CJI BR Gavai 
ಸುದ್ದಿಗಳು

ವಿಷ್ಣುವಿನ ವಿಗ್ರಹ ಕುರಿತ ಹೇಳಿಕೆಗೆ ವಿವಾದದ ಬಣ್ಣ: ಎಲ್ಲಾ ಧರ್ಮಗಳನ್ನು ಗೌರವಿಸುವೆ ಎಂದ ಸಿಜೆಐ ಗವಾಯಿ

ಪರಿಹಾರಕ್ಕಾಗಿ ವಿಷ್ಣು ದೇವರನ್ನು ಪ್ರಾರ್ಥಿಸಿ ಎಂದು ದಾವೆದಾರರಿಗೆ ಸಿಜೆಐ ಅವರು ನೀಡಿದ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

Bar & Bench

ಮಧ್ಯಪ್ರದೇಶದ ಖಜುರಾಹೊ ಸ್ಮಾರಕ ಸಮುಚ್ಛಯದಲ್ಲಿರುವ ಜವಾರಿ ದೇವಸ್ಥಾನದಲ್ಲಿ 7 ಅಡಿ ಎತ್ತರದ ವಿಷ್ಣುವಿನ ಶಿರಚ್ಛೇದಿತ ಪ್ರಾಚೀನ ವಿಗ್ರಹವನ್ನು ಸರಿಪಡಿಸಲು ಕೋರಿದ್ದ ಅರ್ಜಿ ವಿಚಾರಣೆಗೆ ನಿರಾಕರಿಸಿದ್ದ ವೇಳೆ ತಾವು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಎದ್ದ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರು ಗುರುವಾರ ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದರು.

ಪರಿಹಾರಕ್ಕಾಗಿ ದೇವರನ್ನೇ ಪ್ರಾರ್ಥಿಸಿ ಎಂದು ದಾವೆದಾರರಿಗೆ ಸಿಜೆಐ ಅವರು ಮಂಗಳವಾರ ನೀಡಿದ್ದ ಹೇಳಿಕೆ ಟೀಕೆಗೆ ಗುರಿಯಾಗಿತ್ತು. ಇದು ಹಿಂದೂ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ಎಂದು ಕೆಲವರು ಬಿಂಬಿಸಿದ್ದರು. ಆದರೆ ತಾನು ಅಗೌರವ ತೋರಿಲ್ಲ ಎಂದು ಸಿಜೆಐ ಇಂದು ತಿಳಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ ಘಟನೆಗಳಿಗೆ ಅತಿರೇಕದ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

“ಇಂಥದ್ದನ್ನು ಗಮನಿಸಿದ್ದೇವೆ. ಕ್ರಿಯೆಗೆ ಸಮನಾದ ಮತ್ತು ವಿರುದ್ಧ ಪ್ರತಿಕ್ರಿಯೆ ಇರುತ್ತದೆ ಎನ್ನುತದೆ ವಿಜ್ಞಾನಿ ಐಸಾಕ್‌ ನ್ಯೂಟನ್‌ನ ಮೂರನೇ ನಿಯಮ. ಆದರೆ ಈಗ ಪ್ರತಿಯೊಂದು ಕ್ರಿಯೆಗೂ ಸಾಮಾಜಿಕ ಮಾಧ್ಯಮದಲ್ಲಿ ಅಸಮಾನ ಪ್ರತಿಕ್ರಿಯೆ ದೊರೆಯುತ್ತಿದೆ” ಎಂದರು.

 ಪ್ರಕರಣ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ವ್ಯಾಪ್ತಿಗೆ ಬರುತ್ತದೆಯೇ ಹೊರತು ನ್ಯಾಯಾಲಯದ ವ್ಯಾಪ್ತಿಗೆ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಮಂಗಳವಾರ ತಿಳಿಸಿತ್ತು.

ಆಗ ನ್ಯಾ. ಗವಾಯಿ ಅವರು “ಹೋಗಿ ದೇವರನ್ನೇ ಈಗ ಏನಾದರೂ ಮಾಡುವಂತೆ ಬೇಡಿಕೊಳ್ಳಿ. ನೀವು ವಿಷ್ಣುವಿನ ಕಟ್ಟಾ ಭಕ್ತ ಎಂದು ಹೇಳುತ್ತೀರಿ. ಆದ್ದರಿಂದ ಈಗಲೇ ಹೋಗಿ ಪ್ರಾರ್ಥಿಸಿ. ಇದು ಪುರಾತತ್ತ್ವ ಇಲಾಖೆಗೆ ಸೇರಿದ ಸ್ಥಳವಾಗಿದ್ದು, ಎಎಸ್‌ಐ ಅನುಮತಿ ನೀಡಬೇಕಾಗಿದೆ. ಕ್ಷಮಿಸಿ, " ಎಂದಿದ್ದರು.

 ಮೊಘಲ್ ಆಕ್ರಮಣದ ಸಮಯದಲ್ಲಿ ವಿಗ್ರಹವು ವಿರೂಪಗೊಂಡಿದ್ದು, ಅದನ್ನು ಪುನಃಸ್ಥಾಪಿಸಲು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದರೂ ಅದು ಅದೇ ಸ್ಥಿತಿಯಲ್ಲಿದೆ ಎಂದು ರಾಕೇಶ್ ದಲಾಲ್ ಎಂಬುವವರು ದೂರಿದ್ದರು.