Karnataka HC and Train
Karnataka HC and Train 
ಸುದ್ದಿಗಳು

[ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ] ಹತ್ತು ವಾರಗಳಲ್ಲಿ ತೀರ್ಮಾನಿಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ಸೂಚನೆ

Bar & Bench

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಯಿಂದ ಪರಿಸರ ಮತ್ತು ವನ್ಯಜೀವಿಗಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ರಚಿಸಲಾಗಿರುವ ತಜ್ಞರ ಸಮಿತಿ ನೀಡುವ ವರದಿ ಆಧರಿಸಿ 10 ವಾರಗಳಲ್ಲಿ ತೀರ್ಮಾನ ಕೈಗೊಳ್ಳುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ (ಎನ್‌ಬಿಡಬ್ಲ್ಯುಎಲ್) ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

ಹುಬ್ಬಳ್ಳಿ ಹಾಗೂ ಅಂಕೋಲಾ ನಡುವೆ 164.44 ಕಿ ಮೀ ಉದ್ದದ ಬ್ರಾಡ್‌ಗೇಜ್ ರೈಲು ಮಾರ್ಗ ಯೋಜನೆ ಪ್ರಶ್ನಿಸಿ ಪ್ರಾಜೆಕ್ಟ್ ವೃಕ್ಷ ಫೌಂಡೇಷನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ ಬಿ ನರಗುಂದ್ ಅವರು “ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಯ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಲು ಪರಿಸರ ಸಚಿವಾಲಯ ತಜ್ಞರ ಸಮಿತಿಯೊಂದನ್ನು ರಚಿಸಿದೆ. ಆ ಸಮಿತಿಯು ಸಂಪೂರ್ಣ ಯೋಜನೆ ಪರಿಶೀಲಿಸಲಿದ್ದು, ಯೋಜನೆಗೆ ಸಂಬಂಧಿಸಿದ ವಿವಿಧ ವರದಿಗಳು ಹಾಗೂ ಪರಿಸರ ಮತ್ತು ವನ್ಯಜೀವಿಗಳ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಲಿದೆ. ಸಾರ್ವಜನಿಕರು ಹಾಗೂ ವಿವಿಧ ಎನ್‌ಜಿಒಗಳ ಅಹವಾಲುಗಳನ್ನೂ ಆಲಿಸಿ, ವರದಿ ನೀಡಲಿದೆ. ಅದನ್ನು ಆಧರಿಸಿ ಎನ್‌ಬಿಡಬ್ಲ್ಯುಎಲ್‌ ನಿರ್ಧಾರ ಕೈಗೊಳ್ಳಲಿದ್ದು, ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು” ಎಂದರು.

ಇದಕ್ಕೆ ಪೀಠವು “ಯಾವುದೇ ಸಮಿತಿಯ ವರದಿ ನಮಗೆ ಅಗತ್ಯವಿಲ್ಲ. ಯೋಜನೆಯ ಬಗ್ಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಪಷ್ಟ ನಿಲುವು ಏನೆನ್ನುವುದಷ್ಟೇ ಮುಖ್ಯ. ಯೋಜನೆಯಿಂದ ಪರಿಸರ ಮತ್ತು ವನ್ಯಜೀವಿಗಳ ಮೇಲೆ ಉಂಟಾಗುವ ಪರಿಣಾಮದ ಕುರಿತು ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳುವಂತೆ ಎನ್‌ಬಿಡಬ್ಲ್ಯುಎಲ್‌ಗೆ ಹೈಕೋರ್ಟ್ ನಿರ್ದೇಶಿಸಿದೆ. ಆದರೆ, ಈವರೆಗೂ ಆ ಕೆಲಸವಾಗಿಲ್ಲ. ಯೋಜನೆಯ ಕುರಿತು ನಿರ್ಧಾರ ಕೈಗೊಳ್ಳಲು ಮಂಡಳಿಗೆ ಇರುವ ಸಮಸ್ಯೆ ಏನು ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ. ಯೋಜನೆಯನ್ನು ಯಾವಾಗ ಆರಂಭಿಸಬೇಕೆಂದುಕೊಂಡಿದ್ದೀರಿ, 5 ವರ್ಷ ಕಳೆದ ನಂತರವೇ? ಅಭಿವೃದ್ಧಿ ದೃಷ್ಟಿಯಿಂದ ಈ ಯೋಜನೆ ಪ್ರಮುಖವಾಗಿದೆ ಎಂದು ನೀವೇ ಹೇಳಿದ್ದಿರಿ. ಆದರೆ, ಈಗ ನೀವಾಗಿಯೇ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದೀರಿ” ಎಂದು ಬೇಸರ ವ್ಯಕ್ತಪಡಿಸಿತು.

ಅಂತಿಮವಾಗಿ ಪೀಠವು ಯೋಜನೆಯ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಲು ಪರಿಸರ ಹಾಗೂ ವನ್ಯಜೀವಿ ತಜ್ಞರನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂಬ ಪ್ರತಿವಾದಿಗಳ ಹೇಳಿಕೆಯನ್ನು ಪರಿಗಣಿಸಿ ವಿಚಾರಣೆಯನ್ನು 10 ವಾರ ಮುಂದೂಡಲಾಗುತ್ತಿದೆ. ಅಷ್ಟರೊಳಗೆ ಸಮಿತಿಯು ತನ್ನ ಕೆಲಸವನ್ನು ಪೂರ್ಣಗೊಳಿಸಿ, ಎನ್‌ಬಿಡಬ್ಲ್ಯುಎಲ್‌ಗೆ ವರದಿ ಸಲ್ಲಿಸಬೇಕು. ಆ ವರದಿಯ ಆಧಾರದಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರ್ಧಾರ ಕೈಗೊಂಡು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.