ಪಾರ್ಕ್‌, ಸಿಎ ಸೈಟ್‌ಗಳಲ್ಲಿ ಖಾಸಗಿ ಕಟ್ಟಡಗಳ ತೆರವು ಪ್ರಕರಣ: ಬಿಡಿಎ ಆಯುಕ್ತರ ಅಮಾನತು ಎಚ್ಚರಿಕೆ ನೀಡಿದ ಹೈಕೋರ್ಟ್‌

ಬಿಡಿಎ ನಡೆಸಿರುವ ಜಂಟಿ ಸರ್ವೆಯಲ್ಲಿ 41 ಸಾರ್ವಜನಿಕ ಉದ್ಯಾನ ಮತ್ತು ಮೂರು ಸಿಎ ಸೈಟ್‌ಗಳನ್ನು ಅತಿಕ್ರಮಿಸಿ ಬೃಹತ್‌ ಕಟ್ಟಡ, ಕಾರ್ಖಾನೆ, ಅಪಾರ್ಟ್‌ಮೆಂಟ್‌ ನಿರ್ಮಿಸಿರುವುದು ಪತ್ತೆಯಾಗಿದೆ.
Karnataka HC and BDA Commissioner Rajesh Gowda M B
Karnataka HC and BDA Commissioner Rajesh Gowda M B

ಸಾರ್ವಜನಿಕ ಉದ್ಯಾನ ಮತ್ತು ಸಾರ್ವಜನಿಕ ಸೌಕರ್ಯ ಕಲ್ಪಿಸಲು ಮೀಸಲಾಗಿರುವ ನಿವೇಶಗಳನ್ನು (ಸಿಎ ಸೈಟ್‌) ಅತಿಕ್ರಮಿಸಿ ಬೃಹತ್‌ ಕಟ್ಟಡ, ಅಪಾರ್ಟ್‌ಮೆಂಟ್‌ ಮತ್ತು ಕಾರ್ಖಾನೆ ನಿರ್ಮಿಸಿರುವುದನ್ನು ತೆರವು ಮಾಡುವ ಸಂಬಂಧ ನ್ಯಾಯಾಲಯದ ಆದೇಶ ಪಾಲಿಸಲು ವಿಫಲವಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಮಾಡುತ್ತೇವೆ ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ಮೌಖಿಕವಾಗಿ ಹೇಳಿದ್ದು, ಅತಿಕ್ರಮಣ ತೆರವು ಮಾಡಲು ಬಿಡಿಎಗೆ ಮತ್ತೊಂದು ಅವಕಾಶ ನೀಡಿದೆ.

ಬೆಂಗಳೂರಿನಲ್ಲಿರುವ ಬಹುತೇಕ ಉದ್ಯಾನ ಮತ್ತು ಮುಕ್ತವಾದ ಸ್ಥಳಗಳನ್ನು ಖಾಸಗಿ ಮತ್ತು ಗೃಹ ನಿರ್ಮಾಣ ಸೊಸೈಟಿಗಳು ಕಾನೂನುಬಾಹಿರವಾಗಿ ಅತಿಕ್ರಮಿಸಿಕೊಂಡಿವೆ ಎಂದು ಆರೋಪಿಸಿ ಎಸ್‌ ಕೆ ಮಂಜುನಾಥ್‌ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಬಿಡಿಎ ಪ್ರತಿನಿಧಿಸಿದ್ದ ವಕೀಲ ಸೂರಜ್‌ ಪಾಟೀಲ್‌ ಅವರು “ಸರ್ಕಾರಿ ಉದ್ಯಾನ ಮತ್ತು ಸಿಎ ನಿವೇಶನಗಳಲ್ಲಿ ಬೃಹತ್‌ ಕಟ್ಟಡ, ಅಪಾರ್ಟ್‌ಮೆಂಟ್‌, ಕಾರ್ಖಾನೆಗಳನ್ನು ನಿರ್ಮಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಅವುಗಳನ್ನು ತೆರವುಗೊಳಿಸಲು ಅಧಿಕಾರಿಗಳು ಸ್ಥಳಕ್ಕೆ ತೆರಳಲು ಕಾನೂನುಬಾಹಿರವಾಗಿ ಕಟ್ಟಡ ನಿರ್ಮಿಸಿರುವ ಮಾಲೀಕರು ಅವಕಾಶ ನೀಡುತ್ತಿಲ್ಲ. ಹೀಗಾಗಿ ನ್ಯಾಯಾಲಯದ ಆದೇಶ ಪಾಲನೆ ಸಾಧ್ಯವಾಗಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಇದರಿಂದ ಕೆರಳಿದ ನ್ಯಾಯಾಲಯವು “ಬಿಡಿಎ ಆಯುಕ್ತರು ತಮ್ಮ ಕರ್ತವ್ಯ ನಿಭಾಯಿಸಲು ವಿಫಲರಾಗಿದ್ದಾರೆ ಎಂದು ಪರಿಗಣಿಸಿ ಅವರನ್ನು ಅಮಾನತು ಮಾಡಲಾಗುವುದು. ತೆರವು ಕಾರ್ಯಾಚರಣೆ ಆಗುತ್ತಿಲ್ಲ ಎಂದು ನೀವೆ (ಬಿಡಿಎ ವಕೀಲರು) ಒಪ್ಪಿಕೊಂಡಿರುವಾಗ ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಿಲ್ಲ. ಈ ಒಪ್ಪಿಗೆಯೇ ಸಾಕು. ಕರ್ತವ್ಯ ಲೋಪ ಮತ್ತು ನ್ಯಾಯಾಲಯದ ಆದೇಶ ಪಾಲನೆ ಮಾಡಲು ವಿಫಲವಾಗಿರುವುದಕ್ಕೆ ಆಯುಕ್ತರನ್ನು ಅಮಾನತು ಮಾಡುತ್ತೇವೆ” ಎಂದಿತು.

