-
ಪ್ರತಿಯೊಂದು ಪದವೂ ವರದಿಯಾಗುತ್ತಿರುವ ಸಾಮಾಜಿಕ ಮಾಧ್ಯಮ ಯುಗದಲ್ಲಿ ನ್ಯಾಯಾಧೀಶರು ತೀರ್ಪು ಬರೆಯುವುದರಾಚೆಗೆ ಮಾತನಾಡುವ ಪ್ರಲೋಭನೆಯಿಂದ ದೂರ ಉಳಿಯಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಶನಿವಾರ ಕಿವಿಮಾತು ಹೇಳಿದರು.
ಬಾಂಬೆ ಹೈಕೋರ್ಟ್ ನಾಗಪುರ ಪೀಠದ ವಕೀಲರ ಸಂಘ ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುಪ್ರೀಂ ಕೋರ್ಟ್ ನ್ಯಾಯೂರ್ತಿ ಎ ಎಸ್ ಚಂದೂರ್ಕರ್ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನ್ಯಾಯಾಧೀಶರು ಅದರಲ್ಲಿಯೂ ನಿವೃತ್ತರಾದವರು ವಾಚಾಳಿ ಮನೋಭಾವದಿಂದ ದೂರ ಇರಬೇಕು ಎಂದು ಅವರು ಹೇಳಿದರು.
ಸಾಮಾಜಿಕ ಮಾಧ್ಯಮ ಹಾಗೂ ಹೆಚ್ಚ ಮಾತನಾಡಬೇಕಾದ ಅವಶ್ಯಕತೆಯಿಂದಾಗಿ ನ್ಯಾಯಾಧೀಶರು ಮಾತಿನ ಬಗೆಗಿನ ಸಂಯಮದಿಂದ ದೂರ ಸರಿದಂತೆ ಕಾಣುತ್ತಿದೆ. ಪ್ರತಿಯೊಂದು ಪದವೂ ಸುದ್ದಿಯಾಗುತ್ತಿದ್ದು ಇದು ಹಾಲಿ ನ್ಯಾಯಮೂರ್ತಿಗಳನ್ನು ಆಕರ್ಷಿಸಬಹುದು. ಇನ್ನೂ ಕೆಟ್ಟ ಸಂಗತಿ ಎಂದರೆ ನಿವೃತ್ತ ನ್ಯಾಯಮೂರ್ತಿಗಳೂ ಕೂಡ ಮಾತನಾಡುವುದೇ ಪೂರ್ಣಾವಧಿಯ ಕೆಲಸ ಎಂಬಂತೆ ತಮಗೆ ಮಾತನಾಡಲು ಸಮಯ ಬಂದಿದೆ ಎಂದು ಭಾವಿಸುತ್ತಾರೆ. ನನ್ನ ಅಭಿಪ್ರಾಯದಲ್ಲಿ, ಅದು ನಮ್ಮ ವ್ಯವಸ್ಥೆ ಕಾರ್ಯನಿರ್ವಹಿಸುವ ಸರಿಯಾದ ಮಾರ್ಗವಲ್ಲ ಎಂದು ಅವರು ವಿವರಿಸಿದರು.
ಮಾತನಾಡಬೇಕಿರುವುದು ನ್ಯಾಯಾಧೀಶರಲ್ಲ ಬದಲಿಗೆ ತೀರ್ಪುಗಳು ಎಂದು ನುಡಿದ ನ್ಯಾ. ನರಸಿಂಹ ಅವರು ತಾವು ಮಾತನಾಡದೆ ತಮ್ಮ ತೀರ್ಪುಗಳು ಮಾತನಾಡುವಂತೆ ಮಾಡುವ ನ್ಯಾಯಮೂರ್ತಿಯಾಗಿದ್ದಾರೆ ಎ ಎಸ್ ಚಂದೂರ್ಕರ್ ಎಂದು ಶ್ಲಾಘಿಸಿದರು.
