ಐಎಎಸ್ ಮತ್ತು ಐಪಿಎಸ್ ಸೇರಿ ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳ ವರ್ಗಾವಣೆಗೆ ಕನಿಷ್ಠ ಅವಧಿ ನಿಗದಿಪಡಿಸಲು ನೀತಿ ರೂಪಿಸದ ಹಾಗೂ ಕೇಂದ್ರ ನಾಗರಿಕ ಸೇವಾ ಮಂಡಳಿ (ಸಿಎಸ್‌ಬಿ) ರಚಿಸದಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
ವಕೀಲೆ ಸುಧಾ ಕಟ್ವಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿತು.
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶ ನೀಡಿ ಹಲವು ವರ್ಷ ಕಳೆದರೂ ಈವರೆಗೂ ಏಕೆ ರಾಜ್ಯದಲ್ಲಿ ಮಂಡಳಿ ರಚನೆ ಮಾಡಿಲ್ಲ ಎಂಬುದರ ಬಗ್ಗೆ ವಿವರಣೆ ನೀಡಿ ವರದಿ ಸಲ್ಲಿಸಬೇಕು ಎಂದು ಇದೇ ವೇಳೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಾಲಯವು ವಿಚಾರಣೆಯನ್ನು ಮೂರು ವಾರ ಕಾಲ ಮುಂದೂಡಿದೆ. ಅರ್ಜಿದಾರ ಪರ ವಕೀಲ ಎಸ್ ಉಮಾಪತಿ ವಾದ ಮಂಡಿಸಿದ್ದರು.
ನಾಗರಿಕ ಸೇವೆಯಲ್ಲಿರುವ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳು ದಕ್ಷತೆ ಹಾಗೂ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಬೇಕು. ಪದೇಪದೆ ವರ್ಗಾವಣೆ ಮಾಡುವುದರಿಂದ ಅವರ ಕಾರ್ಯಕ್ಷಮತೆಗೆ ಧಕ್ಕೆಯಾಗುತ್ತದೆ. ವರ್ಗಾವಣೆಗೆ ಕನಿಷ್ಠ ಅವಧಿ ನಿಗದಿ ಮಾಡದ ಕಾರಣ ರಾಜಕಾರಣಿಗಳು ಅಧಿಕಾರಿಗಳನ್ನು ಮನ ಬಂದಂತೆ ವರ್ಗಾವಣೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇದು ಭ್ರಷ್ಟಾಚಾರಕ್ಕೂ ದಾರಿ ಮಾಡಿಕೊಡುತ್ತಿದೆ. ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳ ವರ್ಗಾವಣೆಗೆ ಕನಿಷ್ಠ ಸೇವಾವಧಿ ನೀತಿ ರೂಪಿಸಿ ಜಾರಿಗೆ ತರಬೇಕು. ಅದಕ್ಕಾಗಿ ಸಿಎಸ್‌ಬಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ 2013ರ ಅಕ್ಟೋಬರ್ 30ರಂದು ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಅಲ್ಲದೆ, ಐಎಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಮತ್ತು ಶರತ್ ಅವರು ನಡುವಿನ ವರ್ಗಾವಣೆ ವ್ಯಾಜ್ಯ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಎರಡು ತಿಂಗಳಲ್ಲಿ ಸಿಎಸ್‌ಬಿ ರಚನೆ ಮಾಡುವಂತೆ ಸರ್ಕಾರಕ್ಕೆ 2021ರ ಜುಲೈ 8ರಂದು ಆದೇಶಿಸಿತ್ತು. ಆದರೆ, ಈ ಆದೇಶಗಳನ್ನು ಸರ್ಕಾರ ಈವರೆಗೂ ಪಾಲನೆ ಮಾಡಿಲ್ಲ. ಆದ್ದರಿಂದ, ನಾಗರಿಕ ಸೇವೆಯಲ್ಲಿರುವ ಅಧಿಕಾರಿಗಳ ವರ್ಗಾವಣೆಗೆ ಕನಿಷ್ಠ ಅವಧಿ ನಿಗದಿಪಡಿಸಲು ನೀತಿ ರೂಪಿಸಲು ಹಾಗೂ ಸಿಎಸ್‌ಬಿ ರಚಿಸಲು ರಾಜ್ಯ ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.