
ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅವರನ್ನು ದೆಹಲಿಯಿಂದ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಗೊಳಿಸುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಮಾಡಿರುವ ಶಿಫಾರಸನ್ನು ಮರುಪರಿಶೀಲಿಸಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ ವಕೀಲರ ಸಂಘದ ಮಹಿಳಾ ವಕೀಲರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಸೆಪ್ಟೆಂಬರ್ 2ರಂದು ಬರೆದಿರುವ ಪತ್ರಕ್ಕೆ ಹಿರಿಯ ವಕೀಲರಾದ ಅರುಂಧತಿ ಕಟ್ಜು , ಗೀತಾ ಲೂತ್ರಾ , ಮಾಳವಿಕಾ ರಾಜ್ಕೋಟಿಯಾ , ಸ್ವಾತಿ ಸುಕುಮಾರ್, ದಿಯಾ ಕಪೂರ್ , ಮಾಳವಿಕಾ ತ್ರಿವೇದಿ ಹಾಗೂ ಕಾದಂಬರಿ ಸಿಂಗ್ ಸೇರಿದಂತೆ 66 ಮಹಿಳಾ ವಕೀಲರು ಸಹಿ ಮಾಡಿದ್ದಾರೆ.
ನ್ಯಾಯಮೂರ್ತಿ ಗಂಜು ಅವರು ಅತ್ಯುನ್ನತ ವೃತ್ತಿಪರ ಸಮಗ್ರತೆಯ ವ್ಯಕ್ತಿ. 30 ವರ್ಷಗಳಿಂದ ಪ್ರಾಮಾಣಿಕವಾಗಿ ಕಳಂಕರಹಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಅತಿ ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಿದವರು. ಅವರ ವರ್ಗಾವಣೆ ಪ್ರಸ್ತಾಪವನ್ನು ಸಿಜೆಐ ಗವಾಯಿ ಅವರು ಮರುಪರಿಶೀಲಿಸಬೇಕು ಎಂದು ಪತ್ರ ಕೋರಿದೆ.
ವರ್ಗಾವಣೆಯ ಪ್ರಕ್ರಿಯೆಯಲ್ಲಿ ಸ್ಪಷ್ಟತೆ ಇಲ್ಲ, ಇದು ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಸಾರ್ವಜನಿಕರು ನ್ಯಾಯಾಂಗದ ಮೇಲೆ ಇರಿಸಿರುವ ವಿಶ್ವಾಸಕ್ಕೆ ಧಕ್ಕೆಯುಂಟುಮಾಡುತ್ತದೆ ಎಂದು ಪತ್ರ ಆತಂಕ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಯವರ ವರ್ಗಾವಣೆಗೆ ಕಾರಣಗಳನ್ನು ಬಹಿರಂಗಪಡಿಸಬೇಕು ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಪಾರದರ್ಶಕ ಕಾರ್ಯವಿಧಾನ ಜಾರಿಗೆ ತರಬೇಕು ಎಂದು ಅದು ಕೋರಿದೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಕಳೆದ ವಾರ ದೆಹಲಿ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಾದ ತಾರಾ ವಿತಾಸ್ತ ಗಂಜು ಮತ್ತು ಅರುಣ್ ಮೋಂಗಾ ಅವರನ್ನು ಕ್ರಮವಾಗಿ ಕರ್ನಾಟಕ ಮತ್ತು ರಾಜಸ್ಥಾನ ಹೈಕೋರ್ಟ್‌ಗಳಿಗೆ ವರ್ಗಾಯಿಸಿ ಶಿಫಾರಸು ಮಾಡಿತ್ತು. ಈ ಶಿಫಾರಸ್ಸಿಗೆ ಕೇಂದ್ರ ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ.
ಇದಕ್ಕೂ ಮುನ್ನ, ದೆಹಲಿ ಹೈಕೋರ್ಟ್‌ನಲ್ಲಿ ವರ್ಗಾವಣೆ ಪರ್ವ ಆರಂಭವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಸಂಘ ಸಿಜೆಐ ಮತ್ತು ಕೊಲಿಜಿಯಂಗೆ ಪತ್ರ ಬರೆದಿತ್ತು. ಈ ವರ್ಗಾವಣೆಗಳು ದೆಹಲಿ ಹೈಕೋರ್ಟ್‌ನಲ್ಲಿ ವೃತ್ತಿನಿರತರಾಗಿರುವ ವಕೀಲರಲ್ಲಿ ಹಾಗೂ ನ್ಯಾಯಿಕ ಸಂಸ್ಥೆಯಲ್ಲಿ ಅಶಾಂತಿ ಉಂಟುಮಾಡಿದೆ ಎಂದು ಸೆಪ್ಟೆಂಬರ್ 1ರಂದು ಬರೆದ ಪತ್ರದಲ್ಲಿ ಡಿಎಚ್‌ಸಿಬಿಎ ಹೇಳಿತ್ತು. ನ್ಯಾಯಮೂರ್ತಿ ಗಂಜು ಅವರ ಪ್ರಸ್ತಾವಿತ ವರ್ಗಾವಣೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ದೆಹಲಿ ಮೂಲದ 94 ವಕೀಲರು ಸಿಜೆಐಗೆ ಪತ್ರ ಬರೆದಿದ್ದರು.
[ಮಹಿಳಾ ವಕೀಲರ ಪತ್ರದ ಪ್ರತಿ]