ಸಾರ್ವಜನಿಕ ಉದ್ಯಾನ ಮತ್ತು ಸಾರ್ವಜನಿಕ ಸೌಕರ್ಯ ಕಲ್ಪಿಸಲು ಮೀಸಲಾಗಿರುವ ನಿವೇಶಗಳನ್ನು (ಸಿಎ ಸೈಟ್) ಅತಿಕ್ರಮಿಸಿ ಬೃಹತ್ ಕಟ್ಟಡ, ಅಪಾರ್ಟ್‌ಮೆಂಟ್ ಮತ್ತು ಕಾರ್ಖಾನೆ ನಿರ್ಮಿಸಿರುವುದನ್ನು ತೆರವುಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅನುಪಾಲನಾ ವರದಿ ಸಲ್ಲಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಲು ಕಾಲಾವಕಾಶ ನೀಡಬೇಕು ಎಂಬ ಅರ್ಜಿದಾರರ ಕೋರಿಕೆಯನ್ನು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್ ಗುರುವಾರ ವಿಚಾರಣೆ ಮುಂದೂಡಿತು.
ಬೆಂಗಳೂರಿನಲ್ಲಿರುವ ಬಹುತೇಕ ಉದ್ಯಾನ ಮತ್ತು ಮುಕ್ತವಾದ ಸ್ಥಳಗಳನ್ನು ಖಾಸಗಿ ಮತ್ತು ಗೃಹ ನಿರ್ಮಾಣ ಸೊಸೈಟಿಗಳು ಕಾನೂನುಬಾಹಿರವಾಗಿ ಅತಿಕ್ರಮಿಸಿಕೊಂಡಿವೆ ಎಂದು ಆರೋಪಿಸಿ ಎಸ್ ಕೆ ಮಂಜುನಾಥ್ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲ ಪ್ರಿನ್ಸ್ ಐಸಾಕ್ ಅವರು “ಬೆಂಗಳೂರಿನಲ್ಲಿ 39 ಪಾರ್ಕ್‌ಗಳು ಮತ್ತು ಮೂರು ಸಿಎ ಸೈಟ್‌ಗಳನ್ನು ಅತಿಕ್ರಮಿಸಿರುವುದನ್ನು ತೆರವುಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಬಿಡಿಎ ಎರಡು ದಿನಗಳ ಹಿಂದೆ ಅನುಪಾಲನಾ ಅಫಿಡವಿಟ್ ಕಳುಹಿಸಿದೆ. ಇದನ್ನು ಪರಿಶೀಲಿಸಿ ಇದಕ್ಕೆ ಪ್ರತಿಕ್ರಿಯೆ ಸಲ್ಲಿಸುವ ಅಗತ್ಯತೆಯನ್ನು ನಿರ್ಧರಿಸಲಾಗುವುದು. ಇದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಇದನ್ನು ಪರಿಗಣಿಸಿದ ಪೀಠವು “ಬಿಡಿಎ ಸಲ್ಲಿಸಿರುವ ಅನುಪಾಲನಾ ವರದಿಗೆ ಅಗತ್ಯಬಿದ್ದಲ್ಲಿ ಪ್ರತಿಕ್ರಿಯಿಸಲು ಅರ್ಜಿದಾರರ ಕೋರಿಕೆಯಂತೆ ಕಾಲಾವಕಾಶ ನೀಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದ್ದು, ವಿಚಾರಣೆಯನ್ನು ಮಾರ್ಚ್ 5ಕ್ಕೆ ಮುಂದೂಡಿದೆ.
