ಸುದ್ದಿಗಳು

ಸುಪ್ರೀಂ ಕೋರ್ಟ್‌ನ ಕೆಲ ವಕೀಲರಿಗೆ ವಿವಿಧ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲು ಚಿಂತನೆ: ಸಿಜೆಐ

Bar & Bench

ಸುಪ್ರೀಂ ಕೋರ್ಟ್‌ನ ಕೆಲವು ವಕೀಲರುಗಳಿಗೆ ವಿವಿಧ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲು ಚಿಂತನೆ ನಡೆಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸೋಮವಾರ ಮಾತನಾಡಿದ ಅವರು ಈ ಕುರಿತು ಸಂಬಂಧಪಟ್ಟ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು. ಇದೇ ವೇಳೆ  ಹೈಕೋರ್ಟ್‌ಗಳಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ ವಕೀಲರಿಗೆ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡುವುದಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದಾಗಿ ಅವರು ಭರವಸೆಯಿತ್ತರು.

“ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ, ಹೈಕೋರ್ಟ್‌ಗಳಿಗೆ ಉತ್ತಮ ನ್ಯಾಯಮೂರ್ತಿಗಳಾಗಬಲ್ಲ ಹೆಸರುಗಳು ನನ್ನ ಮನಸ್ಸಿನಲ್ಲಿವೆ. ಈ ಕುರಿತಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಿಕೊಡಲು ಯತ್ನಿಸುವೆ. ಖಂಡಿತವಾಗಿಯೂ ಹೈಕೋರ್ಟ್‌ ವಕೀಲರಿಗಿರುವ ಅವಕಾಶದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್ ವಕೀಲರಿಗೆ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಬೇಕು ಎಂಬ ಎಸ್‌ಸಿಬಿಎ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಅವರು ಈ ಇಂಗಿತ ವ್ಯಕ್ತಪಡಿಸಿದ್ದಾರೆ. ರೂಢಿಗತವಾಗಿ ಹೈಕೋರ್ಟ್‌ಗಳಲ್ಲಿ ಪ್ರಾಕ್ಟೀಸ್‌ ಮಾಡುವ ವಕೀಲರನ್ನು ಮಾತ್ರ ಸಂಬಂಧಪಟ್ಟ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲಾಗುತ್ತದೆ. ಆದರೆ ಸುಪ್ರೀಂ ಕೋರ್ಟ್ ವಕೀಲರನ್ನು ಸಹ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ಮಾಡಿದ ಅಪರೂಪದ ಉದಾಹರಣೆಗಳಿವೆ.

ಅಲ್ಲದೆ ಪ್ರಕರಣಗಳ ಪಟ್ಟಿ ಮಾಡುವ ಪ್ರಕ್ರಿಯೆಯಲ್ಲಿ ಮಾನವ ಮಧ್ಯಸ್ಥಿಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸಾಂಸ್ಥಿಕ ಬದಲಾವಣೆ ತರುವುದಕ್ಕಾಗಿ ತಂತ್ರಜ್ಞಾನ ಬಳಸುವ ಉದ್ದೇಶ ತಮಗೆ ಇದೆ. ಇದರಿಂದ ಸಿಜೆಐ ವ್ಯಕ್ತಿಗತವಾಗಿ ಈ ಪ್ರಕ್ರಿಯೆಯಲ್ಲಿ ಪಾತ್ರ ವಹಿಸುವುದು ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.

ಆಡಳಿತಾತ್ಮಕ ಕೆಲಸಗಳಿಗೆ ಹೆಚ್ಚಿನ ಸಮಯವನ್ನು ಮೀಸಲಿಡಲು ಹೇಳಲಾಗಿದ್ದರೂ, ನ್ಯಾಯಾಂಗದ ಸಮಯ ತಮಗೆ ಹೆಚ್ಚು ಮುಖ್ಯ ಎಂದು ಸಿಜೆಐ ತಮ್ಮ ಭಾಷಣದಲ್ಲಿ ಹೇಳಿದರು. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ನರಸಿಂಹ ಮತ್ತು ಬೇಲಾ ತ್ರಿವೇದಿ ಅವರು ಜಿಲ್ಲಾ ನ್ಯಾಯಾಲಯಗಳಲ್ಲಿ ಪಡೆದಿರುವ ಅನುಭವದ ಬಗ್ಗೆ ಒತ್ತಿ ಹೇಳಿದ ಅವರು ಇಂತಹ ನ್ಯಾಯಮೂರ್ತಿಗಳ ಸಾಮೂಹಿಕ ಬುದ್ಧಿಮತ್ತೆ ಮತ್ತು ಪ್ರತಿಭೆಯನ್ನು ಬಳಸಿಕೊಳ್ಳುವುದು ತಮ್ಮ ಗುರಿಯಾಗಿದೆ ಎಂದು ತಿಳಿಸಿದರು.