ನರಬಲಿಗಾಗಿ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೇರಳ ಹೈಕೋರ್ಟ್ ಆಘಾತ ವ್ಯಕ್ತಪಡಿಸಿದ್ದು ಇದು ನಂಬಲಸಾಧ್ಯವಾದ ಘಟನೆ ಎಂದಿದೆ.
"ಕೇರಳದಲ್ಲಿ ನರಬಲಿ ಬಗ್ಗೆ ಕೇಳುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ" ಎಂದು ನ್ಯಾ. ದೇವನ್ ರಾಮಚಂದ್ರನ್ ಹೇಳಿದ್ದಾರೆ. ನಾಪತ್ತೆಯಾದ ಇಬ್ಬರು ಮಹಿಳೆಯರ ತನಿಖೆಯ ಸುದ್ದಿಯನ್ನು ಉಲ್ಲೇಖಿಸಿದ ನ್ಯಾಯಮೂರ್ತಿಗಳು ನರಬಲಿ ಕುರಿತಂತೆ ಪೊಲೀಸರ ಗಮನ ಸೆಳೆದರು.
ಎರ್ನಾಕುಲಂನಲ್ಲಿ ಲಾಟರಿ ಮಾರಾಟ ಮಾಡುತ್ತಿದ್ದ ಇಬ್ಬರೂ ಮಹಿಳೆಯರಿಗೆ ಯಾವುದೇ ಕುಟುಂಬ ಇರಲಿಲ್ಲ. ಇವರು ಜೂನ್ ಮತ್ತು ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದರು. ನರಬಲಿಗಾಗಿ ಈ ಮಹಿಳೆಯರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದ್ದು ಕೃತ್ಯಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಮಧ್ಯಾಹ್ನ ನ್ಯಾಯಾಲಯ ಕಲಾಪದ ವೇಳೆ ಅಲ್ಲಿ ಸೇರಿದ್ದ ವಕೀಲರನ್ನು ಉದ್ದೇಶಿಸಿ ನ್ಯಾ. ರಾಮಚಂದ್ರನ್ ಅವರು "ಇಲ್ಲಿ ನಡೆಯುತ್ತಿರುವ ಕೆಲ ಸಂಗತಿಗಳು ಅಸಂಬದ್ಧತೆಯ ಎಲ್ಲೆ ಮೀರುತ್ತಿವೆ. ಇಂದು ನರಬಲಿ ನಡೆದಿದೆ. ಕೇರಳ ಎತ್ತ ಸಾಗುತ್ತಿದೆ ಎಂದು ಆಶ್ಚರ್ಯವಾಗುತ್ತಿದೆ. ನಾನು ಊಟದ ಸಮಯದಲ್ಲಿ ಚೇಂಬರ್‌ನಲ್ಲಿ ಈ ನರಬಲಿ ಪ್ರಕರಣದ ಬಗ್ಗೆ ಕೇಳಿದೆ. ಇದು ಈಗ ಕೇರಳವಾಗಿದೆಯೇ?" ಎಂದು ಮೌಖಿಕವಾಗಿ ತಿಳಿಸಿದರು.
"ಆಧುನಿಕರಾಗುವ ಹಾದಿಯಲ್ಲಿ ನಾವು ಎಲ್ಲೋ ದಿಕ್ಕುತಪ್ಪುತ್ತಿದ್ದೇವೆ. ಜನರು ಈಗ ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಹೊಸ ತಲೆಮಾರು ಇದನ್ನೆಲ್ಲ ನೋಡುತ್ತಲೇ ಬೆಳೆಯುತ್ತಿದೆ. ನನ್ನ 54 ವರ್ಷಗಳ ಅನುಭವದಲ್ಲಿ ನಾನು ಈ ರೀತಿಯದ್ದನ್ನು ಕೇಳಿಲ್ಲ" ಎಂದು ಅವರು ಬೇಸರ ವ್ಯಕ್ತಪಡಿಸಿದರು.