“ಸಾರ್ವಜನಿಕ ಉದ್ಯಾನ ಮತ್ತು ಸರ್ಕಾರಿ ಸ್ಥಳಗಳಲ್ಲಿ ಕಾನೂನುಬಾಹಿರ ಕಟ್ಟಡ ನಿರ್ಮಿಸಲು ಅನುಮತಿ ನೀಡಿದವರು ಯಾರು? ಅಕ್ರಮ ಕಟ್ಟಡ ನಿರ್ಮಾಣವನ್ನು ಒಂದು ದಿನ, ಒಂದು ರಾತ್ರಿಯಲ್ಲಿ ಮಾಡಲಾಗದು ಅಲ್ಲವೇ? ಬಹುದಿನಗಳ ಕಾಲ ನಿರ್ಮಾಣ ಚಟುವಟಿಕೆ ನಡೆದಿರಬೇಕು. ನೀವು ಕಣ್ಮುಚ್ಚಿ ನಿರ್ಮಾಣ ಕಾಮಗಾರಿ ನಡೆಯಲು ಅವಕಾಶ ಮಾಡಿಕೊಟ್ಟಿದ್ದೀರಿ. ಈಗ ಕಟ್ಟಡ ನಿರ್ಮಿಸಿದ ಮೇಲೆ ಅದನ್ನು ತೆರವು ಮಾಡುವುದು ಕಷ್ಟ ಎಂದು ಹೇಳುತ್ತಿದ್ದೀರಿ. ಹೀಗಾಗಿ, ಬಿಡಿಎ ಆಯುಕ್ತರ ವಿರುದ್ಧ ಕ್ರಮಕೈಗೊಂಡು ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಾವು ನಿರ್ದೇಶಿಸುತ್ತೇವೆ” ಎಂದು ಪೀಠ ಖಾರವಾಗಿ ಹೇಳಿತು.

ಇದಕ್ಕೆ ವಕೀಲ ಸೂರಜ್‌ ಪಾಟೀಲ್‌ ಅವರು “ಇನ್ನೊಂದು ಅವಕಾಶ ನೀಡಿ. ಈ ಬಾರಿ ಪೊಲೀಸ್‌ ಭದ್ರತೆ ಪಡೆದು ತೆರವು ಕಾರ್ಯಾಚರಣೆ ಮಾಡುತ್ತೇವೆ” ಎಂದು ನ್ಯಾಯಾಲಯವನ್ನು ಪರಿ ಪರಿಯಾಗಿ ಬೇಡಿಕೊಂಡರು.

