Chief Justice Oka 
ಸುದ್ದಿಗಳು

ಯಾವುದೇ ಸಿಬ್ಬಂದಿಯನ್ನು ನಿಂದಿಸಬೇಕೆಂದಿದ್ದರೆ ಸಿಜೆ ನಿಂದಿಸಿ: ಅವಹೇಳನಕಾರಿ ಈಮೇಲ್ ಕಳುಹಿಸಿದ ವಕೀಲರಿಗೆ ಸಿಜೆ ತರಾಟೆ

ಕೋವಿಡ್ ವೇಳೆ ಹೈಕೋರ್ಟ್‌ನಲ್ಲಿ ಕೆಲಸ ಮಾಡುವುದನ್ನು ಉಲ್ಲೇಖಿಸಿ ಮುಖ್ಯ ನ್ಯಾಯಮೂರ್ತಿ ಓಕಾ ಅವರು, “ಇದು ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಇಲ್ಲಿ ಕೆಲಸ ಮಾಡುವುದು ಎಷ್ಟು ಕಷ್ಟ ಎಂಬುದು ವಕೀಲರಿಗೆ ಅರ್ಥವಾಗುವುದಿಲ್ಲ” ಎಂದು ಖಾರವಾಗಿ ನುಡಿದರು

Bar & Bench

ಹೈಕೋರ್ಟ್ ಸಿಬ್ಬಂದಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ, ಅಗೌರವಯುತವಾಗಿ ಮಾತನಾಡಿದ ಹಾಗೂ ಮೇಲಿಂದ ಮೇಲೆ ಈಮೇಲ್ ಕಳುಹಿಸುತ್ತಿದ್ದ ವಕೀಲರನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಶುಕ್ರವಾರ ತರಾಟೆಗೆ ತೆಗೆದುಕೊಂಡರು.

ತಮ್ಮ ಪ್ರಕರಣವನ್ನು ವಿಡಿಯೋ ಕಾನ್ಫರೆನ್ಸ್ ವಿಚಾರಣೆಗೆ ನಿಗದಿಗೊಳಿಸುವಂತೆ ಕೋರಿ ವಕೀಲರೊಬ್ಬರು ಹಲವು ಬಾರಿ ರಿಜಿಸ್ಟ್ರಿಗೆ ಈಮೇಲ್ ಕಳುಹಿಸಿದ್ದರು. ಬಳಿಕ, ರಿಜಿಸ್ಟ್ರಿಗೆ (ನ್ಯಾಯಿಕ) ಕರೆ ಮಾಡಿದ ವಕೀಲ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾರೆ.

ಮುಂದುವರಿದು, ಆ ವಕೀಲರು ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್‌ಒ) ಹಾಗೂ ಮುಖ್ಯ ನ್ಯಾಯಮೂರ್ತಿಯ ಆಪ್ತ ಸಹಾಯಕರಿಗೆ “ಹೈಕೋರ್ಟ್ ಆಡಳಿತ ಈಮೇಲ್ ಪರಿಶೀಲಿಸುತ್ತಿಲ್ಲ ಮತ್ತು ಅವುಗಳಿಗೆ ಸರಿಯಾದ ರೀತಿ ಸ್ಪಂದಿಸುತ್ತಿಲ್ಲ” ಎಂದು ಈಮೇಲ್ ಕಳುಹಿಸಿದ್ದರು.

ವಿಡಿಯೋ ಕಾನ್ಫರೆನ್ಸ್ ವಿಚಾರಣೆಯ ಸಂದರ್ಭದಲ್ಲಿ ಸಂಪೂರ್ಣವಾಗಿ ಈಮೇಲ್ ಓದಿದ ಮುಖ್ಯ ನ್ಯಾಯಮೂರ್ತಿ ಓಕಾ ಅವರು ಹೀಗೆ ಹೇಳಿದರು,

