ಯಶವಂತಪುರ ಹೋಬಳಿಯ ಚೌಡೇಶ್ವರಿನಗರದ ಲಗ್ಗೆರೆ 50 ಅಡಿ ಮುಖ್ಯರಸ್ತೆಯಲ್ಲಿ ನಿರ್ಮಾಣವಾಗಿದೆ ಎನ್ನಲಾದ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಮಾರ್ಚ್ 4ರಂದು ನಡೆಸಲು ಉದ್ದೇಶಿಸಿರುವ ದೇವರ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಬಿಬಿಎಂಪಿ ಮತ್ತು ಪೊಲೀಸರಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.
ಕೋವಿಡ್-19 ಲಾಕ್‌ಡೌನ್ ನಿರ್ಬಂಧ ದಿನಗಳಲ್ಲಿ ಲಗ್ಗೆರೆ ಮುಖ್ಯರಸ್ತೆಯ ಪಾದಚಾರಿ ಮಾರ್ಗ ಒತ್ತುವರಿ ಮಾಡಿ ದೇವಾಲಯ ನಿರ್ಮಿಸಲಾಗಿದೆ ಎಂದು ಆಕ್ಷೇಪಿಸಿ ಡಿ ದಾಕ್ಷಾಯಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಮಾರ್ಚ್ 4ರಂದು ನಡೆಸಲು ಉದ್ದೇಶಿಸಿರುವ ದೇವರ ವಿಗ್ರಹ ಪ್ರತಿಷ್ಠಾನ ಕಾರ್ಯಕ್ರಮದ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವುದನ್ನು ಬಿಬಿಎಂಪಿ ವಾರ್ಡ್ ನಂ-73ರ ಹಾಲಿ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಮೃತ್ಯುಂಜಯ ಅವರು ಖಾತರಿಪಡಿಸಬೇಕು. ಈ ವಿಚಾರದಲ್ಲಿ ಅಗತ್ಯವಿದ್ದರೆ ಆರ್‌ಎಂಸಿ ಯಾರ್ಡ್ ಸಹಾಯಕ ಪೊಲೀಸ್ ಆಯುಕ್ತ ಹಾಗೂ ರಾಜಗೋಪಾಲ ನಗರ ಠಾಣೆ ಇನ್ಸ್‌ಪೆಕ್ಟರ್ ಅವರ ನೆರವು ಪಡೆಯಬಹುದು ಎಂದು ಪೀಠ ನಿರ್ದೇಶಿಸಿದೆ.
ಅಲ್ಲದೇ, ಸಂಬಂಧಪಟ್ಟ ನಗರ ಯೋಜನೆ ಇಲಾಖೆ ಸಹಾಯಕ ನಿರ್ದೇಶಕರು, ದೇವಸ್ಥಾನ ನಿರ್ಮಾಣವಾಗಿದೆ ಎನ್ನಲಾದ ಲಗ್ಗೆರೆ 50 ಅಡಿ ಮುಖ್ಯರಸ್ತೆಯ ಪಾದಚಾರಿ ಮಾರ್ಗದ ಕುರಿತು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ರಾಜಗೋಪಾಲ ನಗರ ಠಾಣೆಯ ಇನ್ಸ್‌ಪೆಕ್ಟರ್ ಈ ಆದೇಶದ ಪ್ರತಿಯನ್ನು ಶ್ರೀದುರ್ಗಾಪರಮೇಶ್ವರಿ ಸೇವಾ ಸಮಿತಿಗೆ ತಲುಪಿಸಿ, ಆ ಕುರಿತ ವರದಿಯನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಪ್ರಕರಣದಲ್ಲಿ ವಾದಾಂಶ ಮಂಡನೆಯ ನಂತರ ಈ ಆದೇಶ ತೆರವುಗೊಳಿಸಲು ಕೋರುವುದಕ್ಕೆ ದುರ್ಗಾಪರಮೇಶ್ವರಿ ಸೇವಾ ಸಮಿತಿ ಸ್ವತಂತ್ರವಾಗಿದೆ ಎಂದು ಪೀಠ ಆದೇಶದಲ್ಲಿ ನಿರ್ದೇಶಿಸಿದೆ.
