Detention 
ಸುದ್ದಿಗಳು

ಅಕ್ರಮ ಬಂಧನ, ಕಸ್ಟಡಿಯಲ್ಲಿ ಕಿರುಕುಳ ನೀಡುವುದು ಸಾರ್ವಜನಿಕ ಕರ್ತವ್ಯದ ವ್ಯಾಪ್ತಿಗೆ ಬರುವುದಿಲ್ಲ: ಕರ್ನಾಟಕ ಹೈಕೋರ್ಟ್‌

ಪೊಲೀಸರು ಕಾನೂನಿನ ವ್ಯಾಪ್ತಿಗೆ ಒಳಪಡದ ಕೆಲಸಗಳನ್ನು ಮಾಡುವ ಮೂಲಕ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ ಅಂತಹ ಕೃತ್ಯಗಳಿಗೆ ಸೆಕ್ಷನ್‌ 197ರ ಅಡಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ಮುಗ್ಧ ವ್ಯಕ್ತಿಯನ್ನು ಕಾನೂನುಬಾಹಿರವಾಗಿ ವಶಕ್ಕೆ ಪಡೆದು ಅವರಿಗೆ ಕಸ್ಟಡಿಯಲ್ಲಿ ಕಿರುಕುಳ ಮತ್ತು ಹಿಂಸೆ ನೀಡುವ ಪೊಲೀಸ್‌ ಅಧಿಕಾರಿಯ ನಡತೆ ಸಾರ್ವಜನಿಕ ಸೇವೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ.

ಕಾನೂನಿನ ವ್ಯಾಪ್ತಿಗೆ ಒಳಪಡದ ಕೆಲಸಗಳನ್ನು ಮಾಡುವ ಮೂಲಕ ಸರ್ಕಾರಿ ಅಧಿಕಾರಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರೆ ಅಂತಹ ಕೃತ್ಯಗಳಿಗೆ ಸಿಆರ್‌ಪಿಸಿ ಸೆಕ್ಷನ್‌ 197ರ ಅಡಿ ರಕ್ಷಣೆ ಕೋರಲಾಗದು. ಇದನ್ನು ಸರ್ಕಾರಿ ಸಿಬ್ಬಂದಿಯು ಮಾಡುವ ಕರ್ತವ್ಯಗಳಿಂದ ಹೊರತಾಗಿ ನೋಡಬೇಕು ಎಂದು ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.

“ಯಾವುದೇ ತೆರನಾದ ಕ್ರಿಮಿನಲ್‌ ಹಿನ್ನೆಲೆ ಇಲ್ಲದ ಮುಗ್ಧ ವ್ಯಕ್ತಿಯನ್ನು ಬಂಧಿಸದೆ ಅವರನ್ನು ಕಾನೂನುಬಾಹಿರವಾಗಿ ಪೊಲೀಸ್‌ ಠಾಣೆಗೆ ಕರೆದೊಯ್ದು ಚಿತ್ರ ಹಿಂಸೆ ನೀಡುವ ಪೊಲೀಸ್‌ ಅಧಿಕಾರಿಯ ನಡೆಯನ್ನು ಸಾರ್ವಜನಿಕ ಕರ್ತವ್ಯದ ಭಾಗ ಎನ್ನಲಾಗದು. ಇದು ಅರ್ಜಿದಾರ ಪೊಲೀಸ್‌ ಅಧಿಕಾರಿಗಳಿಗೆ ನೀಡಲಾಗಿರುವ ಅಧಿಕಾರದ ದುರ್ಬಳಕೆ” ಎಂದು ಆದೇಶದಲ್ಲಿ ನ್ಯಾಯಾಲಯ ತಿಳಿಸಿದೆ.

ಹೀಗಾಗಿ, ಭಾರತೀಯ ದಂಡ ಸಂಹಿತೆ ಸೆಕ್ಷನ್‌ 167, 330, 342, 348, 307 ಜೊತೆಗೆ 149 ರ ಅಡಿ ಚಿಕ್ಕಬಳ್ಳಾಪುರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಮುಂದಿರುವ ಕಾನೂನು ಪ್ರಕ್ರಿಯೆಯನ್ನು ವಜಾಗೊಳಿಸುವಂತೆ ಕೋರಿ ಏಳು ಪೊಲೀಸ್‌ ಸಿಬ್ಬಂದಿ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್‌ ವಜಾ ಮಾಡಿದೆ.

2010ರ ಮೇನಲ್ಲಿ ಆಭರಣ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿಯಾದ ಪೊಲೀಸ್‌ ಇನ್‌ಸ್ಪೆಕ್ಟರ್‌ ಮತ್ತು ಕೆಲವು ಪೇದೆಗಳು ದೂರುದಾರರ ಮನೆಗೆ ತೆರಳಿ ಪುತ್ರನನ್ನು ಕರೆದುಕೊಂಡು ಠಾಣೆಗೆ ಬರುವಂತೆ ಸೂಚಿಸಿದ್ದರು. ದೂರುದಾರರಿಗೆ ಅವರ ಗೆಳೆಯರು ತಮಗೆ ಸರ್ಕಲ್‌ ಇನ್‌ಸ್ಪೆಕ್ಟರ್‌ (ಮೊದಲನೇ ಆರೋಪಿ) ಕರೆ ಮಾಡಿ, ದೂರುದಾರರ ಘನತೆಯ ಬಗ್ಗೆ ವಿಚಾರಿಸಿದ್ದನ್ನು ತಿಳಿಸಿದ್ದರು.