ಆಗ ನ್ಯಾಯಾಲಯವು “ತೆರವು ಕಾರ್ಯಾಚರಣೆಗೆ ಮೊದಲೇ ಪೊಲೀಸ್‌ ರಕ್ಷಣೆ ಏಕೆ ಪಡೆಯಲಿಲ್ಲ. ಎಲ್ಲಾ ಪ್ರಯತ್ನಗಳನ್ನು ಮೊದಲೇ ಏಕೆ ಮಾಡಲಿಲ್ಲ. ನಿಮಗೆ ಬೇರೆ ಉದ್ದೇಶ ಇರಬೇಕು ಎಂಬುದು ಇದರಿಂದ ತಿಳಿಯುತ್ತದೆ. ತೆರವು ಕಾರ್ಯಾಚರಣೆ ಮಾಡಲು ಜನರು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಬಚಾವಾಗಲು ಯತ್ನಿಸುತ್ತಿದ್ದೀರಿ. ನ್ಯಾಯಾಲಯದ ಆದೇಶ ಪಾಲಿಸಲಾಗುವುದು ಎಂದು ವಾಗ್ದಾನ ನೀಡಿ” ಎಂದು ಬಿಡಿಎ ವಕೀಲರಿಗೆ ಪೀಠವು ನಿರ್ದೇಶಿಸಿತು. ಇದಕ್ಕೆ ವಕೀಲ ಸೂರಜ್‌ ಅವರು “ಬಿಡಿಎ ಸೂಚನೆ ಪಡೆಯಬೇಕು” ಎಂದರು.

Also Read
ನ್ಯಾಯಾಲಯ ಆದೇಶಿಸಿದಾಗ ಪೀಠದ ಮುಂದೆ ಹಾಜರಾಗುವಂತೆ ಅಧಿಕಾರಿಗಳಿಗೆ ಸುತ್ತೋಲೆ: ಹೈಕೋರ್ಟ್‌ ಅಂಥ ಆದೇಶ ಮಾಡಿದ್ದೇಕೆ?

ಇದರಿಂದ ಅಸಂತುಷ್ಟಗೊಂಡ ನ್ಯಾಯಾಲಯವು “ಸಮರ್ಥನೆ ಮಾಡಿಕೊಳ್ಳಲಾಗದ ಸಂಸ್ಥೆಯ (ಬಿಡಿಎ) ಪರ ಏಕೆ ವಕಾಲತ್ತು ವಹಿಸುತ್ತೀರಿ? ನ್ಯಾಯಾಲಯದ ಆದೇಶ ಪಾಲಿಸದ ಕಕ್ಷಿದಾರರ ಪರ ನೀವು ನಿಲ್ಲಬಾರದು” ಎಂದು ವಕೀಲರಿಗೆ ಕಿವಿಮಾತು ಹೇಳಿತು.

“ಬಿಡಿಎ ನಡೆಸಿರುವ ಜಂಟಿ ಸರ್ವೆಯಲ್ಲಿ 41 ಸಾರ್ವಜನಿಕ ಉದ್ಯಾನ ಮತ್ತು ಮೂರು ಸಿಎ ಸೈಟ್‌ಗಳನ್ನು ಅತಿಕ್ರಮಿಸಿರುವುದು ಪತ್ತೆಯಾಗಿದ್ದು, ಇದನ್ನು ತೆರವು ಮಾಡುವ ಸಂಬಂಧ ಯಾವುದೇ ಪ್ರಯತ್ನ ಮಾಡಲಾಗಿಲ್ಲ. ಸೆಪ್ಟೆಂಬರ್‌ 2ರಂದು ಕಾನೂನುಬಾಹಿರ ನಿರ್ಮಾಣ ತೆರವು ಮಾಡಿ, ಅನುಪಾಲನಾ ವರದಿ ಸಲ್ಲಿಸುವಂತೆ ಬಿಡಿಎ ಆಯುಕ್ತರಿಗೆ ನಿರ್ದೇಶಿಸಲಾಗಿತ್ತು. ಈಗ ಮತ್ತೆ ಬಿಡಿಎ ತೆರವು ಕಾರ್ಯಾಚರಣೆ ಹೆಚ್ಚಿನ ಕಾಲಾವಕಾಶ ಕೋರಿದ್ದು, ತೆರವು ಕಾರ್ಯಾಚರಣೆಗೆ ಪೊಲೀಸ್‌ ಭದ್ರತೆ ಒಳಗೊಂಡು ಎಲ್ಲಾ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದೆ. ಈ ಭರವಸೆಯ ಹಿನ್ನೆಲೆಯಲ್ಲಿ ಬಿಡಿಎಗೆ ಮತ್ತೊಂದು ಅವಕಾಶ ನೀಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದ್ದು, ವಿಚಾರಣೆಯನ್ನು ಫೆಬ್ರವರಿಗೆ ಮುಂದೂಡಿದೆ.

Related Stories

No stories found.
Kannada Bar & Bench
kannada.barandbench.com