ಕೋವಿಡ್‌ ಕರ್ತವ್ಯಕ್ಕೆ ನಿಯೋಜನೆ: ಪ್ರೋತ್ಸಾಹ ಧನ ಬಿಡುಗಡೆಗೆ 151 ಎಂಬಿಬಿಎಸ್‌ ವಿದ್ಯಾರ್ಥಿಗಳಿಂದ ಹೈಕೋರ್ಟ್‌ಗೆ ಅರ್ಜಿ

ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯ 151 ವಿದ್ಯಾರ್ಥಿಗಳಿಗೆ 2021ರ ಮೇ-ಜುಲೈ ಅವಧಿಗೆ ಸಂಬಂಧಿಸಿದಂತೆ ತಲಾ 20 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.
Karnataka HC, COVID-19
Karnataka HC, COVID-19

ಕೊರೊನಾ ಎರಡನೇ ಅಲೆಯಲ್ಲಿ ಎಂಬಿಬಿಎಸ್‌ ಅಂತಿಮ ವರ್ಷದ 151 ವಿದ್ಯಾರ್ಥಿಗಳು ಮೂರು ತಿಂಗಳು ಮಾಡಿರುವ ಸೇವೆಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರಿನ ಲಕ್ಷ್ಮಿ ಅವಿನಾಶ ಎನ್‌, ತುಮಕೂರಿನ ಎಲ್‌ ವಿಕಾಸ್‌ ಮತ್ತು ಚಿತ್ರದುರ್ಗದ ಎಂ ಅಜಯ್‌ ಅವರು ತಮ್ಮನ್ನೂ ಒಳಗೊಂಡು ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯ 151 ವಿದ್ಯಾರ್ಥಿಗಳಿಗೆ 2021ರ ಮೇ-ಜುಲೈ ಅವಧಿಯಲ್ಲಿ ತಲಾ 20 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಕೋವಿಡ್‌ ಸಾಂಕ್ರಾಮಿಕವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾನವ ಸಂಪನ್ಮೂಲ ಬಳಕೆ ಮಾಡಿಕೊಳ್ಳುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 2021ರ ಮೇ 3ರಂದು ಅಧಿಕೃತ ಆದೇಶ ಮಾಡಿತ್ತು. ಎಂಬಿಬಿಎಸ್‌ ಅಂತಿಮ ವರ್ಷದ ವಿದ್ಯಾರ್ಥಿಗಳ ಸೇವೆಯನ್ನು ಕೋವಿಡ್‌ ಕರ್ತವ್ಯಕ್ಕೆ ನಿಯೋಜಿಸುವ ಮೂಲಕ ಬಳಕೆ ಮಾಡಿಕೊಂಡು ಅದಕ್ಕೆ ಪ್ರತಿಯಾಗಿ ಅವರಿಗೆ ಪ್ರೋತ್ಸಾಹ ಧನ ನೀಡಬೇಕು ಎಂದು ಹೇಳಲಾಗಿತ್ತು.

ಇದರ ಭಾಗವಾಗಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು 2021 ರ ಮಾರ್ಚ್‌ 20ರಂದು ಸರ್ಕಾರಿ ವೈದ್ಯಕೀಯ ಸಂಸ್ಥೆಗಳು ಮತ್ತು ದಂತ ವಿಜ್ಞಾನ ಸಂಸ್ಥೆಗಳಿಗೆ ಪತ್ರ ಬರೆದು ಪದವಿ ಮತ್ತು ಸ್ನಾತಕೋತ್ತರ ಎಂಬಿಬಿಎಸ್‌ ವಿದ್ಯಾರ್ಥಿಗಳ ಸೇವೆಯನ್ನು ಕೋವಿಡ್‌ ಎರಡನೇ ಅಲೆ ತಡೆಯಲು ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿತ್ತು. ಇದರ ಭಾಗವಾಗಿ ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯು 151 ಎಂಬಿಬಿಎಸ್‌ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೋವಿಡ್‌ ಕರ್ತವ್ಯಕ್ಕೆ ನಿಯೋಜಿಸಿತ್ತು.

