ಸುದ್ದಿಗಳು

ಪರೀಕ್ಷೆ ಉದ್ದೇಶಕ್ಕೆ ಅಡ್ಡಿಯಾಗುವುದರಿಂದ ಪೂರ್ವಭಾವಿ ಪರೀಕ್ಷೆ ಮುಂದೂಡಲಾಗದು: ಯುಪಿಎಸ್‌ಸಿ ವಾದ ಮಂಡನೆ

ಸೆ.30ರಂದು ಮತ್ತೆ ವಿಚಾರಣೆ ನಡೆಯಬೇಕಿದ್ದು ಮಂಗಳವಾರದಂದು ಅರ್ಜಿಗೆ ಪ್ರತಿಕ್ರಿಯೆ ರೂಪದ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಇದೀಗ ಯುಪಿಎಸ್‌ಸಿಗೆ ಸೂಚನೆ ನೀಡಿದೆ.

Bar & Bench

ಯುಪಿಎಸ್‌ಸಿ ಪ್ರಾಥಮಿಕ ಪರೀಕ್ಷೆಗಳನ್ನು ಅಕ್ಟೋಬರ್ ಮೀರಿ ಮುಂದೂಡಲು ಸಾಧ್ಯವಿಲ್ಲ ಎಂದು ಕೇಂದ್ರ ಸಾರ್ವಜನಿಕ ನಾಗರಿಕ ಸೇವಾ ಆಯೋಗ (ಯುಪಿಎಸ್‌ಸಿ) ಸುಪ್ರೀಂಕೋರ್ಟಿಗೆ ತಿಳಿಸಿದೆ.

ಸರ್ಕಾರದ ನಾಲ್ಕು ಅಂಗಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪರೀಕ್ಷೆಯ ಉದ್ದೇಶಕ್ಕೆ ಧಕ್ಕೆ ಬರುವುದರಿಂದ ಅಕ್ಟೋಬರ್ 4ರ ಆಚೆಗೆ ಪರೀಕ್ಷೆ ಮುಂದೂಡುವುದು ಸಾಧ್ಯವಿಲ್ಲ’ ಎಂದು ಯುಪಿಎಸ್‌ಸಿ ಪರ ಹಾಜರಾದ ವಕೀಲ ನರೇಶ್ ಕೌಶಿಕ್ ತಿಳಿಸಿದರು.

"ಅರ್ಜಿದಾರರಿಗೆ ಇದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಪರೀಕ್ಷೆಯನ್ನು ಸೆಪ್ಟೆಂಬರ್ 30 ರಂದು ನಡೆಸಬೇಕಿತ್ತು. ನಂತರ ಅದನ್ನು ಅಕ್ಟೋಬರ್ 4 ಕ್ಕೆ ಮುಂದೂಡಲಾಯಿತು. ಹೀಗೆ ಮುಂದೂಡುವುದರಿಂದ ಸರ್ಕಾರದ ನಾಲ್ಕು ಅಂಗಗಳಿಗೆ ನಡೆಸಬೇಕಾದ ಪರೀಕ್ಷೆಯ ಉದ್ದೇಶಕ್ಕೆ ಧಕ್ಕೆ ತಂದಂತಾಗುತ್ತದೆ."
ಯುಪಿಎಸ್‌ಸಿ ಪರ ವಕೀಲ

ಸೆ.30ರಂದು ಮತ್ತೆ ಪ್ರಕರಣ ಕೈಗೆತ್ತಿಕೊಳ್ಳಲಿದ್ದು ಮಂಗಳವಾರದಂದು ಅರ್ಜಿಗೆ ಪ್ರತಿಕ್ರಿಯೆ ರೂಪದ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ಬಿ ಆರ್ ಗವಾಯಿ ಹಾಗೂ ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠ ಇದೇ ವೇಳೆ ಯುಪಿಎಸ್‌ಸಿಗೆ ಸೂಚನೆ ನೀಡಿದೆ.

ಕೋವಿಡ್-19 ಸಾಂಕ್ರಾಮಿಕ ರೋಗ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಎರಡು ಅಥವಾ ಮೂರು ತಿಂಗಳವರೆಗೆ ಮುಂದೂಡಬೇಕು ಮತ್ತು ಯುಪಿಎಸ್‌ಸಿ ಹೊರಡಿಸಿದ್ದ ಪರಿಷ್ಕೃತ ವೇಳಾಪಟ್ಟಿಯನ್ನು ರದ್ದುಗೊಳಿಸುವಂತೆ ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರ ಮೂಲಕ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ಈ ಸಂಬಂಧ ಎ.ಎಂ.ಖಾನ್ವಿಲ್ಕರ್ ಮತ್ತು ಸಂಜೀವ್ ಖನ್ನಾ ಅವರಿದ್ದ ಪೀಠ ತುರ್ತು ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ಮಾಡಿಕೊಟ್ಟಿತ್ತು.

ಮುಖ್ಯ ಅರ್ಜಿಯ ಜೊತೆಗೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಅಧಿಕಾರಿಯೊಬ್ಬರ ತಂದೆ ಕೂಡ ದೂರು ಸಲ್ಲಿಸಿದ್ದಾರೆ. ತಮ್ಮ ಮಗ ನಾಗರಿಕ ಸೇವಾ ಪರೀಕ್ಷೆಗಳಿಗೆ ಸಜ್ಜಾಗಿದ್ದು ಕೋವಿಡ್ 19 ಕಾರಣದಿಂದಾಗಿ ಉಂಟಾಗಿರುವ ಹೆಚ್ಚುವರಿ ಕಾರ್ಯಭಾರ ವ್ಯಾಸಂಗಕ್ಕೆ ಅನುವು ಮಾಡಿಕೊಡುತ್ತಿಲ್ಲ. ಉಳಿದ ಅಭ್ಯರ್ಥಿಗಳಂತೆ ಆನ್‌ಲೈನ್ ಸಂಪನ್ಮೂಲ ಬಳಸಿ ಮನೆಯಲ್ಲಿ ಕುಳಿತು ಓದುವ ಅವಕಾಶ ಕೂಡ ಮಗನಿಗೆ ದೊರೆಯುತ್ತಿಲ್ಲ ಎಂದು ತಮ್ಮ ಮಧ್ಯಪ್ರವೇಶ ಅರ್ಜಿಯಲ್ಲಿ ಅವರು ಉಲ್ಲೇಖಿಸಿದ್ದಾರೆ.