Karnataka HC's Chief Justice Ritu Raj Awasthi and Ex CM B S Yediyurappa
Karnataka HC's Chief Justice Ritu Raj Awasthi and Ex CM B S Yediyurappa 
ಸುದ್ದಿಗಳು

ಇಷ್ಟೊಂದು ಜಾತಿಯಾಧಾರಿತ ನಿಗಮ, ಮಂಡಳಿ ರಚನೆಯನ್ನು ನಾನು ನೋಡಿಲ್ಲ: ಸಿಜೆ ರಿತುರಾಜ್‌ ಅವಸ್ಥಿ ಅಚ್ಚರಿ

Siddesh M S

“ಜಾತಿಯ ಆಧಾರದಲ್ಲಿ ಇಷ್ಟು ನಿಗಮ ಮತ್ತು ಮಂಡಳಿಗಳನ್ನು ರಚಿಸಿರುವುದನ್ನು ನಾನು ನೋಡಿಲ್ಲ. ಇಷ್ಟು ನಿಗಮ ಮತ್ತು ಮಂಡಳಿಗಳನ್ನು ರಚಿಸಿರುವುದನ್ನು ನೋಡಿ ವೈಯಕ್ತಿಕವಾಗಿ ನನಗೆ ಆಶ್ಚರ್ಯವಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅಚ್ಚರಿ ಪಟ್ಟ ಘಟನೆ ಬುಧವಾರ ಹೈಕೋರ್ಟ್‌ ವಿಚಾರಣೆ ವೇಳೆ ನಡೆಯಿತು.

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಜೆ ಶ್ರೀನಿವಾಸನ್‌ ಮತ್ತು ವಕೀಲ ಎಸ್‌ ಬಸವರಾಜು ಎಂಬವರು ಜಾತಿಯಾಧಾರಿತವಾಗಿ ಸೃಷ್ಟಿಸಲಾಗಿರುವ ನಿಗಮ ಮತ್ತು ಮಂಡಳಿಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಬುಧವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಇಷ್ಟು ನಿಗಮ ಮತ್ತು ಮಂಡಳಿಗಳನ್ನು ಯಾವ ಆಧಾರದಲ್ಲಿ ಸೃಷ್ಟಿಸಲಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂಬುದು ನನ್ನ ವೈಯಕ್ತಿಕ ಭಾವನೆ. ಹೀಗಾಗಿ, ಖಂಡಿತವಾಗಿಯೂ ಈ ಪ್ರಕರಣವನ್ನು ನಾವು ಆಲಿಸುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿ ಅವಸ್ಥಿ ಹೇಳಿದರು.

ಇದಕ್ಕೆ ಧ್ವನಿಗೂಡಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಜಾತಿಯಾಧಾರಿತವಾಗಿ ಈ ಪರಿಯಲ್ಲಿ ನಿಗಮ, ಮಂಡಳಿ ರಚನೆ ಎಲ್ಲಿಯೂ ನಡೆದಿಲ್ಲ. ಇಲ್ಲಿ ಸಂವಿಧಾನವನ್ನು ತಲೆಕೆಳಗು ಮಾಡಲಾಗಿದೆ. ನಿರ್ದಿಷ್ಟ ಜಾತಿಗಳಿಗೆ ನಾವು ಯೋಜನೆ ಮಾಡಿದ್ದೇವೆ. ಉಳಿದ ಜಾತಿಗಳನ್ನು ಆಮೇಲೆ ಪರಿಗಣಿಸುತ್ತೇವೆ ಎಂದು ಸರ್ಕಾರ ಹೇಳಿದಂತಿದೆ” ಎಂದು ಏರುಧ್ವನಿಯಲ್ಲಿ ಹೇಳಿದರು.

ಇದಕ್ಕೂ ಮುನ್ನ ಪ್ರೊ. ರವಿವರ್ಮ ಕುಮಾರ್‌ ಅವರು “ಕೋವಿಡ್‌ನಿಂದಾಗಿ ಸಾವನ್ನಪ್ಪಿದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಅವರಿಂದ ಬೆಳಗಾವಿ ಉತ್ತರ ಲೋಕಸಭಾ ಕ್ಷೇತ್ರ ತೆರವಾಗಿತ್ತು. ಇಲ್ಲಿ ಮರಾಠಾ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿವೆ. ಲೋಕಸಭಾ ಉಪಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನ ಅಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರ ಟಿಪ್ಪಣಿ ಆಧರಿಸಿ 2020ರ ನವೆಂಬರ್‌ 27ರಂದು ಮರಾಠಾ ಅಭಿವೃದ್ಧಿ ನಿಗಮ ರಚಿಸಲಾಗಿದೆ” ಎಂದರು.

ಮುಂದುವರೆದು, “ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುವುದನ್ನು ಊಹಿಸಿ, ಅಲ್ಲಿ ಲಿಂಗಾಯತ ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ಪರಿಗಣಿಸಿ 2020ರ ನವೆಂಬರ್‌ 17ರಂದು ಯಡಿಯೂರಪ್ಪ ಅವರ ಟಿಪ್ಪಣಿ ಆಧರಿಸಿ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚಿಸಲಾಗಿದೆ. ಇದು ಸಚಿವ ಸಂಪುಟ ಅಥವಾ ಅಡ್ವೊಕೇಟ್‌ ಜನರಲ್‌ ಹೇಳಲು ಯತ್ನಿಸುತ್ತಿರುವಂತೆ ವಿಧಾನ ಮಂಡಲದ ಅಧಿವೇಶನದಲ್ಲಿ ಕೈಗೊಂಡ ನಿರ್ಧಾರವಲ್ಲ. ಅಂದಿನ ಮುಖ್ಯಮಂತ್ರಿಯ ಟಿಪ್ಪಣಿ ಆಧರಿಸಿ ಕೈಗೊಂಡ ನಿರ್ಧಾರವಾಗಿದೆ. ಈ ವೀರಶೈವ-ಲಿಂಗಾಯತ ಅಭಿವೃದ್ಧಿ ಮಂಡಳಿಗೆ 500 ಕೋಟಿ ರೂಪಾಯಿಯಷ್ಟು ಅನುದಾನ ಹಂಚಿಕೆ ಮಾಡಲಾಗಿದೆ” ಎಂದು ಪೀಠದ ಗಮನಸೆಳೆದರು.

