LGBTQ, Madras High Court  
ಸುದ್ದಿಗಳು

ತೃತೀಯ ಲಿಂಗಿಗಳ ಕಳಕಳಿ ಕುರಿತಾದ ಎನ್‌ಸಿಇಆರ್‌ಟಿ ಮಾಡ್ಯೂಲ್ ಜಾರಿಗೆ ತರಲು ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ತೃತೀಯಲಿಂಗಿ ವ್ಯಕ್ತಿಗಳ ಕಳಕಳಿ ಕುರಿತಾದ ವಿಷಯವನ್ನು ಶಾಲಾ ಪ್ರಕ್ರಿಯೆಗಳಲ್ಲಿ ಅಳವಡಿಸುವುದಕ್ಕಾಗಿ ಕರಡು ಮಾಡ್ಯೂಲ್ ತಯಾರಿಸಲು ಸಾಕಷ್ಟು ಶ್ರಮ ಹಾಕಲಾಗಿತ್ತು ಎಂಬ ವಿಚಾರವನು ನ್ಯಾ. ಆನಂದ್ ವೆಂಕಟೇಶ್ ಗಮನಿಸಿದರು.

Bar & Bench

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ರೂಪಿಸಿರುವ "ಶಾಲಾ ಶಿಕ್ಷಣ ಪ್ರಕ್ರಿಯೆಗಳಲ್ಲಿ ತೃತೀಯ ಲಿಂಗಿ ವ್ಯಕ್ತಿಗಳ ಕಳಕಳಿ” ಕುರಿತಾದ ಕರಡು ಮಾಡ್ಯೂಲ್‌ ಜಾರಿಗೆ ತರುವಂತೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಮದ್ರಾಸ್ ಹೈಕೋರ್ಟ್ ಈಚೆಗೆ ನಿರ್ದೇಶಿಸಿದೆ.

ಎನ್‌ಸಿಇಆರ್‌ಟಿಯ ಕರಡು ಮಾಡ್ಯೂಲ್ ಅನ್ನು ಎರಡು ವರ್ಷಗಳ ಹಿಂದೆಯೇ ಸಚಿವಾಲಯದ ಪರಿಗಣನೆಗೆ ಕಳುಹಿಸಲಾಗಿದ್ದರೂ ಸಚಿವಾಲಯ  ಅದಕ್ಕೆ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು ಸೆಪ್ಟೆಂಬರ್ 18ರಂದು ಹೊರಡಿಸಿದ ಆದೇಶ ತಿಳಿಸಿದೆ.

ಸಚಿವಾಲಯದ ಬಳಿ ಸಾಕಷ್ಟು ಸಮಯದಿಂದ ಈ ವಿಚಾರ ಬಾಕಿ ಉಳಿದಿದೆ. ಮಾಡ್ಯೂಲ್‌ ಅನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ಯೋಜಿಸಲಾಗಿತ್ತು. ಆದರೆ ಶೈಕ್ಷಣಿಕ ವರ್ಷ ಈಗಾಗಲೇ ಆರಂಭವಾಗಿದ್ದರೂ ಸಚಿವಾಲಯ ಇನ್ನೂ ಪ್ರತಿಕ್ರಿಯಿಸಿಲ್ಲ. ಸಚಿವಾಲಯ ಸೂಕ್ಷ್ಮತೆಯಿಂದ ಈ ವಿಚಾರವಾಗಿ ವರ್ತಿಸಿ ಎನ್‌ಸಿಇಆರ್‌ಟಿ ಸಲ್ಲಿಸಿ ಕರಡು ಮಾಡ್ಯೂಲ್‌ ಜಾರಿಗೆ ತರುತ್ತದೆ ಎಂಬ ನಿರೀಕ್ಷೆ ಇದೆ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.

ಸಚಿವಾಲಯ ಈ ವಿಚಾರಕ್ಕೆ ಅಗತ್ಯ ಆದ್ಯತೆ ನೀಡಿ ತಾನು ಮುಂದಿನ ವಿಚಾರಣೆ ನಡೆಸಲಿರುವ ಜನವರಿ 6, 2025 ರೊಳಗೆ ಶಾಲೆಗಳಲ್ಲಿ ಇದನ್ನು ಜಾರಿಗೆ ತರಬೇಕು ಎಂದು ಅದು ಹೇಳಿದೆ.

 ಸಲಿಂಗ ಪ್ರೇಮಿ ಜೋಡಿಯೊಂದು ತನ್ನ ಸಂಬಂಧಿಕರಿಂದ ತಮಗೆ ರಕ್ಷಣೆ ನೀಡಬೇಕೆಂದು ಹೈಕೋರ್ಟ್‌ಗೆ ಈ ಹಿಂದೆ ಮೇಲ್ಮನವಿ ಸಲ್ಲಿಸಿತ್ತು. ಆ ಅರ್ಜಿಯ ವಿಚಾರಣೆ ವೇಳೆ ನ್ಯಾ. ವೆಂಕಟೇಶ್‌ ಈ ನಿರ್ದೇಶನ ನೀಡಿದ್ದಾರೆ.  ವಿಚಾರಣೆ ಅವಧಿಯಲ್ಲಿ ಎಲ್‌ಜಿಬಿಟಿಕ್ಯೂಐಎ+ ವ್ಯಕ್ತಿಗಳ ಏಳಿಗೆಗೆ ಸಂಬಂಧಿಸಿದಂತೆ ನ್ಯಾಯಾಲಯ ಹಲವು ಸೂಚನೆಗಳನ್ನು ನೀಡಿತ್ತು.