ಅರ್ಹತೆ ಹೊಂದಿರದ ಸಮುದಾಯಗಳಿಗೂ ಜಾತಿಯಾಧಾರಿತವಾಗಿ ಮಂಡಳಿಗಳನ್ನು ರಚಿಸಿ, ಸರ್ಕಾರದಿಂದ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳನ್ನು ನವೆಂಬರ್ 25ರಂದು ಅಂತಿಮವಾಗಿ ಆಲಿಸಿ ವಿಲೇವಾರಿ ಮಾಡಲಾಗುವುದು ಎಂದು ಗುರುವಾರ ಕರ್ನಾಟಕ ಹೈಕೋರ್ಟ್ ಹೇಳಿದೆ.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಜೆ ಶ್ರೀನಿವಾಸನ್ ಮತ್ತು ವಕೀಲ ಎಸ್ ಬಸವರಾಜು ಎಂಬವರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಜೆ ಶ್ರೀನಿವಾಸನ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ಜುಲೈ 26ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಕ್ಕೂ ಮುನ್ನ ಬಿ ಎಸ್ ಯಡಿಯೂರಪ್ಪ ಅವರು ಜುಲೈ 19ರಂದು ರಾಜ್ಯದಲ್ಲಿ ಶೇ. 13ರಷ್ಟು ಮತ ಪ್ರಮಾಣ ಹೊಂದಿರುವ ಬಲಾಢ್ಯ ಒಕ್ಕಲಿಗ ಸಮುದಾಯದ ಹೆಸರಿನಲ್ಲಿ ಮಂಡಳಿ ರಚಿಸಿ ಆದೇಶ ಮಾಡಿದ್ದರು. ಜಾತಿಯಾಧಾರಿತವಾಗಿ ಮಂಡಳಿಗಳನ್ನು ರಚಿಸಿ ಅವುಗಳಿಗೆ ಅನುದಾನ ನೀಡುವ ಕ್ರಿಯೆ ನಡೆಯುತ್ತಿದೆ. ಅಲ್ಲದೇ, ಆ ಮಂಡಳಿಗಳ ಅಧ್ಯಕ್ಷ ಸ್ಥಾನ ಮತ್ತು ಸಿಬ್ಬಂದಿಯನ್ನಾಗಿ ರಾಜಕಾರಣಿಗಳ ಸಂಬಂಧಿ ಮತ್ತು ಬೆಂಬಲಿಗರನ್ನು ನೇಮಕ ಮಾಡಲಾಗುತ್ತಿದೆ” ಎಂದರು.
ಮುಂದುವರಿದು, “ಇನ್ನೂ ಕೆಲ ಜಾತಿ ಕೇಂದ್ರಿತ ಮಂಡಳಿ ರಚಿಸಿ ಅವುಗಳಿಗೆ ಸರ್ಕಾರದ ಬೊಕ್ಕಸದಿಂದ ಹಣ ನೀಡಬಹುದಾಗಿದೆ. ಹಾಗೆ ಮಾಡಲು ಅವಕಾಶವಿದ್ದರೆ ಹೇಳಿ, ಇಲ್ಲವಾದಲ್ಲಿ ಈ ಪ್ರವೃತ್ತಿಗೆ ನಿಷೇಧ ಹೇರಬೇಕು. ಈ ದೃಷ್ಟಿಯಿಂದ ಪ್ರಕರಣವನ್ನು ತುರ್ತಾಗಿ ಆಲಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ. ಇಂದೇ ಮನವಿಯ ವಿಚಾರಣೆ ಆರಂಭಿಸಿದರೆ ಮನವಿ ನಿರ್ವಹಣೆಯ ಪ್ರಶ್ನೆಗೆ ಉತ್ತರಿಸಲು ಸಿದ್ಧವಿದ್ದೇನೆ” ಎಂದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “ಹಿಂದಿನ ನ್ಯಾಯಮೂರ್ತಿಗಳು 20 ದಿನಗಳಿಗೂ ಹೆಚ್ಚು ಕಾಲ ನಿರಂತರವಾಗಿ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ರಾಜ್ಯ ಸರ್ಕಾರವು ಸಮಗ್ರವಾದ ಆಕ್ಷೇಪಣೆಯನ್ನು ಸಿದ್ಧಪಡಿಸಿದ್ದು, ನವೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ವಿಚಾರಣೆ ನಡೆಸಿದರೆ ಅಂದು ವಾದಿಸಲಾಗುವುದು” ಎಂದರು.
“1975 ಮತ್ತು 92ರಲ್ಲೂ ಕೆಲವು ಮಂಡಳಿಗಳನ್ನು ರಚಿಸಲಾಗಿದೆ. ಬೀಸು ಹೇಳಿಕೆಗಳನ್ನು ನೀಡಬಾರದು. ಪ್ರಕರಣದ ವಿಚಾರಣೆ ನಡೆಸಲು ನಮ್ಮದು ಯಾವುದೇ ತಕಾರರು ಇಲ್ಲ” ಎಂದರು.
ಈ ಮಧ್ಯೆ, ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್ ವಿಜಯ್ ಶಂಕರ್ ಅವರು “ಸಂವಿಧಾನದ 15(6), 16 (6) ಮತ್ತು 14ನೇ ವಿಧಿಗಳಿಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳಿವೆ. ಅರ್ಜಿಯ ನಿರ್ವಹಣೆಯ ಬಗ್ಗೆಯೇ ಗಂಭೀರ ಪ್ರಶ್ನೆಗಳಿವೆ” ಎಂದರು.
ವಿಚಾರಣೆ ಆರಂಭವಾಗುತ್ತಿದ್ದಂತೆ ವಿವಿಧ ಮಂಡಳಿಗಳಿಗೆ ಸರ್ಕಾರ ಹಂಚಿಕೆ ಮಾಡಿರುವ ಅನುದಾನ ಮತ್ತು ಮಂಡಳಿಗಳು ಅನುದಾನ ವ್ಯಯಿಸಿರುವುದರ ಕುರಿತಾದ ವರದಿಯನ್ನು ಸಲ್ಲಿಸುವಂತೆ ಹಿಂದೆ ನ್ಯಾಯಾಲಯ ಆದೇಶಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಅನುಪಾಲನಾ ವರದಿ ಸಲ್ಲಿಸಲಾಗಿದೆ ಎಂದು ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಮರಾಠಾ ಅಭಿವೃದ್ಧಿ ಮಂಡಳಿ, ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಆರ್ಯವೈಶ್ಯ ಅಭಿವೃದ್ಧಿ ಮಂಡಳಿ, ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿ, ಕಾಡುಗೊಲ್ಲ ಅಭಿವೃದ್ಧಿ ಮಂಡಳಿ, ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ಮಂಡಳಿಗಳನ್ನು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.