“ಸಂವಿಧಾನದ 15(1) ವಿಧಿಯ ಪ್ರಕಾರ ಸರ್ಕಾರಗಳು ತಾರತಮ್ಯದ ನೀತಿ ಅನುಸರಿಸಲಾಗದು. ಜಾತಿಯಾಧಾರಿತ ನಿಗಮ ಅಥವಾ ಮಂಡಳಿಯ ರಚನೆಯು ಸಂವಿಧಾನದ 14 ಮತ್ತು 15ನೇ ವಿಧಿಗೆ ವಿರುದ್ಧವಾಗಿದೆ. ಇಲ್ಲಿ ಇತರೆ ಸಮುದಾಯಗಳ ವೆಚ್ಚದಲ್ಲಿ ನಿರ್ದಿಷ್ಟ ಸಮುದಾಯಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಮತಗಿಟ್ಟಿಸಲು ಅಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ಜಾತಿಯಾಧಾರಿತ ನಿಗಮ ಮತ್ತು ಮಂಡಳಿಗಳನ್ನು ರಚಿಸಿದ್ದು, ಇದು ರಾಜಕೀಯ ಪ್ರೇರಿತವಾದ ನಿರ್ಧಾರವಾಗಿದೆ” ಎಂದು ಆರೋಪಿಸಿದರು.

“ಜಾತಿಯಾಧಾರಿತ ನಿಗಮಗಳಿಗೆ ಅನುದಾನ ಹಂಚಿಕೆಯ ವಿಚಾರದಲ್ಲಿ ರಾಜ್ಯ ಸರ್ಕಾರದ ಬಜೆಟ್‌ ಹಂಚಿಕೆಯನ್ನು ನಾವು ಪ್ರಶ್ನಿಸುತ್ತಿಲ್ಲ. ಸರ್ಕಾರದ ಆದೇಶವನ್ನು ಪ್ರಶ್ನಿಸುತ್ತಿರುವುದರಿಂದ ಅರ್ಜಿಯ ನಿರ್ವಹಣೆಯ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ಸಮರ್ಥಸಿದರು.

ಇದಕ್ಕೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ನಾವು ಎಷ್ಟು ಹಣ ಖರ್ಚು ಮಾಡಿದ್ದೇವೆ ಎಂಬುದನ್ನು ತೋರಿಸಲಿ. ಒಟ್ಟಾರೆಯಾಗಿ ರಿಟ್‌ ಮನವಿಗಳು ನಿರ್ವಹಣೆಗೆ ಅರ್ಹವಾಗಿಲ್ಲ” ಎಂದರು.

ವಾದ-ಪ್ರತಿವಾದವನ್ನು ಆಲಿಸಿದ ಪೀಠವು “ಜಾತಿಯಾಧಾರಿತವಾಗಿ ನಿಗಮ ಮತ್ತು ಮಂಡಳಿಗಳನ್ನು ರಚಿಸಿರುವ ಪ್ರಶ್ನೆ ಎದ್ದಿದ್ದು, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಅರ್ಜಿಗಳ ನಿರ್ವಹಣೆಯ ಪ್ರಶ್ನೆ ಮುಂದಿಟ್ಟಿದ್ದಾರೆ. ಜಾತಿಯಾಧಾರಿತ ನಿಗಮ ಮತ್ತು ಮಂಡಳಿಗಳ ಸೃಷ್ಟಿಯು ಸರ್ಕಾರದ ನೀತಿಯ ಭಾಗವಾಗಿದ್ದು, ಅನುದಾನ ಹಂಚಿಕೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗದು ಎಂದು ಹೇಳಿದ್ದಾರೆ. ಅರ್ಜಿಯ ನಿರ್ವಹಣೆ ಸೇರಿದಂತೆ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧವಾಗಿರುವುದಾಗಿ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಹೇಳಿದ್ದು, ಡಿಸೆಂಬರ್‌ 21ರಂದು ಪ್ರಕರಣ ಆಲಿಸಲಾಗುವುದು” ಎಂದು ಆದೇಶದಲ್ಲಿ ದಾಖಲಿಸಿತು.

ಕರ್ನಾಟಕ ರಾಜ್ಯ ಮರಾಠಾ ಅಭಿವೃದ್ಧಿ ಮಂಡಳಿ, ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಆರ್ಯವೈಶ್ಯ ಅಭಿವೃದ್ಧಿ ಮಂಡಳಿ, ಕ್ರಿಶ್ಚಿಯನ್‌ ಅಭಿವೃದ್ಧಿ ಮಂಡಳಿ, ಕಾಡುಗೊಲ್ಲ ಅಭಿವೃದ್ಧಿ ಮಂಡಳಿ, ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ಮಂಡಳಿಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.