ಮುಸ್ಲಿಮ್ ಮಹಿಳೆಯರ ಅವಹೇಳನ ಮತ್ತು ಧಾರ್ಮಿಕ ದ್ವೇಷ ಬಿತ್ತುವ ಭಾಷಣ ಮಾಡಿದ ಆರೋಪಕ್ಕೆ ಗುರಿಯಾಗಿರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಗಂಭೀರ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಶ್ರೀರಂಗಪಟ್ಟಣ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅಲ್ಲದೇ, ತನಿಖಾಧಿಕಾರಿಗಳು ಪ್ರಭಾಕರ್ ಭಟ್ ಅವರನ್ನು ತನಿಖೆಗೆ ಒಳಪಡಿಸಲು ಸ್ವತಂತ್ರರಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಪ್ರಭಾಕರ್ ಭಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೋಪಾಲ ಕೃಷ್ಣ ರೈ ಟಿ ಅವರು ವಿಚಾರಣೆ ನಡೆಸಿದರು.
“ಅರ್ಜಿದಾರರು ಬಂಧನ ಭೀತಿ ಎದುರಿಸುತ್ತಿದ್ದು, ಮಧ್ಯಂತರ ಕ್ರಮದ ಭಾಗವಾಗಿ ನ್ಯಾಯದಾನ ಅಗತ್ಯತೆಯ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ನೀಡುವುದು ಅಗತ್ಯವಾಗಿದೆ. ಒಂದೊಮ್ಮೆ ಭಟ್ ಅವರನ್ನು ಬಂಧಿಸಿದರೆ ಪ್ರತಿವಾದಿ ಪೊಲೀಸರು ಅರ್ಜಿದಾರರಿಂದ 2 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತೆ ಪಡೆದು ಬಿಡುಗಡೆ ಮಾಡಬೇಕು. ಸಿಆರ್‌ಪಿಸಿಯ ಸೂಕ್ತ ನಿಬಂಧನೆಗಳ ಅಡಿ ತನಿಖಾಧಿಕಾರಿಯು ಆರೋಪಿಯನ್ನು ತನಿಖೆಗೆ ಒಳಪಡಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಸಾಮಾನ್ಯ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
“ಮಂಗಳೂರಿನ ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿನ ಡಿಸ್ಚಾರ್ಜ್ ಸಾರಾಂಶದಲ್ಲಿ ಅರ್ಜಿದಾರರು ಕಾರ್ಡಿಯೊ ಥೋರಾಸಿಸ್ ಮತ್ತು ವಾಸ್ಕ್ಯುಲರ್ ಸರ್ಜರಿಗೆ ಒಳಗಾಗಿದ್ದಾರೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
"ನಜ್ಮಾ ನಜೀರ್ ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಭಾಕರ್ ಭಟ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ಭಟ್ ವಿರುದ್ಧ ದಾಖಲಾಗಿರುವ ಪ್ರಕರಣವು ಜಾಮೀನುರಹಿತವಾಗಿದೆ. ಅರ್ಜಿದಾರರನ್ನು ಶ್ರೀರಂಗಪಟ್ಟಣ ಪೊಲೀಸರು ಬಂಧಿಸಲು ಯತ್ನಿಸುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಈ ಆತಂಕ ನಂಬದಿರಲು ಸಾಧ್ಯವಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿಗೆ ಸರ್ಕಾರಿ ಅಭಿಯೋಜಕರು ಮೌಖಿಕವಾಗಿ ಆಕ್ಷೇಪಿಸಿದ್ದಾರೆ. ಅರ್ಜಿದಾರರು ವಯೋಸಹಜ ಕಾಯಿಲೆಯಿಂದ ಬಳಲುತಿದ್ದು, ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಲು ಸಿದ್ಧರಾಗಿದ್ದಾರೆ" ಎಂದು ಆದೇಶದಲ್ಲಿ ದಾಖಲಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಹನುಮ ಜಯಂತ್ಯುತ್ಸವ ಅಂಗವಾಗಿ ಡಿಸೆಂಬರ್ 24ರಂದು ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆಯು ಆಯೋಜಿಸಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಪ್ರಭಾಕರ್ ಭಟ್ ಮುಸ್ಲಿಮರ ವಿರುದ್ಧ ಧಾರ್ಮಿಕ ದ್ವೇಷಕಾರಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್ ನೀಡಿದ್ದ ದೂರಿನ ಅನ್ವಯ ಶ್ರೀರಂಗಪಟ್ಟಣ ಟೌನ್ ಠಾಣೆಯ ಪೊಲೀಸರು ಪ್ರಭಾಕರ್ ಭಟ್ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಮಾತುಗಳನ್ನು ಆಡುವುದು), 509 (ಮಹಿಳೆಯ ಖಾಸಗಿತನಕ್ಕೆ ಸಂಬಂಧಿಸಿದ ಮಾತುಗಳನ್ನಾಡುವುದು), 153ಎ (ಧರ್ಮದ ಆಧಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಹರಡುವುದು) ಮತ್ತು 298 (ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿದ್ದಾರೆ.