ಹಣ ಪಣಕ್ಕಿಟ್ಟು ಆಡಲಾಗುವ ಅಂತರ್ಜಾಲ ಆಟಗಳನ್ನು ನಿಷೇಧಿಸುವ ಆನ್‌ಲೈನ್ ಗೇಮ್‌ಗಳ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025ನ್ನು ಪ್ರಶ್ನಿಸಿ ಆನ್‌ಲೈನ್ ಕೇರಮ್ ಗೇಮ್ ವೇದಿಕೆ ಬಘೀರಾ ಕೇರಮ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ [ಬಘೀರಾ ಕೇರಮ್ (ಒಪಿಸಿ) ಪ್ರೈವೇಟ್ ಲಿಮಿಟೆಡ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ಇಂದು ಪ್ರಕರಣವನ್ನು ಸಂಕ್ಷಿಪ್ತವಾಗಿ ಆಲಿಸಿತು.
ವಿಚಾರಣೆ ವೇಳೆ, ಸಾಮಾಜಿಕ ಅಥವಾ ಶೈಕ್ಷಣಿಕ ವೇದಿಕೆಗಳಂತಹ ಹಣವನ್ನು ಪಣಕ್ಕಿಡದ ಆನ್‌ಲೈನ್ ಆಟಗಳನ್ನು ಉತ್ತೇಜಿಸುವ ಈ ಮಸೂದೆ ಜಾರಿ ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರ ಇನ್ನೂ ನಿಯಂತ್ರಣ ಸಂಸ್ಥೆ ರಚಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಉಪಾಧ್ಯಾಯ ಹೇಳಿದರು. ಪ್ರಾಧಿಕಾರ ರಚಿಸದೆ ಹೋದಲ್ಲಿ ಮಸೂದೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಈ ಸಂಬಂಧ ಅಧಿಸೂಚನೆ ಹೊರಡಿಸುವ, ನಿಯಂತ್ರಣ ಪ್ರಾಧಿಕಾರದ ಅಧಿಕಾರ ವಿವರಿಸುವ ಹಾಗೂ ನಿಯಮ ರೂಪಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ತೊಡಗಿರುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.
"ನಾವು ನಿಯಮಗಳನ್ನು ರೂಪಿಸುವ ಮತ್ತು ಪ್ರಾಧಿಕಾರವನ್ನು ರಚಿಸುವ ಪ್ರಕ್ರಿಯೆಯಲ್ಲಿದ್ದೇವೆ. ಸರ್ಕಾರ ಹಣ ಪಣಕ್ಕಿಡದ ಆನ್‌ಲೈನ್ ಗೇಮಿಂಗ್ ಉತ್ತೇಜಿಸುತ್ತಿದೆ. ಆದರೆ ಆನ್‌ಲೈನ್ ಹಣದ ಆಟ ಮಕ್ಕಳಲ್ಲಿಯೂ ವ್ಯಸನ ಮೂಡಿಸುತ್ತಿದ್ದು ಆತ್ಮಹತ್ಯೆಗೆ ಕಾರಣವಾಗುತ್ತದೆ" ಎಂದು ಎಸ್‌ಜಿ ಮೆಹ್ತಾ ಹೇಳಿದರು. ಎಂಟು ವಾರಗಳ ಬಳಿಕ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡಿಸಿತ್ತು. ಕೌಶಲ್ಯದ ಆಟವೇ ಇರಲಿ ಅಥವಾ ಅವಕಾಶದ ಆಟವೇ ಇರಲಿ ಇಲ್ಲವೇ ಎರಡರ ಮಿಶ್ರಣವಾಗಿದ್ದರೂ ಹಣಕಾಸು ವಹಿವಾಟು ನಡೆಯುತ್ತಿದ್ದರೆ ಆ ಎಲ್ಲ ವಿಧದ ಆಟಗಳನ್ನು ಆನ್‌ಲೈನ್ ಹಣದ ಆಟ ಎಂದು ವರ್ಗೀಕರಿಸಿ ನಿಷೇಧಿಸಲು ಮುಂದಾಗಿತ್ತು. ಮಸೂದೆಗೆ ಸಂಸತ್ತಿನ ಎರಡೂ ಸದನಗಳ ಅಂಗೀಕಾರ ದೊರೆತಿದ್ದು ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.
ಬಘೀರಾ ವಾದವೇನು?
