ರಾಜ್ಯದ ಪ್ರತಿಯೊಂದು ಕೆರೆಗಳು ಮತ್ತು ಅವುಗಳ ಬಫರ್ ಝೋನ್‌ಗಳ ಸರ್ವೇ ನಡೆಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.
ಜೊತೆಗೆ ಕರ್ನಾಟಕ ಕೆರೆ ಸಂರಕ್ಷಣಾ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ ಅಕ್ರಮ ನಿರ್ಮಾಣಗಳ ತೆರವಿಗೆ ಪಾಲಿಕೆಗಳಿಗೂ ನಿರ್ದೇಶನ ನೀಡಿದೆ.
ನ್ಯಾಯಾಲಯವು ಕೆರೆಗಳ ಸುತ್ತಮುತ್ತ 30 ಮೀಟರ್ ಬಫರ್ ಝೋನ್ ನಿಗದಿಪಡಿಸಿದೆ. ಬಫರ್ ಝೋನ್‌ಗಳಲ್ಲಿ ಯಾವುದೇ ನಿರ್ಮಾಣ ನಡೆದಿದ್ದರೆ ಅವುಗಳನ್ನು ತೆರವುಗೊಳಿಸಬೇಕು ಎಂದು ಆದೇಶಿಸಿರುವ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ಮತ್ತು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಈ ಬಗ್ಗೆ ಭೂ ಕಂದಾಯ ಕಾಯಿದೆ- 1964ರ ಅಡಿ ನಿರ್ದೇಶನ ನೀಡಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಮಾಲಿನ್ಯ ರಹಿತ ಪರಿಸರದಲ್ಲಿ ಬದುಕುವುದು ಹಕ್ಕಾಗಿದ್ದು ಕೆರೆಗಳು ಪರಿಸರದ ಮುಖ್ಯ ಅಂಗಗಳಾಗಿವೆ. ಕೆರೆಗಳ ಪುನರುಜ್ಜೀವನ ನಡೆಯದಿದ್ದರೆ ಈ ಹಕ್ಕು ಹರಣವಾಗುತ್ತದೆ. ಹೀಗಾಗಿ ಕೆರೆಗಳ ಸಂರಕ್ಷಣೆ ಎಲ್ಲರ ಕರ್ತವ್ಯ ಎಂದು ನ್ಯಾಯಾಲಯ ಹೇಳಿದೆ.