ಇದರ ಬೆನ್ನಿಗೇ, ದೂರುದಾರರು ತಮ್ಮ ಪುತ್ರನನ್ನು ಕರೆದುಕೊಂಡು ಠಾಣೆಗೆ ಭೇಟಿ ನೀಡಿದ್ದರು. ಆಗ, ಪೊಲೀಸರು ಕಾನೂನುಬಾಹಿರವಾಗಿ ದೂರುದಾರರ ಪುತ್ರನನ್ನು ವಶಕ್ಕೆ ಪಡೆದು ಎರಡು ದಿನ ಚಿತ್ರ ಹಿಂಸೆ ನೀಡಿದ್ದರು. ಈ ವಿಚಾರವನ್ನು ಯಾರಿಗೂ ಬಹಿರಂಗ ಪಡಿಸಬಾರದು. ಒಂದೊಮ್ಮೆ ಹಾಗೆ ಮಾಡಿದರೆ ಕಳವು ಮತ್ತು ಹಲ್ಲೆಯಂಥ ಸುಳ್ಳು ಪ್ರಕರಣ ದಾಖಲಿಸಿ, ಶಾಶ್ವತವಾಗಿ ಜೈಲಿನಲ್ಲಿ ಕೊಳೆಯುವಂತೆ ಮಾಡುವುದಾಗಿ ಸಂತ್ರಸ್ತನಿಗೆ ಪೊಲೀಸರು ತಾಕೀತು ಮಾಡಿದ್ದರು.

ಘಟನೆ ನಡೆದ ಕೆಲವು ದಿನಗಳ ಬಳಿಕ ದೂರುದಾರರ ಸಂತ್ರಸ್ತ ಪುತ್ರ ಖಿನ್ನತೆಗೆ ಒಳಗಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಇದರಿಂದ ಕುಪಿತರಾದ ಪುತ್ರನ ತಂದೆ ದೊಡ್ಡಬಳ್ಳಾಪುರ ಪೊಲೀಸರಿಗೆ ದೂರು ನೀಡಿದರೂ ಅವರು ಪ್ರಕರಣ ದಾಖಲಿಸಿರಲಿಲ್ಲ. ಇದಾದ ಬಳಿಕ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದರೂ ಏನು ಪ್ರಯೋಜನವಾಗಿರಲಿಲ್ಲ. ಹೀಗಾಗಿ, ಸಂತ್ರಸ್ತನ ತಂದೆಯು ಚಿಕ್ಕಬಳ್ಳಾಪುರದ ಪ್ರಧಾನ ಮತ್ತು ಜಿಲ್ಲಾ ನ್ಯಾಯಾಧೀಶರ ಎದುರು ದೂರು ದಾಖಲಿಸಿದ್ದರು. ದೂರುದಾರರ ಅರ್ಜಿಗೆ ಮ್ಯಾಜಿಸ್ಟ್ರೇಟ್‌ ಅನುಮತಿಸಿದ್ದರು.

ಇದನ್ನು ಪ್ರಶ್ನಿಸಿ ಹಾಗೂ ಸೆಷನ್ಸ್‌ ನ್ಯಾಯಾಧೀಶರ ಎದುರಿರುವ ಪ್ರಕರಣವನ್ನು ವಜಾ ಮಾಡುವಂತೆ ಕೋರಿ ಆರೋಪಿತ ಪೊಲೀಸರು ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಇದಕ್ಕಾಗಿ ಪೊಲೀಸರು ಸಿಆರ್‌ಪಿಸಿ ಸೆಕ್ಷನ್‌ 197 ಅನ್ನು ಆಧರಿಸಿದ್ದರು. ಸಾರ್ವಜನಿಕ ಸೇವೆಯಲ್ಲಿರುವಾಗ ಅಧಿಕಾರಿ ವಿರುದ್ಧ ಅಪರಾಧವನ್ನು ನ್ಯಾಯಾಲಯ ಪರಿಗಣಿಸುವುದದಕ್ಕೂ ಮುನ್ನ ಸರ್ಕಾರದ ಅನುಮತಿ ಪಡೆಯಬೇಕು ಎಂದು ವಾದಿಸಲಾಗಿತ್ತು. ಸದರಿ ಪ್ರಕರಣದಲ್ಲಿ ಸರ್ಕಾರದ ಅನುಮತಿ ಪಡೆಯಲಾಗಿಲ್ಲ. ಮ್ಯಾಜಿಸ್ಟ್ರೇಟ್‌ ಏಕಪಕ್ಷೀಯವಾಗಿ ಹೇಳಿಕೆ ದಾಖಲಿಸಿಕೊಂಡಿರುವುದರಿಂದ ಇದು ಸಮ್ಮತವಲ್ಲ ಎಂದು ವಾದಿಸಿದ್ದರು.

2010ರ ಜುಲೈನಲ್ಲಿ ಚಿಂತಾಮಣಿಯ ಡಿವೈಎಸ್‌ಪಿ ಅವರು ವರದಿ ಸಲ್ಲಿಸಿದ್ದು, ಇದರಲ್ಲಿ ದೂರುದಾರರ ಪುತ್ರನಿಗೆ ಅರ್ಜಿದಾರ ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ ಎಂದು ಪ್ರತಿವಾದಿ ದೂರುದಾರರ ಪರ ವಕೀಲರು ನ್ಯಾಯಾಲಯದ ಗಮನಸೆಳೆದರು. ಪ್ರತಿವಾದಿ ವಕೀಲರ ವಾದವನ್ನು ಒಪ್ಪಿಕೊಂಡ ಪೀಠವು ಮ್ಯಾಜಿಸ್ಟ್ರೇಟ್‌ ಏಕಪಕ್ಷೀಯವಾಗಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂಬ ಅರ್ಜಿದಾರರ ಮನವಿಯನ್ನು ವಜಾ ಮಾಡಿದೆ.