ಕಾನೂನು ಕ್ಷೇತ್ರಕ್ಕೆ ವೈವಿಧ್ಯಮಯ ಹಿನ್ನೆಲೆಯಿಂದ ಬರುವವರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದ ಇನ್‌ಕ್ರೀಸಿಂಗ್ ಡೈವರ್ಸಿಟಿ ಫಾರ್ ಇನ್‌ಕ್ರೀಸಿಂಗ್ ಅಕ್ಸೆಸ್ ಸಂಸ್ಥೆ (ಐಡಿಐಎ ಚಾರಿಟೆಬಲ್ ಟ್ರಸ್ಟ್) ಹಾಗೂ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಹಳೆಯ ವಿದ್ಯಾರ್ಥಿಗಳ ಒಕ್ಕೂಟಗಳು (ಸಿಎಎನ್) ಅರ್ಹ ಕಾನೂನು ಪದವೀಧರರಿಗೆ ಅನುಕೂಲ ಕಲ್ಪಿಸುವ 'ಪ್ರಾಜೆಕ್ಟ್ ಧನಂಜಯ್' ಎನ್ನುವ ಯೋಜನೆಯ ಒಡಂಬಡಿಕೆಗೆ ಸೋಮವಾರ ಸಹಿ ಹಾಕಿವೆ.
'ಪ್ರಾಜೆಕ್ಟ್ ಧನಂಜಯ್' ಸಿಎಎನ್‌ನ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದು ಆರ್ಥಿಕ ನೆರವು ಅಗತ್ಯವಿರುವ ಅರ್ಹ ಕಾನೂನು ಪದವೀಧರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೊದಲ ಒಂದು ವರ್ಷದ ಕಾಲ ಅವರಿಗೆ ಮಾಸಿಕ ಸ್ಟೈಪೆಂಡ್ ರೂಪದಲ್ಲಿ ಆರಂಭಿಕ ನೆರವು ಒದಗಿಸುವುದು ಪ್ರಾಜೆಕ್ಟ್ ಧನಂಜಯ್ ಗುರಿಯಾಗಿದೆ.
ಒಪ್ಪಂದ ಸಿಎಎನ್ ಮತ್ತು ಐಡಿಐಎ ಎರಡೂ ಸಂಸ್ಥೆಗಳ ಸಾಮಾನ್ಯ ಉದ್ದೇಶದ ಮುಂದುವರಿಕೆಯಾಗಿದ್ದು, ಆಯ್ದ 3 ಐಡಿಐಎ ವಿದ್ಯಾರ್ಥಿಗಳನ್ನು ವ್ಯಾಜ್ಯ ತೀರ್ಮಾನ ಕ್ಷೇತ್ರಕ್ಕೆ ಅರ್ಪಿಸಲು ಇದನ್ನು ಬಳಸಲಾಗುತ್ತದೆ.
ಒಪ್ಪಂದದ ಪ್ರಕಾರ ಪ್ರಾಜೆಕ್ಟ್ ಧನಂಜಯ್ ಅಡಿ ನೆರವು ಒದಗಿಸಲು ಐಡಿಐಎ ತನ್ನ ಹೊಸ ವಿದ್ಯಾರ್ಥಿಗಳ (ಅವರು ಪದವೀಧರರಾಗಿರಬಹುದು ಅಥವಾ 2021ರಲ್ಲಿ ಪದವಿ ಪಡೆಯಲಿರುವ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿರಬಹುದು) ಹೆಸರುಗಳನ್ನು ಸಿಎಎನ್‌ಗೆ ಶಿಫಾರಸು ಮಾಡಬಹುದು.ದನ
ಹೀಗೆ ಐಡಿಐಎ ಅಡಿ ಶಿಫಾರಸ್ಸುಗೊಂಡ ವಿದ್ಯಾರ್ಥಿಗಳಿಗೆ 'ಧನಂಜಯ್' ಅಡಿಯಲ್ಲಿನ ಒಟ್ಟು 5-6 ವಿಭಾಗಗಳಲ್ಲಿ, ಮೂರರಲ್ಲಿ ಆದ್ಯತೆ ನೀಡಲು ಸಿಎಎನ್ ಮುಂದಾಗಿದೆ. ಪ್ರಸಕ್ತ ಸಾಲಿನಲ್ಲಿ ಜುಲೈ 2021 ರಿಂದ ಮೇ 2022 ರವರೆಗೆ 10 ತಿಂಗಳ ಕಾಲ ಸ್ಟೈಪೆಂಡ್ ನೀಡಲಾಗುತ್ತದೆ.