“ನಾನು ಒಂದು ವಿಚಾರವನ್ನು ನಿಮಗೆ ಹೇಳಲು ಬಯಸುತ್ತೇನೆ, ಹೈಕೋರ್ಟ್‌ನಲ್ಲಿ ಏನಾದರೂ ತಪ್ಪಾದರೆ ಮುಖ್ಯ ನ್ಯಾಯಮೂರ್ತಿಯಾದ ನಾನು ಅದಕ್ಕೆ ಜವಾಬ್ದಾರಿ. ನೀವು ಯಾವುದೇ ಸಿಬ್ಬಂದಿಯನ್ನು ನಿಂದಿಸಬೇಕು ಎಂದಿದ್ದರೆ ಮುಖ್ಯ ನ್ಯಾಯಮೂರ್ತಿಯಾದ ನನ್ನನ್ನು ನಿಂದಿಸಿ. ಸಿಬ್ಬಂದಿಯನ್ನು ರಕ್ಷಿಸುವುದು ನನ್ನ ಕರ್ತವ್ಯ. ಇಲ್ಲಿ ನಾನು ಕುಳಿತಿದ್ದೇನೆ. ದಯವಿಟ್ಟು ಈಗ ನನ್ನನ್ನು ನಿಂದಿಸಿ.”
ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ

ಈ ಸಂದರ್ಭದಲ್ಲಿ ವಕೀಲರು ನ್ಯಾಯಾಲಯದ ಕ್ಷಮೆ ಕೇಳಲಾರಂಭಿಸಿದರು. “ಆಡಳಿತ, ಹೈಕೋರ್ಟ್‌ ಅಥವಾ ಮುಖ್ಯ ನ್ಯಾಯಮೂರ್ತಿ ಬಗ್ಗೆ ನನಗೆ ಯಾವುದೇ ತಕರಾರಿಲ್ಲ. ಕ್ಷಮೆ ಯಾಚಿಸುತ್ತಿದ್ದೇನೆ ಮೈ ಲಾರ್ಡ್” ಎಂದು ಅಂಗಲಾಚಿದರು.

ಆಗ ನ್ಯಾ. ಓಕಾ ಅವರು “ಮಿಸ್ಟರ್ ಎಕ್ಸ್.. ಗೌರವಾನ್ವಿತವಾಗಿ ನಡೆದುಕೊಳ್ಳುವುದನ್ನು ಕಲಿಯಿರಿ. ಎಸ್‌ಒಪಿಗೆ (ಪ್ರಮಾಣಿತ ಕಾರ್ಯಾಚರಣಾ ವಿಧಾನ) ಅನುಗುಣವಾಗಿಲ್ಲವಾದುದರಿಂದ ನಾವು ಇಂದು ನಿಮ್ಮ ಮೆಮೊವನ್ನೂ ತಿರಸ್ಕರಿಸುತ್ತಿದ್ದೇವೆ” ಎಂದರು.

“ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ನಿಮಗೆ ತಕರಾರಿದ್ದರೆ ಮುಖ್ಯ ನ್ಯಾಯಮೂರ್ತಿಗಳ ಕಾರ್ಯದರ್ಶಿಗೆ ತಿಳಿಸಬೇಡಿ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ತಿಳಿಸಿ. ಎರಡನೆಯದಾಗಿ ನಿಮ್ಮ ಯಾವುದೇ ತಕರಾರನ್ನು ಕಾನೂನು ವೃತ್ತಿಯ ಘನತೆಗೆ ತಕ್ಕಂತೆ ಗೌರವಯುತವಾಗಿ ಪ್ರಸ್ತಾಪಿಸಿ. ಮೂರನೆಯದಾಗಿ ಎಲ್ಲಾ ಪತ್ರ ವ್ಯವಹಾರಗಳಲ್ಲಿ ನ್ಯಾಯಾಲಯದ ಅಧಿಕಾರಿ ಎಂದೇ ಪ್ರಸ್ತಾಪಿಸಬೇಕೆ ವಿನಾ ನಿಮ್ಮ ಕಕ್ಷಿದಾರರ ಮುಖವಾಣಿ ಎಂದಲ್ಲ. ಇದನ್ನು ನಾನು ಹೇಳುತ್ತಿಲ್ಲ, ಸುಪ್ರೀಂ ಕೋರ್ಟ್ ಹೇಳಿರುವುದು” ಎಂದರು.

“ನಿನ್ನೆ ರಿಜಿಸ್ಟ್ರಾರ್‌ಗೆ ಈಮೇಲ್ ಕಳುಹಿಸದಿದ್ದರೆ ನಾನು ನಿಮ್ಮನ್ನು ಕರೆಯುತ್ತಲೇ ಇರಲಿಲ್ಲ. ರಿಜಿಸ್ಟ್ರಾರ್ (ನ್ಯಾಯಿಕ) ಅವರು ಜಿಲ್ಲಾ ನ್ಯಾಯಾಧೀಶ ಎಂಬುದು ನಿಮಗೆ ಗೊತ್ತಿದೆಯೇ?” ಎಂದು ಖಾರವಾಗಿ ಪ್ರಶ್ನಿಸಿದರು.

