ಸುದ್ದಿಗಳು

'ನೀನು ಅತ್ತರೆ, ನಾನೂ ಅಳುವೆ': ವಿದಾಯ ಭಾಷಣದ ವೇಳೆ ಮಗಳಿಗೆ ನ್ಯಾ. ತಾರಾ ವಿತಾಸ್ತ ಗಂಜು ಸಾಂತ್ವನ

ಕೇಂದ್ರ ಸರ್ಕಾರ ಅಕ್ಟೋಬರ್ 14ರಂದು ನ್ಯಾಯಮೂರ್ತಿ ಗಂಜು ಅವರನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆ ಮಾಡಿ ಅಧಿಸೂಚನೆ ಹೊರಡಿಸಿತ್ತು.

Bar & Bench

ದೆಹಲಿ ಹೈಕೋರ್ಟ್‌ ಸೋಮವಾರ ಭಾವುಕ ಸನ್ನಿವೇಶವೊಂದಕ್ಕೆ ಸಾಕ್ಷಿಯಾಯಿತು. ತಮ್ಮ ವಿದಾಯ ಭಾಷಣದ ವೇಳೆ ಮಗಳು ಅಳುತ್ತಿರುವುದನ್ನು ಕಂಡ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಗೊಂಡಿರುವ ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅದನ್ನು ತಡೆಯಲು ಮುಂದಾದರು.

ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಬೆಂಬಲ ನೀಡಿದವರಿಗೆ ನ್ಯಾ. ಗಂಜು ಧನ್ಯವಾದ ಹೇಳುತ್ತಿದ್ದರು. ಈ ವೇಳೆ ಮಗಳ ಕಂಬನಿ ಗಮನಿಸಿದ ಅವರು ಮಗಳನ್ನು ಸಮಾಧಾನಪಡಿಸಲು ಕಿರುನಗೆಯೊಂದಿಗೆ ಮೆಲುದನಿಯಲ್ಲಿ "ನೀನು ಅತ್ತರೆ, ನಾನೂ ಅಳುವೆʼ ಎಂದರು.

ಸುಪ್ರೀಂ ಕೋರ್ಟ್‌ ಕೊಲಿಜಿಯಂ ಕಳೆದ ಆಗಸ್ಟ್‌ನಲ್ಲಿ ಮಾಡಿದ್ದ ಶಿಫಾರಸ್ಸಿನಂತೆ ನ್ಯಾಯಮೂರ್ತಿಗಳಾದ ಗಂಜು ಮತ್ತು ಅರುಣ್‌ ಮೋಂಗಾ ಅವರನ್ನು ಕ್ರಮವಾಗಿ ಕರ್ನಾಟಕ ಮತ್ತು ರಾಜಸ್ಥಾನ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಅಕ್ಟೋಬರ್ 14 ರಂದು ಅಧಿಸೂಚನೆ ಹೊರಡಿಸಿತ್ತು.

ವಿಶೇಷವಾಗಿ ನ್ಯಾ. ಗಂಜು ಅವರ ವರ್ಗಾವಣೆ ಕುರಿತು ವಕೀಲ ವರ್ಗದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಡಿಎಚ್‌ಸಿಬಿಎ , ಮಹಿಳಾ ವಕೀಲರು ಹಾಗೂ ವಕೀಲ ವರ್ಗದ ಉಳಿದ ಸದಸ್ಯರು ನ್ಯಾಯಮೂರ್ತಿ ಗಂಜು ಅವರ ವರ್ಗಾವಣೆಗೆ ಆಕ್ಷೇಪಿಸಿ ಸಿಜೆಐ ಬಿ ಆರ್‌ ಗವಾಯಿ ಅವರಿಗೆ ಪತ್ರ ಬರೆದಿದ್ದನ್ನು ಇಲ್ಲಿ ನೆನೆಯಬಹುದು.

ಆಕಸ್ಮಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ, ನನ್ನ ಕುಟುಂಬದ ಎಲ್ಲರೂ ಇಂದು ಇಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದ ಅವರು ನಾನು ರಾತ್ರಿ ಹೊತ್ತಿನಲ್ಲಿ ಅಥವಾ ವಾರಾಂತ್ಯದಲ್ಲಿ ಕೆಲಸ ಮಾಡುವ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ ಎಂದು ತಿಳಿದಿದೆ. ಆದರೆ ನಾನು ಎಂದಿಗೂ ಶ್ರದ್ಧೆಯನ್ನು ದೋಷವೆಂದು ಪರಿಗಣಿಸಿಲ್ಲ. ನ್ಯಾಯಾಂಗದ ಬೇಡಿಕೆ ಗಡಿಯಾರದ ಕಾಲಕ್ಕೆ ಸೀಮಿತವಾಗಿರುವುದಿಲ್ಲ. ನಮ್ಮ ಪ್ರಮುಖ ಕರ್ತವ್ಯವು ರಾಷ್ಟ್ರ ಮತ್ತು ನಮ್ಮಿಂದ ಪರಿಹಾರವನ್ನು ಬಯಸುವ ದಾವೆದಾರರ ಬಗ್ಗೆ ಇರಬೇಕು. ವೈಯಕ್ತಿಕ ಸೌಕರ್ಯ ಅಥವಾ ಅಸಮ್ಮತಿಯ ಕಾರಣಕ್ಕೆ ನಾವು ನಿರ್ವಹಿಸಬೇಕಾದ ಹೊಣೆಯಿಂದ ನುಣುಚಿಕೊಳ್ಳಬಾರದು ಎಂದು ಅವರು ಹೇಳಿದರು.

ನೀವು ನಂಬುವ ವಿಷಯಗಳಿಗಾಗಿ ಹೋರಾಡಿ, ಆದರೆ ಅದನ್ನು ಇತರರೂ ನಿಮ್ಮೊಂದಿಗೆ ಸೇರುವಂತೆ ಮಾಡುವ ರೀತಿಯಲ್ಲಿ ಹೋರಾಡಿ ಎಂಬ ಅಮೆರಿಕದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ರುತ್ ಬೇಡರ್ ಗಿನ್ಸ್‌ಬರ್ಗ್ ಅವರ ಮಾತುಗಳು ತಮಗೆ ಪ್ರೇರಣೆ ಎಂದರು.

ದೆಹಲಿ ಹೈಕೋರ್ಟ್ ಕಾನೂನು ಮತ್ತು ನ್ಯಾಯದ ಬಗ್ಗೆ ತಮ್ಮ ತಿಳುವಳಿಕೆಯನ್ನು ರೂಪಿಸಿತು ಎಂದು ಅವರು ಹೇಳಿದರು. ನ್ಯಾಯಾಲಯದ ಸಿಬ್ಬಂದಿ, ರಿಜಿಸ್ಟ್ರಿ ಅಧಿಕಾರಿಗಳು, ಸ್ಟೆನೋಗ್ರಾಫರ್‌ಗಳು ಮತ್ತು ಕಾನೂನು ಸಂಶೋಧಕರಿಗೆ ಅವರು ಇದೇ ವೇಳೆ ಧನ್ಯವಾದ ಅರ್ಪಿಸಿದರು.