Punith Kerehalli and Karnataka HC 
ಸುದ್ದಿಗಳು

ಇದ್ರೀಷ್‌ ಪಾಷಾ ಸಾವು ಪ್ರಕರಣ: ಪುನೀತ್‌ ಕೆರೆಹಳ್ಳಿ ವಿರುದ್ಧದ ಪ್ರಕರಣ ವಿಚಾರಣೆಗೆ ಹೈಕೋರ್ಟ್‌ ತಡೆ

ಕನಕಪುರದ 3ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಪುನೀತ್ ಕೆರೆಹಳ್ಳಿ ಹಾಗೂ ಗೋಪಿ ಗೌಡ ಅರ್ಜಿ ಸಲ್ಲಿಸಿದ್ದಾರೆ.

Bar & Bench

ಜಾನುವಾರು‌ ಅಕ್ರಮ ಸಾಗಣೆ ಆರೋಪದ ಮೇಲೆ ವ್ಯಕ್ತಿಯೊಬ್ಬರ‌ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಮತ್ತು ಉದ್ದೇಶ ಪೂರ್ವಕವಲ್ಲದ ನರಹತ್ಯೆ  ಆರೋಪದ ಮೇಲೆ ಪುನೀತ್ ಕೆರೆಹಳ್ಳಿ ಹಾಗೂ ಗೋಪಿ ಗೌಡ ಎಂಬುವವರ ವಿರುದ್ಧ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದ 3ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿರುವ ಮೂರು ಪ್ರತ್ಯೇಕ ಪ್ರಕರಣಗಳ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆ ನೀಡಿದೆ.

ಕನಕಪುರದ 3ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಪುನೀತ್ ಕೆರೆಹಳ್ಳಿ ಹಾಗೂ ಗೋಪಿ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ‌ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಅರ್ಜಿ ಸಂಬಂಧ ಸಾತನೂರು ಪೊಲೀಸರು, ಪೊಲೀಸ್ ಅಧಿಕಾರಿ ಸಿ ಎ ಹರೀಶ್ ಹಾಗೂ ಪ್ರಕರಣದ ದೂರುದಾರಾದ ಸಯ್ಯದ್ ಜಹೀರ್ ಹಾಗೂ ಸಯ್ಯದ್ ಯೂನಿಸ್ ಪಾಷಾ ಎಂಬುವವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

ಸಯ್ಯದ್ ಜಹೀರ್ ಎಂಬುವವರು 2023ರಂದು‌ ಮಾರ್ಚ್‌ 31ರಂದು ಸಾತನೂರು‌ ಪೊಲೀಸ್ ಠಾಣೆಗೆ ದೂರು ನೀಡಿ, ಕಂಟೈನರ್‌ನಲ್ಲಿ ಮಂಡ್ಯದ ಗುತ್ತಲು ಕಾಲೋನಿಯಲ್ಲಿ 16 ಜಾನುವಾರುಗಳನ್ನು ಲೋಡ್ ಮಾಡಿಕೊಂಡು, ತಮಿಳುನಾಡಿಗೆ ಸಾಗಿಸಲು ಇದ್ರೀಷ್ ಪಾಷಾ ಹಾಗೂ ಇರ್ಫಾನ್ ಜೊತೆಗೆ ಹೊರಟಿದ್ದೆವು. ರಾತ್ರಿ‌ 11 ಗಂಟೆಗೆ ಸಾತನೂರು ತಲುಪಿದಾಗ ಸಂತೆಮಾಳ ಸರ್ಕಲ್ ಬಳಿ ಪುನೀತ್ ಕೆರೆಹಳ್ಳಿ ಸೇರಿ ಐವರು ನಮ್ಮ‌ನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿ ಅವಮಾನ ಮಾಡಿದರು. ಅಲ್ಲದೇ, ಇದ್ರೀಷ್ ಪಾಷಾ ಸಾವಿಗೆ ಕಾರಣವಾಗಿದ್ದಾರೆ ಎಂದು ಆರೋಪಿಸಿದ್ದರು. ‌

ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ಆರೋಪ‌ ಪಟ್ಟಿ ಸಲ್ಲಿಸಿದ್ದರು. ಈ ಮೂರು ಪ್ರಕರಣಗಳ ಕುರಿತಂತೆ ಕನಕಪುರದ 3ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಆ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದಾರೆ.