Chief Justice S Muralidhar  
ಸುದ್ದಿಗಳು

ರಾಷ್ಟ್ರೀಯ ನ್ಯಾಯಾಂಗ ಭದ್ರತಾ ದತ್ತಾಂಶ ನೀತಿ ರೂಪಿಸುವಂತೆ ಒಡಿಶಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಮುರಳೀಧರ್ ಕರೆ

ಒಡಿಶಾದ ಕಟಕ್ನಲ್ಲಿ ನಡೆಯುತ್ತಿರುವ ಭಾರತೀಯ ನ್ಯಾಯಾಂಗಕ್ಕಾಗಿ ತಟಸ್ಥ ಉಲ್ಲೇಖ ಮತ್ತು ಡಿಜಿಟಲೀಕರಣ ಕುರಿತಾದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

Bar & Bench

ದಾವೆದಾರರ ವೈಯಕ್ತಿಕ ಮಾಹಿತಿಯ ಸಮಗ್ರತೆ ಮತ್ತು ಸುರಕ್ಷತೆ ಕಾಯ್ದುಕೊಳ್ಳುವುದಕ್ಕಾಗಿ ರಾಷ್ಟ್ರೀಯ ನ್ಯಾಯಾಂಗ ಭದ್ರತಾ ದತ್ತಾಂಶ ನೀತಿ ಜಾರಿಗೊಳಿಸಬೇಕು ಮತ್ತು ಅದನ್ನು ಬಳಸಲು ಅವಕಾಶ ಕಲ್ಪಿಸಬೇಕು ಒಡಿಶಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್ ಮುರಳೀಧರ್ ಕರೆ ನೀಡಿದರು.

ಒಡಿಶಾದ ಕಟಕ್‌ನಲ್ಲಿ ನಡೆಯುತ್ತಿರುವ ಭಾರತೀಯ ನ್ಯಾಯಾಂಗಕ್ಕಾಗಿ ತಟಸ್ಥ ಉಲ್ಲೇಖ ಮತ್ತು ಡಿಜಿಟಲೀಕರಣ ಕುರಿತಾದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಕೂಡ ಭಾಗವಹಿಸಿದ್ದರು.

ನ್ಯಾಯಾಲಯ ಕಲಾಪಗಳನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಿದಾಗ  ಅದರ ಕ್ಲಿಪಿಂಗ್‌ಗಳನ್ನು ಪಡೆದು ʼಕೋಪಗೊಂಡ ನ್ಯಾಯಮೂರ್ತಿಗಳುʼ ಅಥವಾ ʼಅದ್ಭುತ ರೀತಿಯ ವಾದʼ ಎಂಬ ಶೀರ್ಷಿಕೆ ನೀಡಲಾಗುತ್ತದೆ. ಅಂತಹ ವೀಡಿಯೊ ಬಳಕೆ ನಿರ್ಬಂಧಕ್ಕೆ ನಾವು ಯತ್ನಿಸಬೇಕು. ನ್ಯಾಯಾಂಗದ ಕೆಲ ವಲಯಗಳಲ್ಲಿ ಇನ್ನೂ ಜಿ ಮೇಲ್‌ ಬಳಸುತ್ತಿರುವುದು ಕೂಡ ಕಳವಳಕಾರಿ ಎಂಬುದಾಗಿ ಅವರು ತಿಳಿಸಿದರು.

ಡಿಜಿಟಲೀಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದ ಅವರು, "ಒಡಿಶಾದಲ್ಲಿ ನಮ್ಮ ಸಂಪನ್ಮೂಲ ಅಗತ್ಯಗಳಿಗಾಗಿ ನಾವು ಹೊರಗಿನ ಸಂಸ್ಥೆಗಳ ಮೇಲೆ ಅವಲಂಬಿತರಾಗುವುದು ನಿಲ್ಲಬೇಕಾಗಿದೆ. ನಾವು ನಮ್ಮ ಸ್ವಂತ ಸಂಪನ್ಮೂಲಗಳನ್ನು ರೂಪಿಸಿಕೊಳ್ಳಬೇಕಿದೆ.  ಏಕರೂಪದ ಅಂತರ್ಜಾಲ ಸಂಪರ್ಕ ಇಲ್ಲಿಲ್ಲ. ಜೊತೆಗೆ ಈಶಾನ್ಯ ಭಾಗದಲ್ಲಿ ಅಂತರ್ಜಾಲ ಸಂಪರ್ಕವೇ ಇರದಂತಹ ಪ್ರದೇಶಗಳಿವೆ ಎಂದರು.

ತಮ್ಮ ಭಾಷಣದಲ್ಲಿ ಸಿಜೆಐ ಚಂದ್ರಚೂಡ್‌ ಅವರು “ನನ್ನ ಮುಖ್ಯ ಗಮನ ಇರುವುದು ತಂತ್ರಜ್ಞಾನವನ್ನು ಜನರಿಂದ ದೂರ ಇಡುವುದರಲ್ಲಿ ಅಲ್ಲ ಬದಲಿಗೆ ಅದನ್ನು ಅವರ ನಡುವೆ ತರುವುದರ ಬಗ್ಗೆ ಇದೆ. ಮುಖ್ಯ ನ್ಯಾಯಮೂರ್ತಿ ಮುರಳೀಧರ್ ಅವರು ತೆಗೆದುಕೊಂಡ ಕ್ರಮಗಳು ಅಚ್ಚರಿ ಹುಟ್ಟಿಸುತ್ತವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನ್ಯಾಯಾಲಯಗಳ ಡಿಜಿಟಲೀಕರಣದ ಕುರಿತು ಮಾತನಾಡಿದ ಅವರು ಕಾಗದರಹಿತ, ವರ್ಚುವಲ್ ನ್ಯಾಯಾಲಯಗಳನ್ನು ರಚಿಸಲು ಮತ್ತು ಕ್ಲೌಡ್ ಸ್ಟ್ರೀಮಿಂಗ್ ಜಾರಿಗೆ ತರಲು ತಾವು ಯತ್ನಿಸುತ್ತಿರುವುದಾಗಿ ತಿಳಿಸಿದರು.