ಕಾಯಿದೆಯನ್ನು ತರಾತುರಿಯಲ್ಲಿ ಜಾರಿಗೆ ತರಲಾಗಿದ್ದು ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಿಲ್ಲ. ಹೀಗಾಗಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಎಂದು ಬಘೀರಾ ವಾದಿಸಿದೆ. ಕೌಶಲ್ಯದ ಆಟವೇ ಅಥವಾ ಅವಕಾಶದಾಟವೇ ಎಂಬುದನ್ನು ವರ್ಗೀಕರಿಸದೆ ಎಲ್ಲಾ ಬಗೆಯ ಆನ್‌ಲೈನ್ ಗೇಮ್‌ಗಳನ್ನು ಮಸೂದೆ ನಿಷೇಧಿಸುತ್ತದೆ. ಆನ್‌ಲೈನ್ ಕೇರಂ ಆಟವನ್ನು ನ್ಯಾಯಾಲಯ ಈಗಾಗಲೇ ಕೇವಲ ಕೌಶಲ್ಯದಾಟ ಎಂದು ಮಾನ್ಯ ಮಾಡಿದೆ. ಈ ಆನ್‌ಲೈನ್ ಗೇಮ್ ಭಾರತೀಯ ಕೇರಂ ಒಕ್ಕೂಟ ಮತ್ತು ಅಂತಾರಾಷ್ಟ್ರೀಯ ಕೇರಂ ವೇದಿಕೆ ನಿಯಂತ್ರಣದಲ್ಲಿದೆ ಎಂದು ಅದು ವಾದಿಸಿದೆ.
ಮುಖ್ಯವಾಗಿ ತನ್ನದು ಹಣದ ಆಟವಲ್ಲ, ಬೆಟ್ಟಿಂಗ್ ಇಲ್ಲವಾದರೂ ಹೊಸ ಕಾಯಿದೆ ಜಾರಿಗೆ ಬಂದರೆ ಕ್ರಿಮಿನಲ್ ಪ್ರಕರಣ ಆರ್ಥಿಕ ಮುಗ್ಗಟ್ಟಿನಂತಹ ಸಂಕಷ್ಟಗಳಿಗೆ ತುತ್ತಾಗಬೇಕಾಗುತ್ತದೆ. ಜೊತೆಗೆ ಕಾಯಿದೆ ಮುಖೇನ ರಾಜ್ಯಗಳ ಅಧಿಕಾರದಲ್ಲಿ ಕೇಂದ್ರ ಮೂಗು ತೂರಿಸಿದೆ ಏಕೆಂದರೆ ಬೆಟ್ಟಿಂಗ್ ಜೂಜಾಟ ಸಂವಿಧಾನದ ರಾಜ್ಯ ಪಟ್ಟಿಯಲ್ಲಿ ಬರುತ್ತವೆ ಎಂದು ಅದು ಹೇಳಿದೆ.
ಕಾಯಿದೆ ಸಂವಿಧಾನದ 14 (ಸಮಾನತೆ), 19 (ವ್ಯಾಪಾರ ಸ್ವಾತಂತ್ರ್ಯ ಸೇರಿ ಹಲವು ಸ್ವಾತಂತ್ರ್ಯಗಳು) ಮತ್ತು 21ನೇ ವಿಧಿಗಳನ್ನು (ಜೀವಿಸುವ ಹಕ್ಕು ಹಾಗೂ ಸ್ವಾತಂತ್ರ್ಯದ ಹಕ್ಕು) ಉಲ್ಲಂಘಿಸಲಿದೆ. ಕೌಶಲ್ಯದ ಆಧಾರಿತ ಆಟಗಳು ನಿಷೇಧಕ್ಕೆ ಒಳಗಾಗದಂತೆ ಕಾಯಿದೆಯನ್ನು ವ್ಯಾಖ್ಯಾನಿಸುವುದನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ಅದು ಮನವಿ ಮಾಡಿದೆ.
ಕರ್ನಾಟಕ ಹೈಕೋರ್ಟ್‌ನಲ್ಲಿಯೂ ಅರ್ಜಿ
ಕಾಯಿದೆ ಪ್ರಶ್ನಿಸಿ ಗೇಮಿಂಗ್ ವಲಯದ ಅತಿದೊಡ್ಡ ಸಂಸ್ಥೆ ಹೆಡ್ ಡಿಜಿಟಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಈಗಾಗಲೇ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. ಮಸೂದೆ ಜಾರಿಗೆ ಬಂದರೆ, ಕೌಶಲ್ಯದ ಆಟಗಳು ಮತ್ತು ಅವಕಾಶದ ಆಟಗಳ ನಡುವೆ ದೀರ್ಘಕಾಲದಿಂದ ಇದ್ದ ಕಾನೂನು ವ್ಯತ್ಯಾಸ ಇಲ್ಲವಾಗಿ ಹಣವನ್ನು ಪಣಕ್ಕಿಡುವ ಅಥವಾ ಆರ್ಥಿಕ ಲಾಭದ ನಿರೀಕ್ಷೆ ಒಳಗೊಂಡಿರುವ ಯಾವುದೇ ಆಟ ಕಾನೂನುಬಾಹಿರವಾಗುತ್ತದೆ ಎಂದು ಅದು ಪ್ರಮುಖವಾಗಿ ವಾದಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಇದೇ ಸೆಪ್ಟೆಂಬರ್ 8ರಂದು ನಡೆಯಲಿದೆ.