ಸುಪ್ರೀಂ ಕೋರ್ಟ್ ಪ್ರತಿ-ಬಹುಮತತ್ವ (ಜನಪ್ರಿಯ ಬಹುಮತದ ಆಚೆಗೆ ಸಾಗಿ ಜನಪರ ನ್ಯಾಯದಾನ ಮಾಡುವಿಕೆ) ಸಂಸ್ಥೆಯ ಪಾತ್ರಧಾರಿಯಾಗಿದ್ದು, ಸಾಮಾಜಿಕ-ಆರ್ಥಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು ಸರ್ವೋಚ್ಚ ನ್ಯಾಯಾಲಯದ ಕರ್ತವ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.
ಅಮೆರಿಕಾದ ವಕೀಲರ ಸಂಘ ಸೋಮವಾರ ಆಯೋಜಿಸಿದ್ದ “ಸವಾಲಿನ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ಸುಪ್ರೀಂ ಕೋರ್ಟ್‌ನ ಪಾತ್ರ” ವಿಚಾರದ ಕುರಿತು ಅವರು ಮಾತನಾಡಿದರು.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಪಾತ್ರವನ್ನು ಕೆಲವರು 'ನ್ಯಾಯಿಕ ಸಕ್ರಿಯತೆ' ಅಥವಾ 'ನ್ಯಾಯಿಕ ಗುರಿತಲುಪುವಿಕೆ' ಎಂದು ವ್ಯಾಖ್ಯಾನಿಸಿದ್ದಾರೆ. ಕಾರ್ಯಾಂಗ ಅಥವಾ ಶಾಸಕಾಂಗದ ನಡೆಯು ಮೂಲಭೂತವಾಗಿ ಮಾನವ ಹಕ್ಕುಗಳನ್ನು ಉಲ್ಲಂಘಿಸುವಾಗ ಸಂವಿಧಾನದ ರಕ್ಷಕನಾದ ನ್ಯಾಯಾಲಯವು ಅದಕ್ಕೆ ತಡೆಯೊಡ್ಡುವುದು ಅಗತ್ಯವಾಗಿದೆ ಎಂದರು.
“ಅನೇಕ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿದ್ದರಿಂದ ಭಾರತೀಯ ಇತಿಹಾಸದ ಹಾದಿ ಬದಲಾಗಿದೆ- ಇದು ರಾಜ್ಯದ ಮೇಲೆ ನಕಾರಾತ್ಮಕ ಬಾಧ್ಯತೆಯನ್ನು ಉಂಟುಮಾಡುವ ನಾಗರಿಕ ಮತ್ತು ರಾಜಕೀಯ ಸ್ವಾತಂತ್ರ್ಯಗಳನ್ನು ರಕ್ಷಿಸುವುದಾಗಿರಲಿ ಅಥವಾ ಸಂವಿಧಾನದ ಅಡಿಯಲ್ಲಿ ಸಾಮಾಜಿಕ ಆರ್ಥಿಕ ಹಕ್ಕುಗಳನ್ನು ಕಾರ್ಯಗತಗೊಳಿಸುವುದಾಗಲಿ ಆಗಬಹುದು. ಇದನ್ನು ಕೆಲವರು 'ನ್ಯಾಯಿಕ ಸಕ್ರಿಯತೆ' ಅಥವಾ 'ನ್ಯಾಯಿಕ ಗುರಿತಲುಪುವಿಕೆ' ಎಂದು ವ್ಯಾಖ್ಯಾನಿಸಿದ್ದಾರೆ. ಕಾರ್ಯಾಂಗ ಅಥವಾ ಶಾಸಕಾಂಗದ ನಡೆಯು ಮೂಲಭೂತವಾಗಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದಾಗ ಸಂವಿಧಾನದ ರಕ್ಷಕನಾದ ನ್ಯಾಯಾಲಯವು ಅದಕ್ಕೆ ತಡೆಯೊಡ್ಡುವುದು ಅಗತ್ಯವಾಗಿದೆ” ಎಂದಿದ್ದಾರೆ.
ಪ್ರಮುಖವಾಗಿ ನ್ಯಾಯಮೂರ್ತಿ ಚಂದ್ರಚೂಡ್ ಅವರು ಕೇಂದ್ರ ಸರ್ಕಾರದ ಲಸಿಕಾ ನೀತಿಯ ಬಗ್ಗೆ ಹೆಚ್ಚು ಚರ್ಚಿಸಿದ ತೀರ್ಪನ್ನು ಉಲ್ಲೇಖಿಸಿದರು. ಈ ತೀರ್ಪಿನಿಂದಾಗಿ ಕೇಂದ್ರ ಸರ್ಕಾರವು ಹಲವು ಬದಲಾವಣೆಗಳನ್ನು ಮಾಡಿತು ಎಂದಿದ್ದಾರೆ.
