ಇದ್ರೀಷ್‌ ಪಾಷಾ ಸಾವು ಪ್ರಕರಣ: ಪುನೀತ್‌ ಕೆರೆಹಳ್ಳಿ ಸೇರಿ ಐವರಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಆರೋಪಿಗಳಾದ ಪುನೀತ್‌ ಕುಮಾರ್‌ ಅಲಿಯಾಸ್‌ ಪುನೀತ್‌ ಕೆರೆಹಳ್ಳಿ, ಗೋಪಿ, ಸುರೇಶ್‌, ಪವನ್‌ ಕುಮಾರ್‌ ಎ ಎನ್‌, ಪಿ ಲಿಂಗಪ್ಪ ಅವರಿಗೆ ಜಾಮೀನು ಮಂಜೂರು ಮಾಡಿ ನ್ಯಾಯಾಲಯ ಆದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
Puneeth Kerehalli and Karnataka HC
Puneeth Kerehalli and Karnataka HC

ಜಾನುವಾರು ಸಾಗಾಟದ ಸಂದರ್ಭದಲ್ಲಿ ಇದ್ರೀಶ್ ಪಾಷಾ ಎಂಬುವವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕುಮಾರ್‌ ಅಲಿಯಾಸ್‌ ಪುನೀತ್‌ ಕೆರೆಹಳ್ಳಿ ಹಾಗೂ ಇತರೆ ನಾಲ್ವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ಜಿ ಉಮಾ ಅವರ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.

ಆರೋಪಿಗಳಾದ ಪುನೀತ್‌ ಕುಮಾರ್‌ ಅಲಿಯಾಸ್‌ ಪುನೀತ್‌ ಕೆರೆಹಳ್ಳಿ, ಗೋಪಿ, ಸುರೇಶ್‌, ಪವನ್‌ ಕುಮಾರ್‌ ಎ ಎನ್‌, ಪಿ ಲಿಂಗಪ್ಪ ಅವರಿಗೆ ಜಾಮೀನು ಮಂಜೂರು ಮಾಡಿ ನ್ಯಾಯಾಲಯ ಆದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ ಶ್ಯಾಮ್‌ ಅವರು “ಮರಣೋತ್ತರ ಪರೀಕ್ಷೆಯಲ್ಲಿ ಇದ್ರೀಶ್‌ ಪಾಷಾ ಅವರ ದೇಹದಲ್ಲಿ ತರಚಿದ ಗಾಯಗಳ ಬಗ್ಗೆ ಮಾತ್ರ ಉಲ್ಲೇಖವಾಗಿದ್ದು, ಗಂಭೀರ ಗಾಯಗಳ ಬಗ್ಗೆ ಏನೂ ಮಾಹಿತಿ ಇಲ್ಲ. ಪ್ರಕರಣವು ಸಾತನೂರು ಠಾಣೆಯ 100 ಮೀಟರ್‌ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಹೀಗಿದ್ದಾಗ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗಲೇಬೇಕಿತ್ತು. ಈಗ ತನಿಖೆ ಪೂರ್ಣಗೊಂಡಿದ್ದು, ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ಪೂರ್ಣಗೊಳಿಸಲಾಗಿದೆ. ಏನೇನು ವಶಪಡಿಸಿಕೊಳ್ಳಬೇಕು ಎಲ್ಲವೂ ಪೂರ್ಣಗೊಂಡಿದೆ. ಇನ್ನೂ ಆರೋಪ ಪಟ್ಟಿ ಸಲ್ಲಿಕೆಯಾಗಿ, ವಿಚಾರಣೆ ನಡೆಯಬೇಕಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದ್ದರು. ಈ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.

ಮಾರ್ಚ್‌ 31ರಂದು ಮಂಡ್ಯದ ಕಡೆಯಿಂದ ಬರುತ್ತಿದ್ದ ಜಾನುವಾರು ಸಾಗಣೆ ವಾಹನವೊಂದನ್ನು ಸಾತನೂರು ಪೊಲೀಸ್‌ ಠಾಣೆ ಸಮೀಪ ಅಡ್ಡಗಟ್ಟಿದ್ದ ಪುನೀತ್‌ ಕೆರೆಹಳ್ಳಿ ಹಾಗೂ ಆತನ ಸಹಚರರು ವಾಹನದಲ್ಲಿ ಇದ್ದವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.

Also Read
ಇದ್ರೀಶ್ ಪಾಷಾ ಪ್ರಕರಣ: ಪುನೀತ್‌ ಕೆರೆಹಳ್ಳಿ ಸೇರಿ ಐವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ ಕನಕಪುರ ನ್ಯಾಯಾಲಯ

ಏಪ್ರಿಲ್‌ 1ರಂದು ಬೆಳಿಗ್ಗೆ ಘಟನಾ ಸ್ಥಳದಿಂದ ಅಂದರೆ ಪೊಲೀಸ್‌ ಠಾಣೆಯಿಂದ 100 ಮೀಟರ್‌ ದೂರದಲ್ಲಿ ಇದ್ರೀಶ್ ಪಾಷಾ ಅವರ ಶವ ಪತ್ತೆಯಾಗಿತ್ತು. ಪುನೀತ್‌ ಮತ್ತು ಸಹಚರರಿಂದ ಹಲ್ಲೆ ನಡೆದಿದೆ ಎಂದು ಪಾಷಾ ಅವರ ಸಹೋದರ ಯೂನಸ್‌ ಪಾಷಾ ದೂರು ನೀಡಿದ್ದರು. ಇದನ್ನು ಆಧರಿಸಿ ಆರೋಪಿಗಳ ವಿರುದ್ಧ ಸಾತನೂರು ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 302, 324, 341, 504, 506 ಜೊತೆಗೆ 34 ಅಡಿ ಪ್ರಕರಣ ದಾಖಲಾಗಿತ್ತು. ಏಪ್ರಿಲ್‌ 5ರಂದು ಆರೋಪಿಗಳನ್ನು ರಾಜಸ್ಥಾನದ ಬನ್‌ಸ್ವಾರ ಬಳಿ ರಾಮನಗರ ಪೊಲೀಸರು ಬಂಧಿಸಿದ್ದರು.

ವಿಚಾರಣಾಧೀನ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಅಲ್ಲಿ ಅರ್ಜಿದಾರರ ಪರವಾಗಿ ವಕೀಲ ಮಧುಕರ್‌ ದೇಶಪಾಂಡೆ ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com