“ಮೊದಲಿಗೆ ನೀವು ಎಲ್ಲಿ ಹಾದಿ ತಪ್ಪುತ್ತಿದ್ದೀರಿ ಎಂದು ಪತ್ತೆಹಚ್ಚಿ ಬಳಿಕ ಇತರರನ್ನು ನಿಂದಿಸಿ. ಇದು ಆಗಿಂದಾಗ್ಗೆ ನಡೆಯುತ್ತಲೇ ಇದೆ. ಇಲ್ಲಿ ಕೆಲಸ ಮಾಡುವುದು ಎಷ್ಟು ಕಷ್ಟ ಎಂದು ವಕೀಲರಿಗೆ ಅರ್ಥವಾಗುವುದಿಲ್ಲ. ಬೆಂಗಳೂರಿನಲ್ಲಿ 100 ಮಂದಿಗೆ ಕೋವಿಡ್ ಸೋಂಕು ತಗುಲಿದ್ದರೂ ಕರ್ತವ್ಯ ನಿರ್ವಹಿಸುತ್ತಿರುವ ಯಾವ ಸಂಸ್ಥೆ ಇದೆ? ಈ ವಾರದಲ್ಲಿ ಹಲವು ಕೋವಿಡ್ ಪ್ರಕರಣಗಳು ವರದಿಯಾದ ಮೇಲೂ ನಾವು 12 ಭೌತಿಕ ವಿಚಾರಣಾ ಪೀಠಗಳನ್ನು ಆರಂಭಿಸಿದ್ದೇವೆ” ಎಂದರು.

ಬಳಿಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವದಗಿ ಅವರು “ನ್ಯಾಯಮೂರ್ತಿಗಳು ಪ್ರಕ್ಷುಬ್ಧಗೊಳ್ಳಬಾರದು. ಸಾಮಾನ್ಯವಾಗಿ ಈ ರೀತಿ ಆಗುವುದಿಲ್ಲ. ಇಂಥ ಪ್ರಕರಣಗಳನ್ನು ತಾವು ನಿರ್ಲಕ್ಷಿಸಬಹುದು” ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆ ಓಕಾ ಅವರು “ನಾನು ಪ್ರಕ್ಷುಬ್ಧಗೊಂಡಿಲ್ಲ. ಆದರೆ, ವಕೀಲ ವೃಂದಕ್ಕೆ ಸಂದೇಶ ರವಾನಿಸಬೇಕಿದೆ. ನನ್ನನ್ನು ಟೀಕಿಸಿದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಸಿಬ್ಬಂದಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರೆ?… ಸಾಮಾನ್ಯವಾಗಿ ಯಾವುದೇ ತೊಂದರೆ ಇಲ್ಲ. ಇದು ವಕೀಲ ವೃಂದದ ಕೆಲವೇ ಕೆಲವು ಸದಸ್ಯರಿಗೆ ಸೀಮಿತವಾಗಿದೆ. ಕಾರ್ಯದರ್ಶಿಗೆ ಈಮೇಲ್ ಕಳುಹಿಸಿ ಮುಖ್ಯ ನ್ಯಾಯಮೂರ್ತಿ ಬಗ್ಗೆ ದೂರು ನೀಡುವ ಮಟ್ಟಿಗೆ ವಿಚಾರ ಹೋಗಿದೆ. ಸದರಿ ಈಮೇಲ್‌ಗೆ ತಕ್ಷಣ ಪ್ರತಿಕ್ರಿಯೆ ಕಳುಹಿಸುವಂತೆ ಒತ್ತಾಯಿಸಲಾಗುತ್ತದೆ. ಅದು ಸಾಂಸ್ಥಿಕ ಸಮಸ್ಯೆ” ಎಂದರು.

“ಸೊಸೆಯನ್ನು ಟೀಕಿಸಬೇಕು ಎಂದೆನಿಸಿದರೆ ಮಗಳನ್ನು ಟೀಕಿಸಬೇಕು” ಎನ್ನುವ ಮರಾಠಿ ಗಾದೆಯನ್ನು ಮಾರ್ಮಿಕವಾಗಿ ಉಲ್ಲೇಖಿಸುವ ಮೂಲಕ ಪ್ರಕರಣಕ್ಕೆ ಮುಖ್ಯ ನ್ಯಾಯಮೂರ್ತಿ ಓಕಾ ಅವರು ಅಂತ್ಯ ಹಾಡಿದರು.