ಒಪ್ಪಂದದ ಕುರಿತಂತೆ ತಮ್ಮ ಅಭಿಪ್ರಾಯ ಹಂಚಿಕೊಂಡ ಐಡಿಐಎ ವ್ಯವಸ್ಥಾಪಕ ಟ್ರಸ್ಟಿ ಶಿಶಿರ ರುದ್ರಪ್ಪ ಅವರು, “ಈ ಒಡಂಬಡಿಕೆಯಿಂದಾಗಿ ಸಿಎಎನ್ ಮತ್ತು ಐಡಿಐಎ ಗುರಿಗಳು ಈಡೇರಲಿದ್ದು, ಇದು ಯುವ ಮತ್ತು ಕ್ರಿಯಾಶೀಲ ಮನಸ್ಸುಗಳನ್ನು ಹಣಕಾಸಿನ ಅಡತಡೆಗಳಿಲ್ಲದೆ ತಮ್ಮ ಕನಸುಗಳ ಬೆನ್ನತ್ತಲು ಅನುವು ಮಾಡಿಕೊಡುತ್ತದೆ" ಎಂದಿದ್ದಾರೆ.
ಫಲಾನುಭವಿ ವಿದ್ಯಾರ್ಥಿಗಳನ್ನು ಉದ್ದೇಶಿಸುವ ವಿವಿಧ ಯೋಜನೆಗಳ ಪರಿಣಾಮವನ್ನು ಹಲವು ಪಟ್ಟು ವಿಸ್ತರಿಸಲು, ಅನೇಕ ರಂಗಗಳಲ್ಲಿ ಐಡಿಐಎ ಮತ್ತು ಸಿಎಎನ್ ಸಹಭಾಗಿತ್ವ ಹೊಂದಬಹುದು ಎಂದು ಕೂಡ ಶಿಶಿರ ರುದ್ರಪ್ಪ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಎರಡೂ ಸಂಸ್ಥೆಗಳ ನಡುವಿನ ಈ ಯತ್ನವನ್ನು ಸಿಎಎನ್ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿದ್ಧಾರ್ಥ್ ಆರ್ ಗುಪ್ತಾ ಭವಿಷ್ಯದಲ್ಲಿ ಹೆಮ್ಮರವಾಗಲಿರುವ ಸಸಿಗೆ ಹೋಲಿಸಿದರು. "ನ್ಯಾಯದಾನವನ್ನು ಪಡೆಯಲಾಗದವರೆಡೆಗೆ ನ್ಯಾಯದ ತೋಳುಗಳನ್ನು ಸಮರ್ಥವಾಗಿ ಚಾಚುವಂತೆ ಮಾಡಬಲ್ಲ ಹಿರಿಯ ವಕೀಲರನ್ನು ಮತ್ತು ನ್ಯಾಯಪೀಠ ಅಲಂಕರಿಸಲು ಹೊರಟ ನ್ಯಾಯಾಧೀಶರನ್ನು ರೂಪಿಸುವ ಗುರಿಯೊಂದಿಗೆ ದಶಕಗಳ ಕಾಲ ಈ ಯೋಜನೆಯನ್ನು ಮುಂದುವರೆಸುವ ಇಚ್ಛೆ ಸಿಎಎನ್‌ಗೆ ಇದೆ" ಎಂದರು.