Punjab and Haryana High Court, PMLA
Punjab and Haryana High Court, PMLA 
ಸುದ್ದಿಗಳು

ಪಿಎಂಎಲ್ಎ ಆರೋಪಿಗೆ ಲಿಖಿತವಾಗಿ ಬಂಧನದ ಹಿನ್ನೆಲೆ ತಿಳಿಸಬೇಕೆಂಬ ಸುಪ್ರೀಂ ತೀರ್ಪು ಪೂರ್ವಾನ್ವಯ: ಪಂಜಾಬ್ ಹೈಕೋರ್ಟ್

Bar & Bench

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ಆರೋಪಿಗಳಿಗೆ ಬಂಧನದ ಹಿನ್ನೆಲೆಯನ್ನು ಜಾರಿ ನಿರ್ದೇಶನಾಲಯ ಲಿಖಿತವಾಗಿ ತಿಳಿಸಬೇಕು ಎಂದು ಎಂ3ಎಂ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪು ಪೂರ್ವಾನ್ವಯವಾಗುತ್ತದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಂಗಳವಾರ ತಿಳಿಸಿದೆ [ರೂಪ್ ಬನ್ಸಾಲ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಪಿಎಂಎಲ್‌ಎ ಪ್ರಕರಣಗಳಲ್ಲಿ ಬಂಧನದ ಲಿಖಿತ ಆಧಾರವನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುವಾಗ “ಇನ್ನು ಮುಂದೆ” ಎಂಬ ಪದ  ಬಳಸಿರುವುದರಿಂದ ಭವಿಷ್ಯದ ಬಂಧನಗಳಿಗೆ ಮಾತ್ರ ಈ ತೀರ್ಪು ಅನ್ವಯಿಸುತ್ತದೆ ಎಂಬ ಜಾರಿ ನಿರ್ದೇಶನಾಲಯದ (ಇ ಡಿ) ವಾದವನ್ನು ನ್ಯಾಯಮೂರ್ತಿ ಅರುಣ್ ಪಳ್ಳಿ ಮತ್ತು ವಿಕ್ರಮ್‌ ಅಗರ್‌ವಾಲ್‌ ಅವರಿದ್ದ ಪೀಠ ತಿರಸ್ಕರಿಸಿತು.

ಸುಪ್ರೀಂ ಕೋರ್ಟ್‌ ಅಕ್ಟೋಬರ್ 3 ರಂದು ರಿಯಾಲ್ಟಿ ಗ್ರೂಪ್ ಎಂ3ಎಂ ನಿರ್ದೇಶಕರಾದ ಬಸಂತ್ ಮತ್ತು ಪಂಕಜ್ ಬನ್ಸಾಲ್ ಅವರಿಗೆ ಜಾಮೀನು ನೀಡಿತ್ತು. ಆ ಸಂದರ್ಭದಲ್ಲಿ   “ಕಾಯಿದೆಯ ಸೆಕ್ಷನ್ 19 (1) ರ ಸಾಂವಿಧಾನಿಕ ಮತ್ತು ಶಾಸನಬದ್ಧ ಆದೇಶದ ನಿಜವಾಗಿಯೂ ಸಾಕಾರಗೊಳ್ಳಲು ಬಂಧಿತ ವ್ಯಕ್ತಿಗೆ ಬಂಧನದ ಕಾರಣವನ್ನು ಇನ್ನು ಮೇಲೆ ತಿಳಿಸಬೇಕಾಗುತ್ತದೆ. ಬಂಧನದ ಅಂತಹ ಲಿಖಿತ ಆಧಾರಗಳನ್ನು ಬಂಧಿತ ವ್ಯಕ್ತಿಗೆ ಸಹಜವಾಗಿ ಮತ್ತು ವಿನಾಯಿತಿ ಇಲ್ಲದೆ ಒದಗಿಸಬೇಕು” ಎಂದು ನುಡಿದಿತ್ತು.

ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಯೋಜಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಕಳೆದ ತಿಂಗಳು ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯಡಿ ತಮ್ಮ ಬಂಧನ ಪ್ರಶ್ನಿಸಿ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಮತ್ತು ಸುದ್ದಿತಾಣದ ಅಧಿಕಾರಿ ಅಮಿತ್ ಚಕ್ರವರ್ತಿ ಅವರು ಸಲ್ಲಿಸಿದ್ದ ಅರ್ಜಿ ವಿರೋಧಿಸಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈಗಾಗಲೇ ನಡೆದಿರುವ ಬಂಧನಕ್ಕೆ ಎಂ3ಎಂ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಅನ್ವಯವಾಗುವುದಿಲ್ಲ ಎಂದಿದ್ದರು.   

ತನ್ನ ಬಂಧನ ಪ್ರಶ್ನಿಸಿ ಎಂ ಎಂ3ಎಂನ ಮತ್ತೊಬ್ಬ ನಿರ್ದೇಶಕ ರೂಪ್‌ ಬನ್ಸಾಲ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಬಂಧನದ ಆಧಾರವನ್ನು "ಇನ್ನು ಮುಂದೆ" ಆರೋಪಿಗಳಿಗೆ ಲಿಖಿತವಾಗಿ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಆದೇಶವು ಕೇವಲ ಭವಿಷ್ಯದ ಪ್ರಕರಣಗಳಿಗೆ ಮಾತ್ರವೇ ಅನ್ವಯಿಸುವ ಉದ್ದೇಶವನ್ನು ಸುಪ್ರೀಂ ಕೋರ್ಟ್‌ ಹೊಂದಿದ್ದರೆ ಅದು ಪಂಕಜ್ ಬನ್ಸಾಲ್ ಮತ್ತು ಬಸಂತ್ ಬನ್ಸಾಲ್ ಬಂಧನ ಕಾನೂನುಬಾಹಿರ ಎಂದು ಹೇಳಿ ಆದೇಶ ಪೂರ್ವಾನ್ವಯವಾಗುವಂತೆ ಅವರನ್ನು ಬಿಡುಗಡೆಗೊಳಿಸುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿತು.