Court Room 
ಸುದ್ದಿಗಳು

ಕೋವಿಡ್‌ ಲಸಿಕೆ ಆದ್ಯತಾ ಪಟ್ಟಿಯಲ್ಲಿ ವಕೀಲರು, ನ್ಯಾಯಾಧೀಶರನ್ನು ಸೇರಿಸಿ: ತಮಿಳುನಾಡು ನ್ಯಾಯವಾದಿಗಳ ಸಂಘ

“ಆದ್ಯತೆಯ ವಿಭಾಗದ ಪಟ್ಟಿಯಲ್ಲಿ ಕಾನೂನು ಕ್ಷೇತ್ರದ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿಲ್ಲ ಎಂಬುದು ಆಘಾತ, ಆಶ್ಚರ್ಯ ಮತ್ತು ಆತಂಕದ ವಿಷಯವಾಗಿದೆ,” ಎಂದು ಸಂಘದ ಮನವಿ ಪತ್ರದಲ್ಲಿ ಹೇಳಲಾಗಿದೆ.

Siddesh M S

ಮೊದಲ ಹಂತದಲ್ಲಿ ಕೋವಿಡ್‌ ಲಸಿಕೆ ಪಡೆಯುವವರ ಆದ್ಯತೆಯ ಪಟ್ಟಿಯಲ್ಲಿ ಅರ್ಹತೆ ಪಡೆದಿರುವವರ ಸಾಲಿಗೆ ವಕೀಲರು ಮತ್ತು ನ್ಯಾಯಮೂರ್ತಿಗಳನ್ನು ಕಡ್ಡಾಯವಾಗಿ ಸೇರ್ಪಡೆಗೊಳಿಸಬೇಕು ಎಂದು ಸರ್ಕಾರ, ಸುಪ್ರೀಂ ಕೋರ್ಟ್‌ ಹಾಗೂ ಮದ್ರಾಸ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ತಮಿಳುನಾಡು ನ್ಯಾಯವಾದಿಗಳ ಸಂಘ‌ (ಟಿಎನ್‌ಎಎ) ಆಗ್ರಹಿಸಿದೆ.

ಮುಂದಿನ ಕೆಲವು ವಾರಗಳಲ್ಲಿ ಮೊದಲ ಹಂತದ ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಲಿದ್ದು, ಈ ಸಂಬಂಧ ಸರ್ಕಾರವು ತಾತ್ಕಾಲಿಕವಾಗಿ ಭಾರತದಲ್ಲಿ ಆದ್ಯತೆಯ ಕ್ಷೇತ್ರಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಆರೋಗ್ಯ ಕಾರ್ಯಕರ್ತರು, ಭದ್ರತಾ ಪಡೆಗಳು, ಪೊಲೀಸ್‌ ಸಿಬ್ಬಂದಿ, ಹಿರಿಯ ನಾಗರಿಕರು ಮತ್ತು ಒಂದಕ್ಕಿಂತ ಹೆಚ್ಚು ಖಾಯಿಲೆಗಳನ್ನು ಹೊಂದಿರುವ ರೋಗಿಗಳನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದ್ದು, ವಕೀಲರು ಮತ್ತು ನ್ಯಾಯಮೂರ್ತಿಗಳನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿಲ್ಲ ಎಂದು ಟಿಎನ್‌ಎಎ ಹೇಳಿದೆ.

“… ಆದ್ಯತೆಯ ವಿಭಾಗದ ಪಟ್ಟಿಯಲ್ಲಿ ಕಾನೂನು ಕ್ಷೇತ್ರದ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿಲ್ಲ ಎಂಬುದು ಆಘಾತ, ಆಶ್ಚರ್ಯ ಮತ್ತು ಆತಂಕದ ವಿಷಯವಾಗಿದೆ. ಅತ್ಯಂತ ಅವಶ್ಯವಾದ ನ್ಯಾಯಾಂಗ ವ್ಯವಸ್ಥೆಯನ್ನು ಕೈ ಬಿಟ್ಟಿರುವುದು ಕಣ್ಣಿಗೆ ರಾಚುವಂತಹ ಪ್ರಮಾದವಾಗಿದ್ದು ಸಂಬಂಧಿತ ಅಧಿಕಾರಿಗಳಿಂದ ನ್ಯಾಯಾಂಗದೆಡೆಗಿನ ಪಕ್ಷಪಾತ ಧೋರಣೆ ಕಂಡುಬಂದಿದೆ,” ಎಂದು ಟಿಎನ್‌ಎಎ ಅಧ್ಯಕ್ಷ ಎಸ್‌ ಪ್ರಭಾಕರನ್‌ ಮನವಿ ಪತ್ರದಲ್ಲಿ ವಿವರಿಸಿದ್ದಾರೆ.

ವಿಸ್ತೃತ ನೆಲೆಯಲ್ಲಿ ಸಮಾಜದ ಸುಧಾರಣೆಗೆ ನ್ಯಾಯಾಲಯಗಳು ಮತ್ತು ಕಾನೂನು ಕ್ಷೇತ್ರದಲ್ಲಿರುವವರ ಮಹತ್ವವನ್ನು ಗಮನಿಸದೇ ಮೊದಲ ಹಂತದ ಕೋವಿಡ್‌ ಲಸಿಕೆ ಹಾಕುವ ಪ್ರಕ್ರಿಯೆಯಿಂದ ನ್ಯಾಯಾಧೀಶರು ಮತ್ತು ವಕೀಲರನ್ನು ಕೈಬಿಟ್ಟಿರುವುದು ಅನ್ಯಾಯ ಮತ್ತು ಕಾನೂನುಬಾಹಿರವಾಗಿದ್ದು, ಇದು ಅಧಿಕಾರಿ ವರ್ಗದ ತಪ್ಪಾದ ಆದ್ಯತೆಯನ್ನು ಬಿಂಬಿಸುತ್ತದೆ ಎಂದು ಟಿಎನ್‌ಎಎ ಹೇಳಿದೆ.