<div class="paragraphs"><p>Cow and Karnataka HC</p></div>

Cow and Karnataka HC

 
ಸುದ್ದಿಗಳು

ಗೋಹತ್ಯೆ ನಿಷೇಧ ಕಾಯಿದೆ ಜಾರಿಗೊಳಿಸಬೇಕಾದರೆ ಪ್ರತಿ ಗ್ರಾಮದಲ್ಲೂ ಗೋಶಾಲೆ ಆರಂಭಿಸಬೇಕು: ಕರ್ನಾಟಕ ಹೈಕೋರ್ಟ್‌

Bar & Bench

‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ-2020’ ಅನ್ನು ಜಾರಿಗೊಳಿಸಬೇಕಾದರೆ ರಾಜ್ಯ ಸರ್ಕಾರವು ಪ್ರತಿ ಗ್ರಾಮದಲ್ಲೂ ಗೋಶಾಲೆ ತೆರೆಯಬೇಕಾಗುತ್ತದೆ ಎಂದು ಗುರುವಾರ ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಹೇಳಿತು.

ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಹಾಗೂ ಈಗಾಗಲೇ ಇರುವ ಗೋಶಾಲೆಗಳಿಗೆ ಸೂಕ್ತ ಪ್ರಮಾಣದಲ್ಲಿ ಮೇವು, ನೀರು ಮತ್ತು ಜಾಗ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆಯ ಸೆಕ್ಷನ್‌ 19ರ ಅಡಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಗೋಶಾಲೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ” ಎಂದು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಎಚ್‌ ವಾಣಿ ಅವರು ತಿಳಿಸಿದಾಗ ಆಕ್ಷೇಪಿಸಿದ ಮುಖ್ಯ ನ್ಯಾಯಮೂರ್ತಿ ಅವಸ್ಥಿ ಅವರು “ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಿದರೆ ಸಾಕಾಗುವುದಿಲ್ಲ. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲದೆ ಪ್ರತಿ ಗ್ರಾಮಮಟ್ಟದಲ್ಲೂ ಗೋ ಶಾಲೆ ತೆರೆಯಬೇಕು. ಬೇರೆ ರಾಜ್ಯಗಳಿಗೆ ಹೋಗಿ ಪರಿಶೀಲನೆ ಮಾಡಿ. ಅಲ್ಲಿನ ಸರ್ಕಾರಗಳು ಪ್ರತಿಯೊಂದು ಗ್ರಾಮದಲ್ಲಿ ಗೋಶಾಲೆ ಆರಂಭಿಸಿವೆ” ಎಂದರು.

“ಗೋಶಾಲೆಗಳನ್ನು ಆರಂಭಿಸಲು ಯಾವ ಮಾರ್ಗಸೂಚಿ ಅನುಸರಿಸಲಾಗಿದೆ? ರಾಜ್ಯದಲ್ಲಿ ಈಗ ಎಷ್ಟು ಗೋಶಾಲೆಗಳಿವೆ? ಅವುಗಳನ್ನು ಹೇಗೆ ನಿರ್ವಹಣೆ ಮಾಡಲಾಗುತ್ತಿದೆ? ಭವಿಷ್ಯದಲ್ಲಿ ಎಷ್ಟು ಆರಂಭಿಸಲಾಗುತ್ತದೆ. ಅವುಗಳನ್ನು ಹೇಗೆ ನಿರ್ವಹಣೆ ಮಾಡಲಾಗುತ್ತದೆ? ಪ್ರತಿಯೊಂದು ಗೋಶಾಲೆಗೂ ಎಷ್ಟು ಹಣ ಒದಗಿಸಲಾಗುತ್ತದೆ. ಯಾವ ರೀತಿಯ ಮೇವು ಪೂರೈಸಲಾಗುತ್ತಿದೆ? ಒಂದು ಗೋಶಾಲೆಯಲ್ಲಿ ಎಷ್ಟು ಪ್ರಾಣಿಗಳನ್ನು ಇರಿಸಲಾಗುತ್ತದೆ? ಹೀಗೆ ಹಲವು ಅಂಶಗಳ ಮೇಲ್ವಿಚಾರಣೆ ಹಾಗೂ ನಿರ್ವಹಣೆ ಮಾಡಲು ಮಾರ್ಗಸೂಚಿಗಳು ಅಗತ್ಯವಾಗಿರುತ್ತವೆ. ಮಾರ್ಗಸೂಚಿಗಳನ್ನು ಏಕರೂಪವಾಗಿ ಅಳವಡಿಸಿಕೊಂಡಾಗ ಮಾತ್ರ ಗೋಶಾಲೆಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ಮುಂದಿನ ವಿಚಾರಣೆ ವೇಳೆ ರಾಜ್ಯದಲ್ಲಿ ಗೋಶಾಲೆ ಆರಂಭಿಸಲು ಮತ್ತು ನಿರ್ವಹಣೆ ಮಾಡಲು ಯಾವ ಮಾರ್ಗಸೂಚಿ ರಚಿಸಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ, ಬಿಡಾಡಿ ಪ್ರಾಣಿಗಳ ಕಲ್ಯಾಣಕ್ಕಾಗಿ ಯಾವುದಾದರೂ ಯೋಜನೆ ರೂಪಿಸಲಾಗಿದೆಯೇ? ಎಂಬ ಬಗ್ಗೆಯೂ ವಿವರಣೆ ನೀಡಬೇಕು” ಎಂದು ಸಕಾರಕ್ಕೆ ಮೌಖಿಕವಾಗಿ ಸೂಚಿಸಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದರು.

ವಿಚಾರಣೆ ವೇಳೆ ಸರ್ಕಾರಿ ವಕೀಲರು ಉತ್ತರಿಸಿ, ರಾಜ್ಯದಲ್ಲಿ 197 ಗೋಶಾಲೆಗಳನ್ನು ತೆರೆಯಲಾಗಿದೆ. ತಾಲೂಕು ಮಟ್ಟದಲ್ಲಿ ಗೋಶಾಲೆಗಳು ತೆರೆಯಲಾಗಿದ್ದು, ಅವುಗಳಿಗೆ ಅನುದಾನ ಸಹ ನೀಡಲಾಗಿದೆ. ಹಾಗಾಗಿ, ಮತ್ತೆ ತಾಲ್ಲೂಕು ಮಟ್ಟದಲ್ಲಿ ಬದಲಾಗಿ ತಾತ್ಕಾಲಿಕವಾಗಿ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಲು ಸರ್ಕಾರ ಆದೇಶಿಸಿದೆ ಎಂದು ಪೀಠಕ್ಕೆ ಮಾಹಿತಿ ನೀಡಿದರು.