ತಮ್ಮ ದಿವಂಗತ ಪತಿ ಸಂಜಯ್ ಕಪೂರ್ ಅವರು ತಮಗೆ ಆಸ್ತಿ ನೀಡಿರುವ ಬಗ್ಗೆ ಯಾವುದೇ ಅನುಮಾನ ಪಡುವಂಥದ್ದು ಏನೂ ಇಲ್ಲ, ಏಕೆಂದರೆ ಇದು ಸಂಜಯ್ ಅವರ ಕುಟುಂಬದಲ್ಲಿ ಅನೂಚಾನವಾಗಿ ನಡೆದುಕೊಂದು ಬಂದಿರುವ ಸಂಪ್ರದಾಯ ಎಂದು ಅವರ ಮೂರನೇ ಪತ್ನಿ ಪ್ರಿಯಾ ಸಚ್‌ದೇವ್ ಕಪೂರ್ ದೆಹಲಿ ಹೈಕೋರ್ಟ್‌ನಲ್ಲಿ ಗುರುವಾರ ವಾದಿಸಿದರು.
ಸಂಜಯ್ ಕಪೂರ್ ಅವರ ತಂದೆ ಕೂಡ ತಮ್ಮ ಆಸ್ತಿಯನ್ನು ತಮ್ಮ ಪತ್ನಿಗೆ ನೀಡಿದ್ದಾರೆ ಎಂದು ಕಪೂರ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ನಾಯರ್ , ಹೇಳಿದರು.
ಸಾಕ್ಷಿಗಳು ಮತ್ತು ವಿಲ್ ಬರೆದವರ ನಡುವಿನ ಇಮೇಲ್‌ಗಳನ್ನು ಕರಿಷ್ಮಾ ಪರ ವಕೀಲರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿರುವುದರಿಂದ ಸಂಜಯ್ ಕಪೂರ್ ಅವರ ಉಯಿಲಿನ ಬಗ್ಗೆ ಕರಿಷ್ಮಾ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಅವರು ವಿವರಿಸಿದರು.
ತಮ್ಮ ಮಲತಾಯಿ ಪ್ರಿಯಾ ಕಪೂರ್ ಅವರು, ಸಂಜಯ್ ಕಪೂರ್ ಅವರ ಉಯಿಲು ಫೋರ್ಜರಿ ಮಾಡಿ ಆಸ್ತಿಗಳನ್ನುಸಂಪೂರ್ಣ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಕರಿಷ್ಮಾ ಕಪೂರ್ ಮಕ್ಕಳು ಆರೋಪಿಸಿದ್ದ ಪ್ರಕರಣದ ವಿಚಾರಣೆ ನ್ಯಾ. ಜ್ಯೋತಿ ಸಿಂಗ್ ಅವರಿದ್ದ ಪೀಠದೆದುರು ನಡೆಯಿತು.
ಕರಿಷ್ಮಾಕಪೂರ್ ಸಂಜಯ್ ಅವರನ್ನು 2003ರಲ್ಲಿ ವರಿಸಿದ್ದರು. 2016ರಲ್ಲಿ ಅವರು ವಿಚ್ಛೇದನ ಪಡೆಯುವ ಮೂಲಕ 13 ವರ್ಷಗಳ ದಾಂಪತ್ಯ ಅಂತ್ಯಗೊಂಡಿತ್ತು. ಕಳೆದ ಜೂನ್‌ನಲ್ಲಿ ಸಂಜಯ್ ಇಂಗ್ಲೆಂಡ್‌ನಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದು ಆ ಬಳಿಕ ಸಂಜಯ್ ಅವರ ಮನೆಯಿಂದ ಪ್ರಿಯಾ ಕಪೂರ್ ನಮ್ಮನ್ನು ಅಕ್ರಮವಾಗಿ ಹೊರಗಟ್ಟಿದ್ದಾರೆ. ಎಂದು ಕರಿಷ್ಮಾ ಅವರ ಅಪ್ರಾಪ್ತ ಮಕ್ಕಳು ತಮ್ಮ ತಾಯಿಯ ಮುಖೇನ ನ್ಯಾಯಾಲಯದ ಮೊರೆ ಹೋಗಿದ್ದರು.
ಸಂಜಯ್ ಕಪೂರ್ ಅವರ ಸಂಪೂರ್ಣ ವೈಯಕ್ತಿಕ ಆಸ್ತಿ ಪ್ರಿಯಾ ಸಚ್‌ದೇವ್ ಕಪೂರ್ ಅವರಿಗೆ ಸೇರಿದ್ದು ಎಂದು ಮಾರ್ಚ್ 21, 2025ರಂದು ಬರೆದ ಉಯಿಲಿನಲ್ಲಿ ತಿಳಿಸಲಾಗಿತ್ತು. ಕಪೂರ್ ಅವರ ಮರಣದ ನಂತರ ಉಯಿಲಿಗೆ ಸಾಕ್ಷಿಯಾಗಿರುವ ಇಬ್ಬರು ವ್ಯಕ್ತಿಗಳು ಆರ್ಥಿಕ ಲಾಭ ಪಡೆದಿದ್ದಾರೆ ಎಂದು ಕರಿಷ್ಮಾ ವಾದಿಸಿದ್ದರು.
ಇದನ್ನು ಪ್ರಶ್ನಿಸಿದ ಪ್ರಿಯಾ ಅವರು, ಸಾಕ್ಷಿಗಳು ಆಗಲೂ ಉದ್ಯೋಗಿಗಳಾಗಿದ್ದರು. ಈಗಲೂ ಉದ್ಯೋಗಿಗಳಾಗಿ ಮುಂದುವರೆದಿದ್ದಾರೆ. ಯಾವುದೇ ಲಾಭಕ್ಕಾಗಿ ಹೀಗೆ ಮಾಡಿಲ್ಲ ಎಂದರು.
ಉಯಿಲಿಗೆ ಸಂಜಯ್ ಕಪೂರ್ ಸಹಿ ಮಾಡಿಲ್ಲ ಎಂಬ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಿಯಾ ಪರ ವಕೀಲರು ಕಣ್ಣಿಲ್ಲದವರಿಗೂ ಸಹ ಸಹಿ ಮಾಡಿರುವುದು ತಿಳಿಯುತ್ತದೆ ಎಂದು ಹೇಳಿದರು.
ಸಂಜಯ್ ಕಪೂರ್ ಮತ್ತು ಪ್ರಿಯಾ ಕಪೂರ್ ಇಬ್ಬರೂ ಒಂದೇ ದಿನ ತಮ್ಮ ವಿಲ್‌ಗಳನ್ನು ಕಾರ್ಯಗತಗೊಳಿಸಿದ್ದಾರೆ. ಈ ದಾಖಲೆಗಳ ನೋಂದಣಿ ಕಡ್ಡಾಯವಲ್ಲ ಎಂದು ಅವರು ಹೇಳಿದರು. ಇಂದು ಕೂಡ ಹೈಕೋರ್ಟ್ ವಾದ ಆಲಿಸಲಿದೆ.