ವಿವಾದಿತ ಸುದರ್ಶನ್ ಟಿವಿಗೆ ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಷೋಕಾಸ್ ನೋಟಿಸ್ ಜಾರಿಗೊಳಿಸಿದೆ. ಸೆಪ್ಟೆಂಬರ್ 28ರೊಳಗೆ ನೋಟಿಸ್‌ಗೆ ಪ್ರತಿಕ್ರಿಯಿಸುವಂತೆ ಸುದರ್ಶನ್ ಟಿವಿಗೆ ಸೂಚನೆ ನೀಡಲಾಗಿದ್ದು, ವಿಚಾರಣೆಯನ್ನು ಮುಂದೂಡುವಂತೆ ಕೋರಲಾಗಿದೆ. ಸುದರ್ಶನ್ ಟಿವಿಯ ಪ್ರತಿಕ್ರಿಯೆ ಆಧರಿಸಿ ತನ್ನ ನಿಲುವನ್ನು ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನ್ಯಾಯಾಲಯವು ವಿಚಾರಣೆ ಮುಂದೂಡಿತು.
ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಇಂದೂ ಮಲ್ಹೋತ್ರಾ ಮತ್ತು ಕೆ ಎಂ ಜೋಸೆಫ್ ಅವರಿದ್ದ ತ್ರಿಸದಸ್ಯ ಪೀಠವು ಸುದರ್ಶನ್ ಟಿವಿಯಲ್ಲಿನ ಯುಪಿಎಸ್ ಸಿ ಜಿಹಾದ್ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸುವಂತೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಿತು. ವಿಸ್ತೃತವಾಗಿ ವಾದ ಆಲಿಸಿದ ನ್ಯಾಯಪೀಠವು ಅಕ್ಟೋಬರ್ 5ಕ್ಕೆ ವಿಚಾರಣೆ ಮುಂದೂಡಿತು.
“ಕೇಬಲ್ ನೆಟ್‌ವರ್ಕ್ ಕಾಯಿದೆ-1996 ರ ಅಡಿ ತನಗೆ ದೊರೆತಿರುವ ಅಧಿಕಾರ ಬಳಸಿ ಸುದರ್ಶನ್ ಟಿವಿಗೆ ಕೇಂದ್ರ ಸರ್ಕಾರುವ ಷೋಕಾಸ್ ನೋಟಿಸ್ ಜಾರಿಗೊಳಿಸಿದೆ” ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠದ ಗಮನಸೆಳೆದರು.
ಸುದರ್ಶನ್ ಟಿವಿಯ ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮದ ಉಳಿದ ಕಂತುಗಳಿಗೆ ಸೆಪ್ಟೆಂಬರ್ 15ರಂದು ವಿಧಿಸಿದ್ದ ತಡೆಯಾಜ್ಞೆ ಮುಂದುವರಿಯಲಿದೆ. ಮಧ್ಯಪ್ರವೇಶ ಅರ್ಜಿ ಸಲ್ಲಿಸಿದ್ದ ಮಧು ಕಿಶ್ವರ್ ಪರ ವಕೀಲ ರವಿ ಶರ್ಮಾ ಅವರು “ನನ್ನ ಕಕ್ಷಿದಾರರ ಪ್ರತಿಕ್ರಿಯೆಯನ್ನು ದ್ವೇಷ ಭಾಷೆ ಎಂದು ಹೇಳಲಾಗಿದೆ. ಈ ಬಗ್ಗೆ ವಾದಿಸಲು 10-15 ನಿಮಿಷಗಳನ್ನು ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
"ಮಧ್ಯಪ್ರವೇಶಗಾರರಿಗೆ 15 ನಿಮಿಷ ನ್ಯಾಯಾಲಯದ ಸಮಯ ನೀಡಲಾಗದು. ನೀವು ಮುದ್ರಿತ ದಾಖಲೆ ಸಲ್ಲಿಸಬಹುದು" ಎಂದು ನ್ಯಾ. ಡಿ ವೈ ಚಂದ್ರಚೂಡ್ ಸೂಚಿಸಿದರು.