ಯಾವುದೇ ರಾಜಕೀಯ ಪಕ್ಷ ಅಧಿಕಾರದಲ್ಲಿದ್ದರೂ ಭಾರತೀಯ ನ್ಯಾಯಾಂಗ ಸ್ವಾತಂತ್ರ್ಯ ಸವಾಲುಗಳನ್ನು ಎದುರಿಸಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಹೇಳಿದ್ದಾರೆ.
ಗೋವಾದಲ್ಲಿ ಬುಧವಾರ ನಡೆದ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನ್ಯಾಯಾಂಗ ಸ್ವಾತಂತ್ರ್ಯದ ಮೂಲ ಸಾಂವಿಧಾನಿಕ ಮೌಲ್ಯ ಕಾಪಾಡಲು ನ್ಯಾಯಾಧೀಶರು ಮತ್ತು ವಕೀಲರು ನಿರಂತರ ಜಾಗರೂಕರಾಗಿರುವ ಅಗತ್ಯವಿದೆ ಎಂದರು.
ನ್ಯಾ. ಓಕಾ ಭಾಷಣದ ಪ್ರಮುಖಾಂಶಗಳು
ತುರ್ತುಪರಿಸ್ಥಿತಿಯೇ ಇರಲಿ ಅಥವಾ ಇನ್ನಾವುದೇ ಸರ್ಕಾರ ಅಧಿಕಾರ ನಡೆಸುತ್ತಿರಲಿ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಸದಾ ಬೆದರಿಕೆ ಇರುತ್ತದೆ.
ಅದಕ್ಕಾಗಿಯೇ ನ್ಯಾಯಾಧೀಶರು ಮತ್ತು ವಕೀಲರು ಜಾಗರೂಕರಾಗಿರಬೇಕು. ಇದು ಒಮ್ಮೆ ಮಾತ್ರ ನಡೆಯುವ ಹೋರಾಟವಲ್ಲ
ನ್ಯಾಯಾಧೀಶರ ನೇಮಕಾತಿಯಲ್ಲಿ ವಿಳಂಬ ಹೆಚ್ಚುತ್ತಿರುವುದು ಗಂಭೀರ ಸಮಸ್ಯೆ.
ಕೊಲಿಜಿಯಂ ಹೆಚ್ಚು ಪಾರದರ್ಶಕವಾಗಿದ್ದರೂ ಸರ್ಕಾರದ ನಿಷ್ಕ್ರಿಯತೆ ನೇಮಕಾತಿ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತಿದೆ.
ಕೊಲಿಜಿಯಂ ಶಿಫಾರಸಿನ ಬಳಿಕ ಸರ್ಕಾರದ ಸಮ್ಮತಿಗಾಗಿ ಒಂದು ವರ್ಷದಷ್ಟು ದೀರ್ಘಕಾಲ ಕೆಲ ನ್ಯಾಯಮೂರ್ತಿಗಳು ಕಾದಿದ್ದಾರೆ.
ಈ ಬಗೆಯ ಅನಿಶ್ಚಿತತೆ ನೈತಿಕತೆಯನ್ನು ಕುಗ್ಗಿಸುವುದಷ್ಟೇ ಅಲ್ಲ, ನ್ಯಾಯಾಂಗವನ್ನು ದುರ್ಬಲಗೊಳಿಸುತ್ತದೆ.
ಪರಿಣಾಮ ಪ್ರತಿಭಾನ್ವಿತ ವಕೀಲರು ನ್ಯಾಯಾಧೀಶ ಹುದ್ದೆ ಸ್ವೀಕರಿಸಲು ಹಿಂಜರಿಯುತ್ತಾರೆ. ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತದೆ ಎಂದು ಅವರು ಭಯಪಡುತ್ತಾರೆ. ಮನವೊಲಿಸಲು ಮುಖ್ಯ ನ್ಯಾಯಮೂರ್ತಿಗಳು ಕಷ್ಟಪಡಬೇಕಾದ ಸ್ಥಿತಿ ಇದೆ.
ತುರ್ತು ಪರಿಸ್ಥಿತಿಯಲ್ಲಿ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಗಿದ್ದರೂ ಹೈಕೋರ್ಟ್ ನ್ಯಾಯಮೂರ್ತಿಗಳು ದೃಢವಾಗಿ ನಿಂತ ನಿದರ್ಶನಗಳಿವೆ.
ತುರ್ತು ಪರಿಸ್ಥಿತಿಯ ಕೆಲ ಮಾತುಗಳು ಇಂದಿಗೂ ಕೇಳಿಬರುತ್ತವೆ. ನಾನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಮಯದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧದ ಪ್ರತಿಭಟನೆಗಳನ್ನು ತಡೆಯಲು ಸಿಆರ್‌ಪಿಸಿ ಸೆಕ್ಷನ್ 144 ಅನ್ನು ಬಳಸಲಾಯಿತು. ನಾವದನ್ನು ರದ್ದುಗೊಳಿಸಬೇಕಾಯಿತು. ವಿಧಾನ ಬದಲಾಗಿದ್ದರೂ ತುರ್ತು ಪರಿಸ್ಥಿತಿಯ ಛಾಯೆ ಹಾಗೆಯೇ ಉಳಿದಿದೆ.
ಸರ್ಕಾರ ತಮ್ಮನ್ನು ಇಷ್ಟಪಡದಿದ್ದರೂ ಅದೊಂದೇ ದೇಶದ್ರೋಹ ಎನಿಸಿಕೊಳ್ಳುವುದಿಲ್ಲ ಎಂದು ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ನ್ಯಾಯಾಧೀಶರೊಬ್ಬರಿಗೆ ತಿಳಿಸಿದ್ದರು. ಅದೇ ನಾವು ಮುಂದುವರೆಸಬೇಕಾದ ಮನೋಭಾವ.