
ಟರ್ಕಿಯ ಇಸ್ತಾನ್‌ಬುಲ್ ಕಾಂಗ್ರೆಸ್ ಕೇಂದ್ರವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಚೇರಿ ಎಂದು ಟ್ವೀಟ್ ಮಾಡಿದ್ದ ಬಿಜೆಪಿಯ ಸಾಮಾಜಿಕ ಮಾಧ್ಯಮದ ಮುಖ್ಯಸ್ಥ ಅಮಿತ್ ಮಾಳವಿಯಾ ಮತ್ತು ಅದನ್ನು ರಿಪಬ್ಲಿಕ್ ಸುದ್ದಿ ವಾಹಿನಿಯಲ್ಲಿ ದುರುದ್ದೇಶಪೂರ್ವಕ ಪ್ರಸಾರ ಮಾಡಿದ ಆರೋಪದ ಸಂಬಂಧ ವಾಹಿನಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
ಅಲ್ಲದೇ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸಂಬಂಧ ಬೆಸೆದು ಟ್ವೀಟ್ ಮಾಡಿದ ಮತ್ತೊಂದು ಪ್ರಕರಣದ ಸಂಬಂಧ ಅಮಿತ್ ಮಾಳವಿಯಾ ವಿರುದ್ಧ ದಾಖಲಾಗಿರುವ ಇನ್ನೊಂದು ಎಫ್‌ಐಆರ್‌ಗೂ ಹೈಕೋರ್ಟ್ ತಡೆ ನೀಡಿದೆ.
ಅಮಿತ್ ಮಾಳವಿಯಾ ಮತ್ತು ಅರ್ನಾಬ್ ಗೋಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ರಜಾಕಾಲೀನ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಎರಡೂ ಪ್ರಕರಣಗಳಿಗೂ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ, ಅರ್ನಾಬ್ ಮತ್ತು ಮಾಳವಿಯಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು “ಕಾಂಗ್ರೆಸ್ ಪಕ್ಷವು ಟರ್ಕಿಯಲ್ಲಿ ಕಚೇರಿ ಹೊಂದಿರುವುದು ನಿರ್ವಿವಾದ. ಈ ಸಂಬಂಧ ಇತರೆ ಸುದ್ದಿ ಮಾಧ್ಯಮಗಳು ಪ್ರಕಟಿಸಿರುವ ಮಾಹಿತಿ ಪರಿಶೀಲಿಸಬಹುದು. ಅರ್ನಾಬ್ ಗೋಸ್ವಾಮಿ ಅವರು ತಮ್ಮ ರಿಪಬ್ಲಿಕ್ ಟಿವಿಯಲ್ಲಿ ಈ ಸುದ್ದಿ ಪ್ರಸಾರ ಮಾಡಿ, ದೇಶದಲ್ಲಿ ನಡೆಯುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಟರ್ಕಿಯು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದೆ. ಅಲ್ಲಿ ಕಾಂಗ್ರೆಸ್ ತನ್ನ ಕಚೇರಿ ಹೊಂದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಇದೇ ವಿಚಾರವನ್ನು ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟಿಸಲಾಗಿದ್ದು, ತಪ್ಪಾದ ಚಿತ್ರವನ್ನು ಬಳಕೆ ಮಾಡಲಾಗಿತ್ತು. ಆನಂತರ ಅದನ್ನು ಹಿಂಪಡೆದು, ತಿದ್ದುಪಡಿ ಪ್ರಕಟಿಸಲಾಗಿದೆ. ಇದು ಅಚಾತುರ್ಯದಿಂದ ನಡೆದ ಘಟನೆಯಾಗಿದೆ. ಇದರಲ್ಲಿ ಯಾವುದೇ ಅಪರಾಧವಾಗುವಂಥ ಪ್ರಕರಣವಿಲ್ಲ” ಎಂದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಅಪಪ್ರಚಾರದ ದೃಷ್ಟಿಯಿಂದ ಸುದ್ದಿ ಪ್ರಕಟಿಸಲಾಗಿದ್ದು, ಅದು ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿಲ್ಲ. ಸುಳ್ಳು ಸುದ್ದಿಯನ್ನು ಪ್ರಕಟಿಸಲಾಗಿದೆ. ರಿಪಬ್ಲಿಕ್ ಟಿವಿ ತಿದ್ದುಪಡಿ ಪ್ರಕಟಿಸಿರಬಹುದು, ಸುಳ್ಳು ಸುದ್ದಿ ಪ್ರಕಟ/ಪ್ರಸಾರ ಮಾಡಿದ್ದಾರೆ… ಮಧ್ಯಪ್ರದೇಶದಲ್ಲಿ ಸಚಿವರೊಬ್ಬರು ಕರ್ನಲ್ ಸೋಫಿಯಾ ಕುರೇಷಿ ವಿರುದ್ಧ ವ್ಯಕ್ತಪಡಿಸಿದ್ದ ಅಭಿಪ್ರಾಯದ ಸಂಬಂಧ ಮಧ್ಯಪ್ರದೇಶ ಹೈಕೋರ್ಟ್ ತನಿಖೆಗೆ ಆದೇಶಿಸಿದೆ. ಪೊಲೀಸರು ಅರ್ನಾಬ್ ಬಂಧಿಸಲು ಹೋಗಿದ್ದಾರೆ ಎಂದು ಅರುಣ್ ಶ್ಯಾಮ್ ಹೇಳಿದ್ದಾರೆ. ನನಗೆ ಇರುವ ಮಾಹಿತಿ ಪ್ರಕಾರ ಅರ್ನಾಬ್‌ಗೆ ನೋಟಿಸ್ ನೀಡಲು ಮಾತ್ರ ಪೊಲೀಸರು ಹೋಗಿದ್ದರು. ನೋಟಿಸ್ ನೀಡಲಾಗಿದೆ. ಅರ್ನಾಬ್ ಮತ್ತು ಮಾಳವಿಯಾ ತನಿಖೆಗೆ ಸಹಕರಿಸಬೇಕು” ಎಂದರು.
“ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುವುದು ಆಶ್ವರ್ಯಕರವೇನಲ್ಲ...” ಎಂಬ ಒಕ್ಕಣೆಯೊಂದಿಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಮತ್ತು ರಾಹುಲ್ ಗಾಂಧಿ ಅವರ ಚಿತ್ರವನ್ನು ಟ್ವೀಟ್ ಮಾಡಿದ್ದ ಸಂಬಂಧ ದಾಖಲಿಸಿರುವ ಪ್ರಕರಣಕ್ಕೂ ಹೈಕೋರ್ಟ್ ತಡೆ ನೀಡಿದೆ.
ಈ ಪ್ರಕರಣದಲ್ಲಿ ಮಾಳವಿಯಾ ಪರ ವಾದಿಸಿದ ಅರುಣ್ ಶ್ಯಾಮ್, “ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಒಂದೇ ಚಿತ್ರದಲ್ಲಿ ಚಿತ್ರಿಸಿರುವುದನ್ನು ಟ್ವೀಟ್ ಮಾಡಿರುವ ಸಂಬಂಧ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ವಿರುದ್ಧ ಬಿಎನ್‌ಎಸ್ ಸೆಕ್ಷನ್ 353 ಅಡಿ ಪ್ರಕರಣ ದಾಖಲಿಸಲಾಗಿದೆ. ಮೊದಲಿಗೆ ಬಿಎನ್‌ಎಸ್ ಸೆಕ್ಷನ್ 352 ಅಡಿ ಪ್ರಕರಣ ದಾಖಲಿಸಿ, ಆನಂತರ ಅದನ್ನು ತಿರುಚಿ ಜಾಮೀನುರಹಿತ ಅಪರಾಧವನ್ನಾಗಿಸಲು ಬಿಎನ್‌ಎಸ್ ಸೆಕ್ಷನ್ 353 ಅನ್ನು ಅನ್ವಯಿಸಲಾಗಿದೆ. ಆನಂತರ ನೋಟಿಸ್ ನೀಡಲಾಗಿದೆ. ಈ ಮೂಲಕ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸುವ ಕೆಲಸ ಮಾಡಲಾಗಿದೆ. ಮೊದಲಿಗೆ ಬಿಎನ್‌ಎಸ್ ಸೆಕ್ಷನ್ 192, 352 ಅನ್ವಯಿಸಿ, ಆನಂತರ ಅದನ್ನು ತಿರುಚಿ ಸೆಕ್ಷನ್ 353 ಮಾಡಿ, ಜಾಮೀನುರಹಿತ ಅಪರಾಧವನ್ನಾಗಿಸಲಾಗಿದೆ. ಇದು ರಾಜಕೀಯವಾಗಿ ಟಾರ್ಗೆಟ್ ಮಾಡುವ ರೀತಿಯಾಗಿದೆ. ಪ್ರಕರಣದ ದಾಖಲಿಸುವ ಯಾವ ಅಂಶಗಳೂ ದೂರಿನಲ್ಲಿ ಇಲ್ಲ. ಈ ಟ್ವೀಟ್ ಹೆಚ್ಚೆಂದರೆ ಮಾನಹಾನಿಕಾರವಷ್ಟೆ” ಎಂದರು.