ಕಳೆದ ವಿಚಾರಣೆಯ ಸಂದರ್ಭದಲ್ಲಿ ಬಿಡಿಎ ಪ್ರತಿನಿಧಿಸಿದ್ದ ವಕೀಲ ಸೂರಜ್ ಪಾಟೀಲ್ ಅವರು “ಸರ್ಕಾರಿ ಉದ್ಯಾನ ಮತ್ತು ಸಿಎ ನಿವೇಶನಗಳಲ್ಲಿ ಬೃಹತ್ ಕಟ್ಟಡ, ಅಪಾರ್ಟ್‌ಮೆಂಟ್, ಕಾರ್ಖಾನೆಗಳನ್ನು ನಿರ್ಮಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಅವುಗಳನ್ನು ತೆರವುಗೊಳಿಸಲು ಅಧಿಕಾರಿಗಳು ಸ್ಥಳಕ್ಕೆ ತೆರಳಲು ಕಾನೂನುಬಾಹಿರವಾಗಿ ಕಟ್ಟಡ ನಿರ್ಮಿಸಿರುವ ಮಾಲೀಕರು ಅವಕಾಶ ನೀಡುತ್ತಿಲ್ಲ. ಹೀಗಾಗಿ ನ್ಯಾಯಾಲಯದ ಆದೇಶ ಪಾಲನೆ ಸಾಧ್ಯವಾಗಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು.
ಇದರಿಂದ ಕೆರಳಿದ್ದ ನ್ಯಾಯಾಲಯವು “ಬಿಡಿಎ ಆಯುಕ್ತರು ತಮ್ಮ ಕರ್ತವ್ಯ ನಿಭಾಯಿಸಲು ವಿಫಲರಾಗಿದ್ದಾರೆ ಎಂದು ಪರಿಗಣಿಸಿ ಅವರನ್ನು ಅಮಾನತು ಮಾಡಲಾಗುವುದು. ತೆರವು ಕಾರ್ಯಾಚರಣೆ ಆಗುತ್ತಿಲ್ಲ ಎಂದು ನೀವೆ (ಬಿಡಿಎ ವಕೀಲರು) ಒಪ್ಪಿಕೊಂಡಿರುವಾಗ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಿಲ್ಲ. ಈ ಒಪ್ಪಿಗೆಯೇ ಸಾಕು. ಕರ್ತವ್ಯ ಲೋಪ ಮತ್ತು ನ್ಯಾಯಾಲಯದ ಆದೇಶ ಪಾಲನೆ ಮಾಡಲು ವಿಫಲವಾಗಿರುವುದಕ್ಕೆ ಆಯುಕ್ತರನ್ನು ಅಮಾನತು ಮಾಡುತ್ತೇವೆ” ಎಂದು ಗುಡುಗಿತ್ತು.
“ಬಿಡಿಎ ನಡೆಸಿರುವ ಜಂಟಿ ಸರ್ವೆಯಲ್ಲಿ 39 ಸಾರ್ವಜನಿಕ ಉದ್ಯಾನ ಮತ್ತು ಮೂರು ಸಿಎ ಸೈಟ್‌ಗಳನ್ನು ಅತಿಕ್ರಮಿಸಿರುವುದು ಪತ್ತೆಯಾಗಿದ್ದು, ಇದನ್ನು ತೆರವು ಮಾಡುವ ಸಂಬಂಧ ಯಾವುದೇ ಪ್ರಯತ್ನ ಮಾಡಲಾಗಿಲ್ಲ. ಸೆಪ್ಟೆಂಬರ್ 2ರಂದು ಕಾನೂನುಬಾಹಿರ ನಿರ್ಮಾಣ ತೆರವು ಮಾಡಿ, ಅನುಪಾಲನಾ ವರದಿ ಸಲ್ಲಿಸುವಂತೆ ಬಿಡಿಎ ಆಯುಕ್ತರಿಗೆ ನಿರ್ದೇಶಿಸಲಾಗಿತ್ತು. ಈಗ ಮತ್ತೆ ಬಿಡಿಎ ತೆರವು ಕಾರ್ಯಾಚರಣೆ ಹೆಚ್ಚಿನ ಕಾಲಾವಕಾಶ ಕೋರಿದ್ದು, ತೆರವು ಕಾರ್ಯಾಚರಣೆಗೆ ಪೊಲೀಸ್ ಭದ್ರತೆ ಒಳಗೊಂಡು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದೆ. ಈ ಭರವಸೆಯ ಹಿನ್ನೆಲೆಯಲ್ಲಿ ಬಿಡಿಎಗೆ ಮತ್ತೊಂದು ಅವಕಾಶ ನೀಡಲಾಗಿದೆ” ಎಂದುಹೇಳಿದ್ದ ನ್ಯಾಯಾಲಯವು ವಿಚಾರಣೆ ಮುಂದೂಡಿತ್ತು.