virtual hearings 
ಸುದ್ದಿಗಳು

ಕೋವಿಡ್ ಉಲ್ಬಣ: ಹೈಬ್ರಿಡ್ ವಿಚಾರಣೆಗೆ ಅವಕಾಶ ನೀಡಲು ಸೂಚಿಸಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಸಿಜೆಐ ಪತ್ರ

ಕಳೆದ ತಿಂಗಳು ನವದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಾಧ್ಯವಾದರೆ ವರ್ಚುವಲ್ ವಿಧಾನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ವಕೀಲರಿಗೆ ಸಲಹೆ ನೀಡಿತ್ತು.

Bar & Bench

ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿ ಹೈಬ್ರಿಡ್ ವಿಚಾರಣೆಗೆ ಅವಕಾಶ ನೀಡುವಂತೆ ಕೋರಿ ದೇಶದೆಲ್ಲೆಡೆಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವುದಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಗುರುವಾರ ಹೇಳಿದ್ದಾರೆ.

ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠದೆದುರು ವಕೀಲ ಸಿದ್ಧಾರ್ಥ್ ಗುಪ್ತಾ ಅವರು ಭೌತಿಕ ವಿಚಾರಣೆಗೆ ಮಾತ್ರ ಅನುಮತಿ ಇರುವ ನ್ಯಾಯಾಲಯಗಳಲ್ಲಿ ವರ್ಚುವಲ್ ವಿಚಾರಣೆಯ ಅಗತ್ಯವನ್ನು ಪ್ರಸ್ತಾಪಿಸಿದರು.

ಆಗ ಸಿಜೆಐ “ನಾನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದೇನೆ, ನಾಳೆ ಒಡಿಶಾದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಮಿತಿಯಲ್ಲಿರುವ ನ್ಯಾಯಮೂರ್ತಿಗಳನ್ನು ಭೇಟಿ ಮಾಡುತ್ತಿದ್ದೇನೆ. ನಾವು ಮಾತನಾಡದ ಹಲವು ವಿಷಯಗಳಿವೆ. ಅಂತಹ ವಿಷಯಗಳನ್ನು ಅಲ್ಲಿ ಚರ್ಚಿಸುತ್ತೇವೆ" ಎಂದರು.

ವರ್ಚುವಲ್‌ ವಿಧಾನದಲ್ಲಿ ಅಂದರೆ ವೀಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯದ ವಿಚಾರಣೆಗಳಲ್ಲಿ ಭಾಗವಹಿಸುವ ಹಕ್ಕನ್ನು ಸಂವಿಧಾನದ 19(1)(1) (ಎ) ಮತ್ತು (ಜಿ) ವಿಧಿಯಡಿ ಮೂಲಭೂತ ಹಕ್ಕು ಎಂದು ಘೋಷಿಸುವಂತೆ ಕೋರಿ ದೇಶಾದ್ಯಂತ 5,000ಕ್ಕೂ ಹೆಚ್ಚು ವಕೀಲರನ್ನು ಒಳಗೊಂಡಿರುವ ಸಂಸ್ಥೆಯಾದ ಆಲ್ ಇಂಡಿಯಾ ಜ್ಯೂರಿಸ್ಟ್ಸ್ ಅಸೋಸಿಯೇಷನ್ ಸಲ್ಲಿಸಿದ ಮನವಿಯನ್ನು ಗುಪ್ತಾ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.  

ಕಳೆದ ತಿಂಗಳು ನವದೆಹಲಿಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಾಧ್ಯವಾದರೆ ವರ್ಚುವಲ್‌ ವಿಧಾನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್‌ ವಕೀಲರಿಗೆ ಸಲಹೆ ನೀಡಿತ್ತು.   

ತಮಿಳುನಾಡಿನೆಲ್ಲೆಡೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಏಪ್ರಿಲ್ 10ರಿಂದ ಹೈಬ್ರಿಡ್ ವಿಧಾನದ ಮೂಲಕ ವಿಚಾರಣೆ ನಡೆಸಲು ಮದ್ರಾಸ್ ಹೈಕೋರ್ಟ್ ನಿರ್ಧರಿಸಿತ್ತು. ಅಂತೆಯೇ ತೆಲಂಗಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯ ಕೊಠಡಿಯಲ್ಲಿ ಹೈಬ್ರಿಡ್‌ ವಿಧಾನದಲ್ಲಿ ಕಲಾಪ ನಡೆಯುತ್ತಿದೆ.