ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ವಿಚಾರ: ಐಪಿಎಸ್ ನಿಯಮ 6(1) ಪ್ರಶ್ನಿಸಿದ್ದ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ವಕೀಲ ಅಬು ಸೋಹೆಲ್‌ ಅವರು ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌ ಮತ್ತು ಎಸ್‌ ರವೀಂದ್ರ ಭಟ್‌ ಅವರಿದ್ದ ಪೀಠವು ವಜಾಗೊಳಿಸಿದೆ.
Indian Police Service
Indian Police Service
Published on

ಭಾರತೀಯ ಪೊಲೀಸ್‌ ಸೇವೆ (ಐಪಿಎಸ್) ವೃಂದ‌ ಅಧಿಕಾರಿಗಳ ವರ್ಗಾವಣೆ ಮತ್ತು ಪ್ರತಿನಿಯೋಜನೆಗೆ ಸಂಬಂಧಿಸಿದ ಅಧಿಕಾರವನ್ನು ರಾಜ್ಯ ಸರ್ಕಾರಗಳನ್ನು ಮೀರಿ ಕೇಂದ್ರ ಸರ್ಕಾರಕ್ಕೆ ನೀಡಿರುವ ಭಾರತೀಯ ಪೊಲೀಸ್‌ ಸೇವೆ (ವೃಂದ)‌ ನಿಯಮಗಳ 1954ರ ನಿಯಮ 6(1) ಅನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು ಸೋಮವಾರ ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ (ಅಬು ಸೋಹೆಲ್‌ ವರ್ಸಸ್‌ ಭಾರತ ಸರ್ಕಾರ).

ನಿಯಮ 6(1) ಭಾರತದ ಸಂವಿಧಾನ ಮತ್ತು ಸಾರ್ವಜನಿಕ ನೀತಿಯನ್ನು ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಅದನ್ನು ವಜಾಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ವಕೀಲ ಅಬು ಸೋಹೆಲ್‌ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌ ಮತ್ತು ಎಸ್‌ ರವೀಂದ್ರ ಭಟ್‌ ಅವರಿದ್ದ ವಿಭಾಗೀಯ ಪೀಠವು ವಜಾಗೊಳಿಸಿದೆ.

“ವೃಂದ ಅಧಿಕಾರಿಯನ್ನು ರಾಜ್ಯ ಸರ್ಕಾರ ಅಥವಾ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ಒಪ್ಪಿಗೆಯೊಂದಿಗೆ ಕೇಂದ್ರ ಸರ್ಕಾರ ಅಥವಾ ಇನ್ನೊಂದು ರಾಜ್ಯ ಸರ್ಕಾರದ ಅಡಿಯಲ್ಲಿ ಅಥವಾ ಕಂಪೆನಿ, ಸಂಘ ಅಥವಾ ವ್ಯಕ್ತಿಗಳ ಸಂಘಟನೆಯಡಿಯಲ್ಲಿ ಸೇವೆಗೆ ನಿಯೋಜಿಸಬಹುದು. ಇದು ಸಂಪೂರ್ಣವಾಗಿ ಅಥವಾ ಪ್ರಮುಖವಾಗಿ ಕೇಂದ್ರ ಸರ್ಕಾರದಿಂದ ಅಥವಾ ಇನ್ನೊಂದು ರಾಜ್ಯ ಸರ್ಕಾರದ ಒಡೆತನದಲ್ಲಿರುತ್ತದೆ ಅಥವಾ ನಿಯಂತ್ರಿಸಲ್ಪಡುತ್ತದೆ. ಯಾವುದೇ ಭಿನ್ನಾಭಿಪ್ರಾಯದ ಸಂದರ್ಭದಲ್ಲಿ, ಈ ವಿಷಯವನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ ಮತ್ತು ರಾಜ್ಯ ಸರ್ಕಾರ ಅಥವಾ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬದ್ಧವಾಗಿರುತ್ತವೆ” ಎಂದು ನಿಯಮ 6(1)ರಲ್ಲಿ ಹೇಳಲಾಗಿದೆ.

Also Read
ಐಜೆಆರ್‌ ವರದಿ ಬಿಡುಗಡೆ: ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಕುಸಿತ ಕಂಡ ಕರ್ನಾಟಕ, ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ

ಈ ನಿಯಮವನ್ನು ಹಿಂದೆ ಜಾರಿಗೊಳಿಸುವ ಸಂದರ್ಭದಲ್ಲಿ ಶಾಸಕಾಂಗದ ಉದ್ದೇಶವು ಸಾಂವಿಧಾನಿಕ ಆದೇಶದೊಂದಿಗೆ ಸಹಮತ ಹೊಂದಿದ್ದಿರಬಹುದು. ಆದಾಗ್ಯೂ, ಕೇಂದ್ರ ಮತ್ತು ರಾಜ್ಯಗಳು ನಿಯಮವನ್ನು ಅನಿಯಂತ್ರಿತವಾಗಿ ಬಳಸಿರುವುದರಿಂದ ಭಿನ್ನಾಭಿಪ್ರಾಯಗಳು ತಲೆದೋರಿವೆ. ಸಮಯ ಕಳೆದಂತೆ ಇಂಥ ಹಲವಾರು ನಿದರ್ಶನಗಳು ಮುನ್ನೆಲೆಗೆ ಬಂದಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

ಇದರಿಂದ ಕಾನೂನು ಸುವ್ಯವಸ್ಥೆ ಮತ್ತು ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಆಡಳಿತ ಸಂರಚನೆಯಲ್ಲಿ ಹಾನಿಯಾಗಿದೆ ಎಂದು ವಾದಿಸಲಾಗಿತ್ತು. ಈ ನಿಯಮದಡಿ ಕೇಂದ್ರ ಸರ್ಕಾರ ಕೈಗೊಳ್ಳುವ ಸ್ವೇಚ್ಛೆಯ ನಿರ್ಧಾರದಿಂದ ರಾಜ್ಯ ಸರ್ಕಾರಗಳು ಸಮಸ್ಯೆ ಅನುಭವಿಸಬೇಕಿದೆ ಎಂಬುದು ಅರ್ಜಿದಾರರ ವಾದವಾಗಿದೆ. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಭಿನ್ನಮತ ಸೃಷ್ಟಿಯಾಗಿದ್ದು, ಸಂವಿಧಾನದಡಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಿದೆ ಎಂದು ಸೋಹೆಲ್‌ ವಾದಿಸಿದ್ದರು.

Kannada Bar & Bench
kannada.barandbench.com