ಆಗ ಜಗದೀಶ್ ಅವರು “ದೂರಿನಲ್ಲಿ ದೂರುದಾರರೇ ಅಮಿತ್ ಮಾಳವಿಯಾ ಎಸಗಿರುವ ಕೃತ್ಯವು ಬಿಎನ್‌ಎಸ್ ಸೆಕ್ಷನ್ 353 ಅಡಿ ಅಪರಾಧವಾಗಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಸಾಮಾನ್ಯ ವ್ಯಕ್ತಿಯಲ್ಲ. ವಿಪಕ್ಷ ನಾಯಕ ಎಂಬುದನ್ನು ಮನಗಾಣಬೇಕು” ಎಂದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಎರಡೂ ಪ್ರಕರಣಗಳಿಗೂ ಮುಂದಿನ ವಿಚಾರಣೆವರೆಗೆ ತಡೆ ನೀಡಿದೆ.
ಪ್ರಕರಣದ ಹಿನ್ನೆಲೆ: ಅಮಿತ್ ಮಾಳವಿಯಾ ಮತ್ತು ಅರ್ನಾಬ್ ಗೋಸ್ವಾಮಿ ಅವರು ಬಹಿರಂಗವಾಗಿ ಸುಳ್ಳು ಮಾಹಿತಿ ಪ್ರಸಾರ ಮಾಡಲು ಘೋರ ಮತ್ತು ಕ್ರಿಮಿನಲ್ ಪ್ರೇರಿತ ಅಭಿಯಾನದ ಮಾಸ್ಟರ್ ಮೈಂಡ್ ಆಗಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿ ಪದಾಧಿಕಾರಿಯಾಗಿರುವ ಶ್ರೀಕಾಂತ್ ಸ್ವರೂಪ್ ಬಿ ಎನ್ ಅವರು ಮೇ 20ರಂದು ನೀಡಿರುವ ದೂರಿನ ಅನ್ವಯ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಬಿಎನ್‌ಎಸ್ ಸೆಕ್ಷನ್ 192 ಮತ್ತು 352 ಪ್ರಕರಣ ದಾಖಲಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ಆಸೀಂ ಮುನೀರ್ ಚಿತ್ರಕ್ಕೆ ಸಂಬಂಧಿಸಿದ ಆರೋಪದ ಕುರಿತಾದ ಪ್ರಕರಣದಲ್ಲಿ ಕೆಪಿಸಿಸಿಯ ಎಂ ಎಂ ಶ್ರೀಧರ್ ನೀಡಿದ ದೂರಿನ ಅನ್ವಯ ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಬಿಎನ್‌ಎಸ್ ಸೆಕ್ಷನ್ 192 ಮತ್ತು 352 ಅಡಿ ಅಮಿತ್ ಮಾಳವಿಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಾಳವಿಯಾ ಮತ್ತು ಗೋಸ್ವಾಮಿ ಅವರ ನಡೆ ಭಾರತದ ಪ್ರಜಾಪ್ರಭುತ್ವದ ಅಡಿಪಾಯ, ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಯ ಮೇಲೆ ನಡೆಸಿದ ದುರುದ್ದೇಶಪೂರ್ವಕ ದಾಳಿಯಾಗಿದೆ ಎಂದು ಸ್ವರೂಪ್ ದೂರಿನಲ್ಲಿ ವಿವರಿಸಿದ್ದಾರೆ.