Ernakulam JFCM 8 
ಸುದ್ದಿಗಳು

ನರಬಲಿ ಪ್ರಕರಣ: ಆರೋಪಿ ಲೈಲಾ ಭಗವಾಲ್ ಸಿಂಗ್‌ಗೆ ಜಾಮೀನು ನಿರಾಕರಿಸಿದ ಕೇರಳ ಮ್ಯಾಜಿಸ್ಟ್ರೇಟ್ ನ್ಯಾಯಾಲಯ

ಇದೊಂದು ವ್ಯವಸ್ಥಿತ ರೀತಿಯಲ್ಲಿ ಹೆಣೆದ, ಎಣೆಯಿಲ್ಲದಂತಹ ಅಪರಾಧವಾಗಿದ್ದು ಸಂಪೂರ್ಣ ತನಿಖೆಯ ಅಗತ್ಯವಿದೆ ಎಂಬ ಪ್ರಾಸಿಕ್ಯೂಷನ್ ವಾದದಲ್ಲಿ ಹುರುಳಿದೆ ಎಂಬುದಾಗಿ ಎರ್ನಾಕುಲಂ ನ್ಯಾಯಾಲಯ ತಿಳಿಸಿತು.

Bar & Bench

ದೇಶದೆಲ್ಲೆಡೆ ಆಘಾತ ಉಂಟು ಮಾಡಿದ್ದ ಕೇರಳ ನರಬಲಿ ಪ್ರಕರಣದ ಆರೋಪಿಗಳಲ್ಲಿ ಒಬ್ಬಳಾದ ಲೈಲಾ ಭಗವಾಲ್ ಸಿಂಗ್‌ಗೆ ಜಾಮೀನು ನೀಡಲು ಕೇರಳ ನ್ಯಾಯಾಲಯ ಬುಧವಾರ ನಿರಾಕರಿಸಿದೆ [ಲೈಲಾ ಭಗವಾಲ್ ಸಿಂಗ್ ಮತ್ತು   ಕಡವಂತ್ರದ ಪೊಲೀಸ್‌ ಇನ್‌ಸ್ಪೆಕ್ಟರ್‌ ಅವರ ಮೂಲಕ ಸರ್ಕಾರದ ನಡುವಣ ಪ್ರಕರಣ].

ಇದೊಂದು ವ್ಯವಸ್ಥಿತ ರೀತಿಯಲ್ಲಿ ಹೆಣೆದ, ಎಲ್ಲಿಯೂ ಕಾಣದಂತಹ ಅಪರಾಧವಾಗಿದ್ದು ಸಂಪೂರ್ಣ ತನಿಖೆಯ ಅಗತ್ಯವಿದೆ ಎಂಬ ಪ್ರಾಸಿಕ್ಯೂಷನ್‌ ವಾದದಲ್ಲಿ ಹುರುಳಿದೆ ಎಂಬುದಾಗಿ ಎರ್ನಾಕುಲಂ ನ್ಯಾಯಾಲಯದ VIIIನೇ ಜ್ಯುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್‌ ಎಲ್ಡೋಸ್‌ ಮ್ಯಾಥ್ಯೂ ತಿಳಿಸಿದರು.

"ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದ್ದು ಆರೋಪಿ ಜಾಮೀನಿನ ಮೇಲೆ ಬಿಡುಗಡೆಗೊಂಡರೆ, ತನಿಖೆಯ ಪ್ರಗತಿ ಮೇಲೆ ಪರಿಣಾಮ ಉಂಟಾಗುತ್ತದೆ. ಸಾಕ್ಷಿಗಳನ್ನು ಬೆದರಿಸುವ, ಸಾಕ್ಷ್ಯ ತಿರುಚುವ ಮತ್ತು ತಲೆಮರೆಸಿಕೊಳ್ಳುವ ಸಾಧ್ಯತೆಗಳೂ ಇವೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪೊಲೀಸರಿಗೆ ತನ್ನ ವಿರುದ್ಧ ದೋಷಾರೋಪಣೆ ಮಾಡುವಂತಹ ಯಾವುದೇ ಸಾಕ್ಷ್ಯಗಳು ಕಂಡುಬಂದಿಲ್ಲ ಎಂದು ವಕೀಲ ಬಿ.ಎ. ಅಲೂರ್ ಅವರ ಮೂಲಕ ಲೈಲಾ ಸಲ್ಲಿಸಿದ್ದ ಜಾಮೀನು ಅರ್ಜಿಯಲ್ಲಿ ವಾದಿಸಲಾಗಿತ್ತು. ತಾನು ಯಾವುದೇ ಅಪರಾಧ ಹಿನ್ನೆಲೆ ಇರದ ಮಹಿಳೆ ಎಂಬ ಅಂಶವನ್ನು ಪರಿಗಣಿಸಿ ಜಾಮೀನು ನೀಡಬಹುದು ಎಂದು ಕೋರಲಾಗಿತ್ತು.

