“ಪತ್ರಕರ್ತ ಅರ್ನಾಬ್ ಗೋಸ್ವಾಮಿ ಪ್ರಕರಣದಲ್ಲಿ ಮಧ್ಯಂತರ ಆದೇಶ ವಿಸ್ತರಿಸದಿದ್ದರೆ ಬಿಡ್ತಾರಾ? ತಕ್ಷಣ ಬ್ರೇಕಿಂಗ್ ನ್ಯೂಸ್ ಆರಂಭವಾಗುತ್ತದೆ”ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಲಘು ದಾಟಿಯಲ್ಲಿ ಹೇಳಿತು.
ಟರ್ಕಿಯ ಇಸ್ತಾನ್‌ಬುಲ್ ಕಾಂಗ್ರೆಸ್ ಕೇಂದ್ರವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಚೇರಿ ಎಂದು ಟ್ವೀಟ್ ಮಾಡಿದ್ದ ಬಿಜೆಪಿಯ ಸಾಮಾಜಿಕ ಮಾಧ್ಯಮದ ಮುಖ್ಯಸ್ಥ ಅಮಿತ್ ಮಾಳವಿಯಾ ಮತ್ತು ಅದನ್ನು ರಿಪಬ್ಲಿಕ್ ಸುದ್ದಿ ವಾಹಿನಿಯಲ್ಲಿ ದುರುದ್ದೇಶಪೂರ್ವಕ ಪ್ರಸಾರ ಮಾಡಿದ ಆರೋಪದ ಸಂಬಂಧ ವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಸುಯೋಗ್ ಹೇರಳೆ ಅವರು “ಅಮಿತ್ ಮಾಳವೀಯಾ ಮತ್ತು ಅರ್ನಾಬ್ ಗೋಸ್ವಾಮಿ ವಿರುದ್ಧದ ಪ್ರಕರಣದಲ್ಲಿ ಮಧ್ಯಂತರ ಆದೇಶ ವಿಸ್ತರಿಸಬೇಕು” ಎಂದು ಕೋರಿದರು.
ಆಗ ಪೀಠವು “ಅರ್ಜಿದಾರರು ಯಾರೆಂದು ಗೊತ್ತಾಗಲಿಲ್ಲ. ಜಗತ್ತು ನೋಡಬೇಕಿದೆ (ವರ್ಲ್ಡ್ ವಾಂಟ್ಸ್ ಟು ನೋ). ಅವರ ಪ್ರಕರಣದಲ್ಲಿ ಮಧ್ಯಂತರ ಆದೇಶ ವಿಸ್ತರಿಸದಿದ್ದರೆ ಬಿಡುತ್ತಾರಾ? ಆಮೇಲೆ ಬ್ರೇಕಿಂಗ್ ನ್ಯೂಸ್ ಆರಂಭವಾಗುತ್ತದೆ..” ಎಂದು ಲಘು ದಾಟಿಯಲ್ಲಿ ಹೇಳಿದರು.
ವಿಚಾರಣೆ ಆರಂಭವಾಗುತ್ತಿದ್ದಂತೆ ಸರ್ಕಾರದ ವಕೀಲರು "ವಿಶೇಷ ಸರ್ಕಾರಿ ಅಭಿಯೋಜಕರು ವಾದಿಸಲು ಬರಲಿದ್ದಾರೆ. ಅರ್ಜಿಯ ವಿಚಾರಣೆಯನ್ನು ಕೆಲ ಕಾಲ ಮುಂದೂಡಬೇಕು" ಎಂದು ಕೋರಿದರು. ಇದಕ್ಕೆ ಪೀಠವು "ಈಗ ಅರ್ಜಿಯನ್ನು ಇತ್ಯರ್ಥಪಡಿಸುತ್ತಿಲ್ಲ. ಮುಂದೂಡಲಾಗುತ್ತಿದೆ. ಅಲ್ಲದೇ, ವಿಸ್ತೃತವಾಗಿ ಆಲಿಸಿ, ಮಧ್ಯಂತರ ಆದೇಶ ಮಾಡಲಾಗಿದೆಯಲ್ಲವೇ" ಎಂದಿತು.
ಅಂತಿಮವಾಗಿ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಅರ್ನಾಬ್ ಗೋಸ್ವಾಮಿ ಮತ್ತು ಅಮಿತ್ ಮಾಳವಿಯಾ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ತಡೆ ನೀಡಿ ಮೇ 22ರಂದು ಆದೇಶಿಸಿರುವ ಮಧ್ಯಂತರ ಆದೇಶವನ್ನು ಹೈಕೋರ್ಟ್ ವಿಸ್ತರಿಸಿತು. ಅಲ್ಲದೇ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಂಬಂಧ ಬೆಸೆದು ಟ್ವೀಟ್ ಮಾಡಿದ ಮತ್ತೊಂದು ಪ್ರಕರಣದ ಸಂಬಂಧ ಅಮಿತ್ ಮಾಳವಿಯಾ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲೂ ಮಧ್ಯಂತರ ಆದೇಶ ವಿಸ್ತರಿಸಿ, ಎಲ್ಲಾ ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯವು ಜುಲೈ 14ಕ್ಕೆ ಮುಂದೂಡಿತು.