Parappana Agrahara Central Prison and Karnataka HC 
ಸುದ್ದಿಗಳು

ಜೈಲುಗಳಲ್ಲಿ ಅಕ್ರಮ ಚಟುವಟಿಕೆ: ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

ಅರ್ಜಿದಾರರ ಆರೋಪಗಳಿಗೆ ಯಾವುದೇ ಸಾಕ್ಷಾೃಧಾರವಿಲ್ಲ. ಇದರ ಹೊರತಾಗಿಯೂ ಮಾಧ್ಯಮಗಳ ವರದಿ ಆಧರಿಸಿ ಎಡಿಜಿಪಿ ಮುರುಗನ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಅವರು ತನಿಖೆ ನಡೆಸಿ ವರದಿ ನೀಡಲಿದ್ದಾರೆ ಎಂದ ಸರ್ಕಾರ.

Bar & Bench

ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸದಿದ್ದರೆ ಅಲ್ಲಿ ನಡೆಯುವ ಅಕ್ರಮಗಳನ್ನು ತಡೆಯುವುದು ಕಷ್ಟವೆಂದು ಕರ್ನಾಟಕ ಹೈಕೋರ್ಟ್ ಈಚೆಗೆ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಇತ್ತೀಚೆಗೆ ಗಾಂಜಾ, ಮಾದಕ ದ್ರವ್ಯಗಳು ಪತ್ತೆಯಾದ ಆರೋಪ ಹಿನ್ನೆಲೆಯಲ್ಲಿ ನ್ಯಾಯಾಂಗ ಅಧಿಕಾರಿಯಿಂದ ತನಿಖೆ ನಡೆಸುವಂತೆ ಕೋರಿ ಬೆಂಗಳೂರಿನ ವಕೀಲ ಧರ್ಮಪಾಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ, ಪೊಲೀಸ್ ಇಲಾಖೆ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ಪೀಠ, ಕಾರಾಗೃಹಗಳ ಸುಧಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಅರ್ಜಿಯೊಂದಿಗೇ ಈ ಅರ್ಜಿಯನ್ನೂ ವಿಚಾರಣೆಗೆ ನಿಗದಿಪಡಿಸುವಂತೆ ರಿಜಿಸ್ಟ್ರಿಗೆ ಸೂಚಿಸಿತು.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಧಿಕಾರಿಗಳು ಕೆಲ ಕೈದಿಗಳೊಂದಿಗೆ ಶಾಮೀಲಾಗಿ, ಅವರಿಂದ ಹಣ ಪಡೆದು ಗಣ್ಯ ಆತಿಥ್ಯ ನೀಡುತ್ತಿದ್ದಾರೆ. ಗಾಂಜಾ ಸೇರಿ ಎಲ್ಲ ಮಾದಕ ದ್ರವ್ಯಗಳೂ ದೊರಕುತ್ತಿವೆ. ಆದರೂ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ದೂರಿದರು. ಅದಕ್ಕೆ ಸಿಜೆ ಪ್ರತಿಕ್ರಿಯಿಸಿ, ಕಾರಾಗೃಹಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸದಿದ್ದರೆ ಅಲ್ಲಿನ ಅಕ್ರಮಗಳು ನಿಲ್ಲುವುದಿಲ್ಲ. ಆದ್ದರಿಂದ, ಸರ್ಕಾರ ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಸರ್ಕಾರದ ಪರ ವಕೀಲರು, ಅರ್ಜಿದಾರರ ಆರೋಪಗಳಿಗೆ ಯಾವುದೇ ಸಾಕ್ಷಾೃಧಾರವಿಲ್ಲ. ಇದರ ಹೊರತಾಗಿಯೂ ಮಾಧ್ಯಮಗಳ ವರದಿ ಆಧರಿಸಿ ಎಡಿಜಿಪಿ ಮುರುಗನ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಅವರು ತನಿಖೆ ನಡೆಸಿ ವರದಿ ನೀಡಲಿದ್ದಾರೆ. ಜತೆಗೆ, ಕಾರಾಗೃಹಗಳ ಸುಧಾರಣೆಗೆ ಸಂಬಂಧಿಸಿದ ಪಿಐಎಲ್ ನಲ್ಲಿ ಈಗಾಗಲೇ ಸಿಸಿ ಕ್ಯಾಮರಾ ಅಳವಡಿಕೆಗೆ ಪೀಠ ನಿರ್ದೇಶನ ನೀಡಿದ್ದು, ಆ ಬಗ್ಗೆಯೂ ಸರ್ಕಾರ ಪರಿಶೀಲಿಸುತ್ತಿದೆ ಎಂದು ತಿಳಿಸಿದರು.