Cows 
ಸುದ್ದಿಗಳು

[ಅಕ್ರಮ ಪ್ರಾಣಿವಧೆ, ಸಾಗಣೆ ಪ್ರಕರಣ] ಸ್ಥಿತಿಗತಿ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಅಕ್ರಮ ಪ್ರಾಣಿವಧೆ ನಡೆಸುತ್ತಿರುವುದು ಪತ್ತೆಯಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು. ಅಕ್ರಮ ಪ್ರಾಣಿವಧೆಯಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದ್ದ ಪೀಠ.

Bar & Bench

ರಾಜ್ಯದಲ್ಲಿ ಕಾನೂನುಬಾಹಿರ ಪ್ರಾಣಿ ವಧೆ ಮತ್ತು ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಹಿಂದಿನ ನಿರ್ದೇಶನಕ್ಕೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

ಗೋ ಗ್ಯಾನ್‌ ಫೌಂಡೇಶನ್‌ ಸಲ್ಲಿಸಿದ್ದ ಸಾಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರ ಪರ ವಕೀಲರು “2021ರ ಡಿಸೆಂಬರ್‌ 1ರಂದು ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಅಕ್ರಮ ಪ್ರಾಣಿ ವಧೆ ನಡೆಸದಂತೆ ಮತ್ತು ಅಕ್ರಮ ಪ್ರಾಣಿ ಸಾಗಣೆ ತಡೆಯಬೇಕು ಎಂದು ಆದೇಶಿಸಿತ್ತು. ಆದರೆ, ರಾಜ್ಯ ಸರ್ಕಾರವು ಪರಿಣಾಮಕಾರಿ ಕ್ರಮಕೈಗೊಳ್ಳದಿರುವುದರಿಂದ ಅಕ್ರಮ ಚಟುವಟಿಕೆಗಳು ರಾಜ್ಯದಲ್ಲಿ ನಡೆಯುತ್ತಿವೆ. ವಿಶೇಷವಾಗಿ, ಮಂಡ್ಯ, ಹಾಸನ, ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಕ್ರಮವಾಗಿ ಪ್ರಾಣಿ ಸಾಗಣೆ/ವಧೆ ಅವ್ಯಾಹತವಾಗಿದೆ” ಎಂದು ಪೀಠದ ಗಮನಸೆಳೆದರು.

ಇದನ್ನು ಆಲಿಸಿದ ಪೀಠವು “2021ರ ಡಿಸೆಂಬರ್ 1ರ ನಿರ್ದೇಶನಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಪರ ವಕೀಲರು ಸರ್ಕಾರದ ಸಲಹೆ-ಸೂಚನೆ ಪಡೆದು, ಸ್ಥಿತಿಗತಿ ವರದಿ ಸಲ್ಲಿಸಬೇಕು” ಎಂದು ಆದೇಶಿಸಿದ್ದು, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.

2021ರ ಡಿಸೆಂಬರ್‌ 1ರಂದು ಬೇರೊಂದು ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು “ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಕಾನೂನುಬಾಹಿರವಾಗಿ ಪ್ರಾಣಿಗಳ ವಧೆ ನಡೆಯದಂತೆ ಖಾತರಿವಹಿಸಬೇಕು. ಈ ಸಂಬಂಧ ತುರ್ತಾಗಿ ಕ್ರಮಕೈಗೊಳ್ಳಬೇಕು. ಅಕ್ರಮ ಪ್ರಾಣಿವಧೆ ನಡೆಸುತ್ತಿರುವುದು ಪತ್ತೆಯಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುವುದು. ಅಕ್ರಮ ಪ್ರಾಣಿವಧೆಯಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವುದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆದೇಶ ಮಾಡಿದ್ದನ್ನು ಇಲ್ಲಿ ನೆನೆಯಬಹುದು.