“ಉದಾರೀಕೃತ ಲಸಿಕಾ ನೀತಿ ಜಾರಿ ಮಾಡಿದ್ದ ಭಾರತ ಸರ್ಕಾರವು 45 ವರ್ಷ ಮೇಲ್ಪಟ್ಟವರು, ಆರೋಗ್ಯ ಕಾರ್ಯಕರ್ತರು ಮತ್ತು ಇತರೆ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಉಚಿತವಾಗಿ ಲಸಿಕೆ ನೀಡುತ್ತಿತ್ತು. 18-44 ವಯೋಮಾನದವರು ರಾಜ್ಯ ಸರ್ಕಾರದ ಲಸಿಕಾ ಕೇಂದ್ರಗಳು ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬೇಕಿದ್ದು, ಅದರ ವೆಚ್ಚವನ್ನು ಅವರೇ ಭರಿಸಬೇಕಿತ್ತು. ಇಷ್ಟು ಮಾತ್ರವಲ್ಲದೇ ಈ ವಯೋಮಾನದವರು ಲಸಿಕೆ ಪಡೆಯಲು ಡಿಜಿಟಲ್ ವಿಧಾನದ ಮೂಲಕ ಕಾಯ್ದಿರಿಸಿಬೇಕಿತ್ತು” ಎಂದು ವಿವರಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮಾನವೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮೂಕ ಪ್ರೇಕ್ಷಕನಾಗಿ ವರ್ತಿಸಲಾಗದು. ಹೀಗಾಗಿ, ʼಬದ್ಧವಾದ ವಿವೇಚನಾ ಮಾರ್ಗʼ ಅನುಸರಿಸುವ ಮೂಲಕ ಸರ್ಕಾರದಿಂದ ಅದರ ನೀತಿಗೆ ಸಂಬಂಧಿಸಿದಂತೆ ಸಮರ್ಥನೆ ಬಯಸಿತ್ತು.
“ಕೆಲವು ವರ್ಗದ ಜನರಿಗೆ ಉಚಿತ ಲಸಿಕೆ ನೀಡುವುದು ಮತ್ತು ಮತ್ತೊಂದು ವರ್ಗವು ಲಸಿಕೆ ಪಡೆಯಲು ಹಣ ಪಾವತಿಸಬೇಕಿರುವುದು ಅಥವಾ ಉಚಿತ ಲಸಿಕೆ ಪಡೆಯುವುದು ಆಯಾ ರಾಜ್ಯದ ಆರ್ಥಿಕ ಸ್ಥಿತಿಯನ್ನು ಅವಲಂಬಿಸಿದ್ದು ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕಿನ (ಆರೋಗ್ಯದ ಹಕ್ಕು) ಅನಿಯಂತ್ರಿತ ಮತ್ತು ಅಸಮಂಜಸ ಜಾರಿಯಾಗಿತ್ತು. ಕೇಂದ್ರ ಸರ್ಕಾರದ ಈ ನೀತಿಯು ಮೇಲ್ನೋಟಕ್ಕೆ ಬೆಲೆ ವ್ಯತ್ಯಯ ನಿರ್ಧರಣದಿಂದ ಕೂಡಿತ್ತು. 18-44 ವಯೋಮಾನದ ಸಾಮಾಜಿಕ ಸ್ತರವು ಸುಸ್ಥಿಯಲ್ಲಿರುವ ಮತ್ತು ಅಂಚಿನಲ್ಲಿರುವ ಗುಂಪುಗಳಿಗೆ ಸೇರಿದ ಜನರನ್ನೂ ಸಹ ಒಳಗೊಂಡಿದೆ ಎಂದು ನಾವು ಗಮನಿಸಿದೆವು. ಅಂತಹ ವ್ಯಕ್ತಿಗಳು ಸಾಂಕ್ರಾಮಿಕದ ಸಂದರ್ಭದಲ್ಲಿ ಲಸಿಕೆಗೆ ಹಣ ಪಾವತಿಸುವ ಸಾಮರ್ಥ್ಯವನ್ನು ಹೊಂದಿಲ್ಲದಿರಬಹುದಾಗಿದ್ದು ಅದನ್ನು ನೀಡುವುದು ಸಾರ್ವಜನಿಕ ಒಳಿತಾಗಿದೆ” ಎಂದು ವಿವರಿಸಿದರು.
“18-44 ವರ್ಷದೊಳಗಿನ ವ್ಯಕ್ತಿಗಳಿಗೆ ಆನ್‌ಲೈನ್‌ನಲ್ಲಿ ಲಸಿಕೆಗಾಗಿ ನಿರ್ದಿಷ್ಟ ವೇಳೆಯನ್ನು ಕಡ್ಡಾಯವಾಗಿ ಕಾಯ್ದಿರಿಸುವ ವಿಚಾರವನ್ನು ಗಮನಿಸಿದಾಗ ದೇಶದಲ್ಲಿ ಡಿಜಿಟಲ್ ಕಂದರವಿರುವುದನ್ನು ನಾವು ಗುರುತಿಸಿದೆವು. ಡಿಜಿಟಲ್ ಸಾಕ್ಷರತೆ ಮತ್ತು ಡಿಜಿಟಲ್ ಲಭ್ಯತೆಯು ಭಾರತದ ಹೆಚ್ಚಿನ ಜನಸಂಖ್ಯೆಯನ್ನು ಒಳಗೊಳ್ಳುವುದಿಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶದ ನಡುವೆ ಸಾಕಷ್ಟು ಅಂತರವಿದೆ” ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಯಿತು ಎಂದು ನ್ಯಾ. ಚಂದ್ರಚೂಡ್ ವಿಶ್ಲೇಷಿಸಿದರು.