Lawyers Prateek Chandramouli and Vidyashree K S
Lawyers Prateek Chandramouli and Vidyashree K S

ಕೋವಿಡ್‌ ಕರ್ತವ್ಯ ಮಾಡಿದ್ದ ಜೂನಿಯರ್‌ ಮತ್ತು ಸೀನಿಯರ್‌ ರೆಸಿಡೆಂಟ್‌, ಸ್ನಾತಕೋತ್ತರ ಮತ್ತು ಇಂಟರ್ನ್‌ಗಳಿಗೆ 2021ರ ಮೇ 15ರಂದು ಮತ್ತು ಜಿಎನ್‌ಎಂ/ಬಿಎಸ್‌ಸಿ ಅಂತಿಮ ವರ್ಷದ ನರ್ಸಿಂಗ್‌ ವಿದ್ಯಾರ್ಥಿಗಳು ಮತ್ತು ನರ್ಸಿಂಗ್‌ ಅಧಿಕಾರಿಗಳಿಗೆ 2021ರ ಮೇ 17ರಂದು ಹಾಗೂ 107 ಇಂಟರ್ನ್‌ಗಳಿಗೆ ಮಾಸಿಕ ತಲಾ 10 ಸಾವಿರ ರೂಪಾಯಿಯಂತೆ ಪ್ರೋತ್ಸಾಧನ ಬಿಡುಗಡೆ ಮಾಡಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಆದೇಶಿಸಿತ್ತು. ಆದರೆ, ಎಂಬಿಬಿಎಸ್‌ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿರಲಿಲ್ಲ.

ಈ ಸಂಬಂಧ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಶಿವಮೊಗ್ಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಎಂಬಿಬಿಎಸ್‌ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾಸಿಕ 20 ಸಾವಿರ ರೂಪಾಯಿ ಪ್ರೋತ್ಸಾಹ ಧನ ಬಿಡುಗಡೆ ಮಾಡುವಂತೆ ಪತ್ರ ಬರೆದಿತ್ತು. 2020ರ ಜುಲೈ 16ರಂದು ಎಂಬಿಬಿಎಸ್‌ ವಿದ್ಯಾರ್ಥಿಗಳ ಸೇವೆಯನ್ನು ಕೋವಿಡ್‌ ನಿಯಂತ್ರಿಸಲು ಬಳಕೆ ಮಾಡುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಆದೇಶಿಸಿತ್ತು ಎಂದೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Also Read
ಕೋವಿಡ್‌ ಹಿನ್ನೆಲೆ: ತುರ್ತು ಪ್ರಕರಣಗಳು, ಜಾಮೀನು, ಬಂಧನ ಮುಂತಾದ ಪ್ರಮುಖ ವಿಚಾರಣೆಗಳಿಗೆ ಸೀಮಿತಗೊಳ್ಳಲಿರುವ ಸುಪ್ರೀಂ

ಕೋವಿಡ್‌ ನಿಯಂತ್ರಣಕ್ಕೆ ಬಳಕೆ ಮಾಡುವ ವಿದ್ಯಾರ್ಥಿಗಳಿಗೆ ಊಟ, ವಸತಿ, ಸಾರಿಗೆ ವ್ಯವಸ್ಥೆ ಮಾಡಲಾಗುವುದು ಎಂದೂ ವೈದ್ಯಕೀಯ ಶಿಕ್ಷಣ ಇಲಾಖೆಯು ಆದೇಶದಲ್ಲಿ ಹೇಳಿತ್ತು. ಇದರ ಅನ್ವಯ ಅರ್ಜಿದಾರರು ತಮ್ಮ ಜೇಬಿನಿಂದ ಹಣ ಖರ್ಚು ಮಾಡಿದ್ದಾರೆ. ಹಲವು ಬಾರಿ ಕೋರಿಕೆ ಸಲ್ಲಿಸಿದರೂ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ, ನ್ಯಾಯಾಲಯದ ಕದತಟ್ಟಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅರ್ಜಿದಾರರನ್ನು ವಕೀಲರಾದ ಪ್ರತೀಕ್‌ ಚಂದ್ರಮೌಳಿ ಮತ್ತು ಕೆ ಎಸ್‌ ವಿದ್ಯಾಶ್ರೀ ಪ್ರತಿನಿಧಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com