Justice Chandrachud 
ಸುದ್ದಿಗಳು

ತಂತ್ರಜ್ಞಾನದಿಂದ ಕ್ರಿಮಿನಲ್ ಪ್ರಕರಣಗಳ ವಿಲೇವಾರಿ ವಿಳಂಬ ತಪ್ಪಿಸಬಹುದು: ನ್ಯಾ. ಡಿ ವೈ ಚಂದ್ರಚೂಡ್

ಅಧಿಕೃತ ಸಾಕ್ಷಿಗಳಿಂದ ಸಾಕ್ಷ್ಯ ಸಂಗ್ರಹಿಸುವ ಕಾರ್ಯಕ್ಕೆ ವಿನಾಯ್ತಿ ನೀಡದೆ ಅದನ್ನು ಕಡ್ಡಾಯವಾಗಿ ಮಾಡುವ ಸಮಯ ಈಗ ಬಂದಿದೆ ಎಂದು ಸುಪ್ರೀಂ ಕೋರ್ಟ್‌ ಇ-ಸಮಿತಿಯ ಅಧ್ಯಕ್ಷರೂ ಆಗಿರುವ ನ್ಯಾ. ಚಂದ್ರಚೂಡ್ ಒತ್ತಿ ಹೇಳಿದರು.

Bar & Bench

ಆರೋಪಿಗಳು ತಲೆಮರೆಸಿಕೊಂಡ ಅಥವಾ ಅಧಿಕೃತ ಸಾಕ್ಷಿಗಳು ಗೈರುಹಾಜರಾಗುವಂಥ ಅಪರಾಧ ಪ್ರಕರಣಗಳ ಇತ್ಯರ್ಥ ವಿಳಂಬವಾಗುವುದನ್ನು ತಪ್ಪಿಸಲು ತಂತ್ರಜ್ಞಾನ ಸಮರ್ಥವಾಗಿದೆ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅಭಿಪ್ರಾಯಪಟ್ಟರು.

ಒಡಿಶಾದ ಅಂಗುಲ್ ಮತ್ತು ನಯಾಗಢ ಜಿಲ್ಲೆಗಳ ಮಾದರಿ ವರ್ಚುವಲ್ ನ್ಯಾಯಾಲಯಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧಿಕೃತ ಸಾಕ್ಷಿಗಳಿಂದ ಸಾಕ್ಷ್ಯ ಸಂಗ್ರಹಿಸುವ ಕಾರ್ಯಕ್ಕೆ ವಿನಾಯ್ತಿ ನೀಡದೆ ಅದನ್ನು ಕಡ್ಡಾಯವಾಗಿ ಮಾಡುವ ಸಮಯ ಈಗ ಬಂದಿದೆ ಎಂದು ಸುಪ್ರೀಂ ಕೋರ್ಟ್‌ನ ಇ-ಸಮಿತಿಯ ಅಧ್ಯಕ್ಷರೂ ಆಗಿರುವ ನ್ಯಾ. ಚಂದ್ರಚೂಡ್‌ ಒತ್ತಿ ಹೇಳಿದರು.

"ತಂತ್ರಜ್ಞಾನದಲ್ಲಿ ನಮಗೆ ಉತ್ತರ ದೊರೆಯುತ್ತದೆ ಎಂದು ನಂಬುತ್ತೇನೆ. ಆರೋಪಿಗಳು ತಪ್ಪಿಸಿಕೊಂಡ ಪ್ರಕರಣಗಳ ಮೇಲ್ವಿಚಾರಣೆ ಮಾಡಲು ಸಾಧ್ಯ ಎಂದು ಖಾತ್ರಿಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್‌ ಇ ಸಮಿತಿ ಈಗ ಉಪಕ್ರಮವೊಂದನ್ನು ಅಳವಡಿಸಿಕೊಳ್ಳುತ್ತಿದೆ. ಪೊಲೀಸ್‌ ಠಾಣೆಯ ಹಂತದಲ್ಲಿ ನಾವು ಅದನ್ನು ನಿಯಂತ್ರಿಸಬೇಕಿದೆ. ನಂತರ ರಾಜ್ಯದ ಪೊಲೀಸ್ ಮಹಾನಿರ್ದೇಶಕರವರೆಗೆ ಇದನ್ನು ವಿಸ್ತರಿಸಬಹುದು ಎಂದು ಅವರು ಹೇಳಿದರು.

Justice Chandrachud

ದೇಶದಲ್ಲಿ ಡಿಜಿಟಲ್‌ ವಿಭಜನೆ ಇರುವುದನ್ನು ಒಪ್ಪಿಕೊಂಡ ನ್ಯಾಯಮೂರ್ತಿಗಳು ವ್ಯವಸ್ಥೆಯ ಎರಡು ತುದಿಗಳಾದ ಸಾಮಾನ್ಯ ದಾವೆದಾರರು ಮತ್ತು ವಕೀಲರ ಸಮುದಾಯದ ನಡುವೆ ಸೇತುವೆಯಾಗಿ ತಂತ್ರಜ್ಞಾನ ಬಳಕೆಯಾಗಬೇಕು ಎಂದು ಹೇಳಿದರು. ತಂತ್ರಜ್ಞಾನ ಅಲಭ್ಯ ಇರುವ ವಕೀಲರು ಇ- ಸೇವಾ ಕೇಂದ್ರದ ಸದುಪಯೋಗ ಪಡೆಯಬೇಕು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಒಡಿಶಾ ರಾಜ್ಯದ ಉಪಕ್ರಮಗಳನ್ನು ಇತರ ರಾಜ್ಯಗಳು ಮತ್ತು ಸುಪ್ರೀಂಕೋರ್ಟ್‌ ಅಳವಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ ಅವರು “ಪ್ರತಿಯೊಬ್ಬರ ಜೀವನ ಸರಳಗೊಳಿಸಲು ಮತ್ತು ಅದು ಹೆಚ್ಚು ಸ್ಪಂದನಶೀಲವಾಗುವಂತೆ ಮಾಡಲು ತಂತ್ರಜ್ಞಾನಕ್ಕೆ ನಾವು ಒತ್ತು ನೀಡೋಣ. ನ್ಯಾಯದಾನವನ್ನು ತ್ವರಿತಗೊಳಿಸಲು ಮತ್ತು ಅದನ್ನು ಹೆಚ್ಚು ಪಾರದರ್ಶಕವಾಗಿಸುವ ದಾರಿಯಲ್ಲಿ ಬಹುದೂರ ಸಾಗಲು ಈ ಉಪಕ್ರಮದಿಂದಲೇ ಅಂಬೆಗಾಲು ಇಡುತ್ತಿದ್ದೇವೆ ಎಂದುಕೊಳ್ಳೋಣ” ಎಂಬುದಾಗಿ ಅವರು ಹೇಳಿದರು.