[ಗೋಹತ್ಯೆ ನಿಷೇಧ] ರಾಜ್ಯ ಸರ್ಕಾರದ ಅರ್ಜಿ ವಿಲೇವಾರಿ ಬಳಿಕ ಕಾಯಿದೆಯ ಸಿಂಧುತ್ವದ ಕುರಿತು ಆಲಿಸಲಾಗುವುದು: ಹೈಕೋರ್ಟ್‌

ನಿಯಮ ರೂಪಿಸಿದ ಬಳಿಕ ಹಾಗೂ ಅವುಗಳನ್ನು ಜಾರಿಗೆ ತರುವುದಕ್ಕೂ ಮುನ್ನ ಸರ್ಕಾರವು ಆ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಲಿದೆ. ಇದರಿಂದ ಅರ್ಜಿದಾರರಿಗೆ ನಿಯಮಗಳು ಜಾರಿಗೆ ಬರಲಿವೆ ಎಂಬ ವಿಷಯ ತಿಳಿಯಲಿದೆ ಎಂದು ಎಜಿ ತಿಳಿಸಿದ್ದರು.
Cow and Karnataka HC

Cow and Karnataka HC

‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ-2020’ರ ಸೆಕ್ಷನ್‌ 5 ಅನ್ನು ಜಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ವಿಲೇವಾರಿ ಮಾಡಿದ ಬಳಿಕ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಕುರಿತಾದ ವಾದ ಆಲಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಹೇಳಿತು. ಗೋಹತ್ಯೆ ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳುವ ಅಧಿಕಾರವನ್ನು ಸೆಕ್ಷನ್‌ 5ರಲ್ಲಿ ಅಡಕಗೊಳಿಸಲಾಗಿದೆ.

ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಆರೀಫ್ ಜಮೀಲ್, ಕಸಾಯಿ ಖಾನೆ ಮಾಲೀಕರು ಮತ್ತು ಗೋಮಾಂಸ ಮಾರಾಟಗಾರರು ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ʼಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ-2020’ರ ಸೆಕ್ಷನ್‌ 5 ಜಾರಿ ಮತ್ತು ನ್ಯಾಯಾಲಯವು ಜನವರಿ 20ರಂದು ಮಾಡಿರುವ ಆದೇಶವನ್ನು ಮಾರ್ಪಾಡು ಮಾಡುವ ಸಂಬಂಧ ರಾಜ್ಯ ಸರ್ಕಾರವು ಅರ್ಜಿ ಸಲ್ಲಿಸಿದೆ. ಅರ್ಜಿದಾರರ ಪರ ವಕೀಲರಿಗೆ ಸರ್ಕಾರವು ಮನವಿ ಕಳುಹಿಸಿಕೊಡಬೇಕು. ಅಗತ್ಯಬಿದ್ದಲ್ಲಿ ಅವರು ಮನವಿಗೆ ಮೂರು ವಾರಗಳ ಒಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ‌

ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆಯಂಥ ಕಾನೂನು ತರಲು ಶಾಸನಸಭೆಗೆ ಅಧಿಕಾರವಿದೆಯೇ ಎಂಬುದು ಸೇರಿದಂತೆ ಕೆಲವು ಪ್ರಮುಖ ಪ್ರಶ್ನೆಗಳು ನಮ್ಮ ಮುಂದಿವೆ. ಈಗ ವಾದಿಸಲು ತಾನು ಸಿದ್ಧವಿದ್ದು, ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಕಾಲಾವಕಾಶ ಮಾಡಿಕೊಡಬೇಕು” ಎಂದು ಪೀಠವನ್ನು ಕೋರಿದರು. ಇದಕ್ಕೆ ನ್ಯಾಯಾಲಯವು ಮೊದಲು ಸರ್ಕಾರ ಸಲ್ಲಿಸಿರುವ ಅರ್ಜಿಯನ್ನು ವಿಲೇವಾರಿ ಮಾಡೋಣ. ಬಳಿಕ ನಿಮ್ಮ ವಾದವನ್ನು ಆಲಿಸಲಾಗುವುದುʼ ಎಂದಿತು.

Also Read
ಗೋಹತ್ಯೆ ನಿಷೇಧ ಮಸೂದೆಯಲ್ಲಿರುವ ಪ್ರಮುಖ ಅಂಶಗಳೇನು?

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ನನ್ನ ಮಾಹಿತಿಯ ಪ್ರಕಾರ ಸರ್ಕಾರದ ಪರವಾಗಿ ಸಲ್ಲಿಸಲಾಗಿರುವ ಮನವಿಯನ್ನು ಅರ್ಜಿದಾರರ ವಕೀಲರಿಗೆ ಪೂರೈಸಲಾಗಿದೆ. ಅದಾಗ್ಯೂ ಪರಿಶೀಲಿಸಲಾಗುವುದು” ಎಂದರು.

“ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರುಗಳ ಸಂರಕ್ಷಣೆ ಸುಗ್ರೀವಾಜ್ಞೆ 2020ರ ಸೆಕ್ಷನ್ 5ರ ನಿಬಂಧನೆಯ ಅಡಿಯಲ್ಲಿ ಅಧಿಕಾರ ಚಲಾಯಿಸಲು ರಚಿಸಲಾದ ನಿಯಮಗಳನ್ನು ಜಾರಿಗೆ ತರುವವರೆಗೆ ಕಾನೂನು ಉಲ್ಲಂಘಿಸಿದವರ ವಿರುದ್ಧ ರಾಜ್ಯ ಸರ್ಕಾರವು ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ. ನಿಯಮ ರೂಪಿಸಿದ ಬಳಿಕ ಹಾಗೂ ಅವುಗಳನ್ನು ಜಾರಿಗೆ ತರುವುದಕ್ಕೂ ಮುನ್ನ ರಾಜ್ಯ ಸರ್ಕಾರವು ಆ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಲಿದೆ. ಇದರಿಂದ ಅರ್ಜಿದಾರರಿಗೆ ನಿಯಮಗಳು ಜಾರಿಗೆ ಬರಲಿವೆ ಎಂಬ ವಿಷಯ ತಿಳಿಯಲಿದೆ ಎಂದು ಅಡ್ವೊಕೇಟ್‌ ಜನಲರ್‌ ತಿಳಿಸಿದ್ದಾರೆ” ಎಂದು ಜನವರಿ 10ರ ಆದೇಶದಲ್ಲಿ ನ್ಯಾಯಾಲಯ ದಾಖಲಿಸಿತ್ತು.

Kannada Bar & Bench
kannada.barandbench.com