠವು 2011ರಲ್ಲಿ ಸರ್ಕಾರವು ಸೂಕ್ತರೀತಿಯಲ್ಲಿ ಆಲೋಚಿಸದೆ ಈ ಆದೇಶ ಕೈಗೊಂಡಿದ್ದು ಇದು ಬದಿಗೆ ಸರಿಸಲು ಯೋಗ್ಯವಾಗಿದೆ ಎಂದು ತೀರ್ಪು ನೀಡಿತ್ತು. ಆಮೂಲಕ ತೆರಿಗೆ ವಿನಾಯತಿ ಆದೇಶವನ್ನು ಮರುಪರಿಶೀಲಿಸುವಂತೆ ನಿರ್ದೇಶಿಸಿತ್ತು.

ಹೈಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ನಿರ್ಧಾರವನ್ನು ಮರುಪರಿಶೀಲನೆಗೊಳಪಡಿಸಿದ್ದ ಪ್ರಸ್ತುತ ಸರ್ಕಾರವು ಅಂದಿನ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದೆ. ಇದರಿಂದಾಗಿ, ಪ್ರಕರಣದ ಸಂಬಂಧ ವಿಜ್‌ ಕ್ರಾಪ್ಟ್‌ ಸಂಸ್ಥೆಯು ಹೈಕೋರ್ಟಿನಲ್ಲಿ ಜಮಾ ಇರಿಸಿದ್ದ ತೆರಿಗೆ ಮೊತ್ತಕ್ಕೆ ಸಮವಾದ ರೂ.3.36 ಕೋಟಿ ಹಣವನ್ನು ಮರಳಿ ಪಡೆಯಲಿದೆ.