ಅರ್ಜಿದಾರರ ಪರ ವಕೀಲ ಎನ್ ಪಿ ಅಮೃತೇಶ್ ಮನವಿಯಂತೆ ಆರ್‌ಎಂಸಿ ಯಾರ್ಡ್ ಸಹಾಯಕ ಪೊಲೀಸ್ ಆಯುಕ್ತರು ಮತ್ತು ರಾಜಗೋಪಾಲ ನಗರ ಠಾಣೆಯ ಇನ್ಸ್‌ಪೆಕ್ಟರ್ ಅವರನ್ನು ಅರ್ಜಿಯಲ್ಲಿ ಹೆಚ್ಚುವರಿ ಪ್ರತಿವಾದಿಯಾಗಿ ಮಾಡಲು ಪೀಠ ಇದೇ ವೇಳೆ ಆದೇಶಿಸಿದೆ.
ವಿವಾದಿತ ಜಾಗದ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು 2023ರ ಡಿಸೆಂಬರ್ 21ರಂದು ಮತ್ತು 2024ರ ಫೆ.20ರಂದು ಹೊರಡಿಸಿದ್ದ ಆದೇಶ ಪಾಲಿಸದ ನಗರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರ ವಿರುದ್ಧ ಪೀಠ ತೀವ್ರ ಅಸಮಾಧಾನ ಹೊರಹಾಕಿತು.
ನ್ಯಾಯಾಲಯದ ಆದೇಶದಂತೆ ವಿವಾದಿತ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಿಲ್ಲ. ವರದಿ ಸಲ್ಲಿಸದೇ ಇರುವುದಕ್ಕೆ ಕಾರಣ ಸಹ ತಿಳಿಸಿಲ್ಲ. ಇದು ನ್ಯಾಯಾಲಯದ ನಿರ್ದೇಶನವನ್ನು ಉದ್ದೇಶಪೂರ್ವಕವಾಗಿ ಪಾಲಿಸದಿರುವುದನ್ನು ತೋರಿಸುತ್ತದೆ. ಮತ್ತೊಂದೆಡೆ ರಾಜಗೋಪಾಲ ನಗರ ಠಾಣಾ ಪೊಲೀಸರು ನ್ಯಾಯಾಲಯದ ಈ ಆದೇಶ ಪ್ರತಿಯನ್ನು ದುರ್ಗಾಪರಮೇಶ್ವರಿ ಸೇವಾ ಸಮಿತಿಗೆ ತಲುಪಿಸಿಲ್ಲ ಎಂದು ಪೀಠ ಕಿಡಿಕಾರಿದೆ.
ಕೋವಿಡ್-19 ಲಾಕ್‌ಡೌನ್ ನಿರ್ಬಂಧ ದಿನಗಳಲ್ಲಿ ಲಗ್ಗೆರೆ 50 ಅಡಿ ಮುಖ್ಯರಸ್ತೆಯ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿ ದುರ್ಗಾಪರಮೇಶ್ವರಿ ಸೇವಾ ಸಮಿತಿಯು ದುರ್ಗಾಪರಮೇಶ್ವರಿ ದೇವಸ್ಥಾನ ನಿರ್ಮಿಸಿದೆ. ಹೀಗಾಗಿ, ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸಲು ಬಿಬಿಎಂಪಿಗೆ ಸೂಚಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಜೊತೆಗೆ, ಅರ್ಜಿ ಇತ್ತೀಚೆಗೆ ವಿಚಾರಣೆಗೆ ಬಂದಾಗ ದೇವಾಲಯದಲ್ಲಿ ದೇವರ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ಮಾರ್ಚ್ 4ರಂದು ನಿಗದಿಯಾಗಿದೆ. ಒಂದೊಮ್ಮೆ ದೇವರ ವಿಗ್ರಹ ಪ್ರತಿಷ್ಠಾಪನೆ ನೆರವೇರಿದರೆ, ಒತ್ತುವರಿ ತೆರವುಗೊಳಿಸಲು ಕಷ್ಟವಾಗುತ್ತದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಅದನ್ನು ಪರಿಗಣಿಸಿದ ನ್ಯಾಯಾಲಯವು ಈ ಆದೇಶ ಮಾಡಿ ವಿಚಾರಣೆಯನ್ನು ಎರಡು ವಾರ ಮುಂದೂಡಿದೆ.