ಮತ್ತೊಂದೆಡೆ, ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಅನೀಶ್ ಎಂ ಸಿ ಅವರು “ತನಿಖಾಧಿಕಾರಿ ಸಲ್ಲಿಸಿದ ವರದಿಯಲ್ಲಿ ಲೈಲಾ ನರಬಲಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ.  ಅರ್ಜಿದಾರೆಯೇ ರಕ್ತ ಸಂಗ್ರಹಿಸುವ ಸಲುವಾಗಿ ಮೊದಲ ನರಬಲಿಗೆ ತುತ್ತಾದ ಮಹಿಳೆಯ ಕುತ್ತಿಗೆ ಸೀಳಿದ್ದಳು ಎನ್ನಲಾಗಿದೆ. ಎರಡನೇ ಕೊಲೆಯಲ್ಲೂ ಆಕೆ ಸಕ್ರಿಯವಾಗಿ ಭಾಗವಹಿಸಿದ್ದಳು” ಎಂದು ವಾದ ಮಂಡಿಸಿದ್ದರು.

ಅಪರಾಧದ ಘೋರ ಸ್ವರೂಪ ಮತ್ತು ತನಿಖೆಯ ಹಂತವನ್ನು ಪರಿಗಣಿಸಿದ ನ್ಯಾಯಾಧೀಶರು, ಲೈಲಾ ಮಹಿಳೆ ಎಂಬ ಕಾರಣಕ್ಕೆ ಜಾಮೀನು ಪಡೆಯಲು ಅರ್ಹಳಲ್ಲ ಎಂದು ನಿರ್ಣಯಿಸಿದರು.

ಹಿನ್ನೆಲೆ

ಕಳೆದ ಅಕ್ಟೋಬರ್‌ನಲ್ಲಿ ಪಟ್ಟಣಂತಿಟ್ಟ ಜಿಲ್ಲೆಯ ತಿರುವಳ್ಳದಲ್ಲಿ ಇಬ್ಬರು ಮಹಿಳೆಯರ ದೇಹಗಳು ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ರಾಜ್ಯದಲ್ಲಿ ನರಬಲಿ ನಡೆದ ಸುದ್ದಿ ಬೆಳಕಿಗೆ ಬಂದಿತ್ತು. ನಾಪತ್ತೆಯಾದ ಇಬ್ಬರು ಮಹಿಳೆಯರ ಕುರಿತು ಪೊಲೀಸರು ಕೈಗೊಂಡ ತನಿಖೆಯಿಂದಾಗಿ ನರಬಲಿ ಘಟನೆ ಪತ್ತೆಯಾಗಿತ್ತು.ಎರ್ನಾಕುಲಂ ಜಿಲ್ಲೆಯಲ್ಲಿ ಲಾಟರಿ ಟಿಕೆಟ್ ಮಾರಾಟಗಾರರಾಗಿದ್ದ ಮಹಿಳೆಯರನ್ನು ಹತ್ಯೆಗೈದ ಆರೋಪದಲ್ಲಿ ಮೂವರನ್ನು ಅದೇ ವಾರ ಬಂಧಿಸಲಾಗಿತ್ತು.

ಅಪಹರಣಕ್ಕೆ ವ್ಯವಸ್ಥೆ ಮಾಡಿದ ಮತ್ತು ನರಬಲಿ ಕೃತ್ಯ ಎಸಗಿದ ಆರೋಪದ ಮೇಲೆ ಪೊಲೀಸರು ಮಹಮ್ಮದ್ ಶಫಿ ಎಂಬಾತನನ್ನು ಬಂಧಿಸಿದ್ದರು. ಜೊತೆಗೆ ನರಬಲಿಗೆ ಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾದ ಶಂಕೆ ಮೇರೆಗೆ ದಂಪತಿಗಳಾದ ಭಗವಾಲ್ ಸಿಂಗ್ ಮತ್ತು ಲೈಲಾ ಭಗವಾಲ್ ಸಿಂಗ್ ಅವರನ್ನು ಬಂಧಿಸಲಾಗಿತ್ತು.