ನ್ಯಾಯವಿತರಣೆ ವ್ಯವಸ್ಥೆಯಲ್ಲಿ ನ್ಯಾಯಾಧೀಶರು ನೇಪಥ್ಯದಲ್ಲಿ ಇರುವುದು ಅಗತ್ಯ ಎಂದು ನಂಬುತ್ತೇನೆ. ನ್ಯಾಯಧೀಶರು ಕಾಣಿಸಿಕೊಳ್ಳಬಾರದು. ತೀರ್ಪು ನೀಡುವುದನ್ನು ಹೊರತುಪಡಿಸಿ ಈ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರು ಕಾಣಿಸಿಕೊಳ್ಳುಯವ ಅಗತ್ಯವಿಲ್ಲ, ನ್ಯಾಯಾಧೀಶ, ಆತನ ವ್ಯಕ್ತಿತ್ವ ಎಲ್ಲವೂ ಅನಗತ್ಯ. ನ್ಯಾಯಾಧೀಶರು ತೀರ್ಪು ನೀಡುವುದಕ್ಕಿಂತ ಹೆಚ್ಚಿನದೇನನ್ನೂ ಮಾಡದೆ ನೇಪಥ್ಯದಲ್ಲಿರಬೇಕು. ಅವರ ತೀರ್ಪುಗಳು ಮಾತ್ರವೇ ಮಾತನಾಡಬೇಕು, ಅವುಗಳೇ ಬಹಳಷ್ಟು ಮಾತನಾಡಬೇಕು ಎಂದರು.
ವಕೀಲರಿಗೆ ಮಾತು ಅಗತ್ಯವಾದರೂ ನ್ಯಾಯಾಧೀಶರ ಅಭಿವ್ಯಕ್ತಿ ಲಿಖಿತ ತೀರ್ಪುಗಳಲ್ಲಿ ಇರುತ್ತದೆ. ವಕೀಲರು ಮತ್ತು ನ್ಯಾಯಾಧೀಶರು ಎಷ್ಟು ಮಾತನಾಡಬೇಕು ಎಂಬ ಬಗ್ಗೆ ಸಂಯಮವೇ ಮಾರ್ಗದರ್ಶನ ನೀಡಬೇಕು. ಇದರರ್ಥ ವಕೀಲರ ವಾದಗಳಲ್ಲಿ ಸಂಕ್ಷಿಪ್ತತೆ ಇರಬೇಕು, ಹಾಗೆಯೇ ನ್ಯಾಯಾಧೀಶರ ತೀರ್ಪುಗಳಲ್ಲಿ ನಿಖರತೆ ಇರಬೇಕು ಎಂದು ಅವರು ಹೇಳಿದರು.
ನಂತರ ಮಾತನಾಡಿದ ನ್ಯಾ. ಚಂದೂರ್ಕರ್ ಅವರು ವಕೀಲ ವೃತ್ತಿಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹುದ್ದೆಯವರೆಗಿನ ತಮ್ಮ ಯಾನವನ್ನು ನೆನೆದರು. ಕಾನೂನು ವೃತ್ತಿಯಲ್ಲಿ ಎಷ್ಟೇ ಎತ್ತರಕ್ಕೆ ಏರಿದರೂ, ಪೋಷಕ ವಕೀಲ ಸಮುದಾಯದೊಂದಿಗಿನ ಸಂಬಂಧಗಳು ಶಾಶ್ವತವಾಗಿರುತ್ತವೆ ಎಂದು ಅವರು ಹೇಳಿದರು. ಸುಪ್ರೀಂ ಕೋರ್ಟ್ನಲ್ಲಿ ತಾನು, ನ್ಯಾಯಮೂರ್ತಿ ನರಸಿಂಹ ಹಾಗೂ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಬಾಂಬೆ ಹೈಕೋರ್ಟನ್ನು ಪ್ರತಿನಿಧಿಸುತ್ತಿದ್ದು ನಾಗಪುರ ಪೀಠದೊಂದಿಗೆ ಅವಿನಾಭಾವ ನಂಟು ಹೊಂದಿರುವುದಾಗಿ ಹೇಳಿದರು.