
ಪರಿಸರ ನ್ಯಾಯ ಉನ್ನತ ಸ್ಥಾನಕ್ಕೆ ಏರಿದ್ದು ಅದನ್ನು ಸಾಮಾಜಿಕ ಮತ್ತು ಆರ್ಥಿಕ ನ್ಯಾಯದಿಂದ ಬೇರ್ಪಡಿಸಲು ಆಗದು ಎಂದು ನ್ಯಾ. ಅಭಯ್ ಎಸ್ ಓಕಾ ಗುರುವಾರ ಹೇಳಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಜೂನ್ 5 ರಂದು ಸೊಸೈಟಿ ಆಫ್ ಇಂಡಿಯನ್ ಲಾ ಫರ್ಮ್ಸ್ (ಎಸ್‌ಐಎಲ್‌ಎಫ್) ಹಮ್ಮಿಕೊಂಡಿದ್ದ ಹವಾಮಾನ ಬದಲಾವಣೆ ಸಮ್ಮೇಳನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ- 2025ರಲ್ಲಿ ಸುಸ್ಥಿರತೆ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಪರಿಸರ ನ್ಯಾಯಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾಲಿನ್ಯ ಮತ್ತು ಪರಿಸರ ನಾಶ ಅತಿ ದುರ್ಬಲರ ಮೇಲೆ ನೇರ ಪರಿಣಾಮ ಬೀರಲಿದ್ದು ಅವರ ಜೀವಿಸುವ ಮೂಲಭೂತ ಹಕ್ಕನ್ನು ಕಸಿದುಕೊಳ್ಳುತ್ತದೆ. ಮಾಲಿನ್ಯ ಮುಕ್ತ ಪರಿಸರದ ಹಕ್ಕು ಕೇವಲ ಶುದ್ಧ ಗಾಳಿ ಅಥವಾ ನೀರಿಗೆ ಸೀಮಿತವಾಗಿಲ್ಲ. ಬದಲಿಗೆ ಮೂಲತಃ ಮಾನವ ಘನತೆ, ಸಾಮಾಜಿಕ ಸಮಾನತೆ ಮತ್ತು ಜೀವನದ ಗುಣಮಟ್ಟದ ಬಗ್ಗೆ, ಅದರಲ್ಲಿಯೂ ವಾಯು ಶುದ್ಧೀಕರಣ ಯಂತ್ರಗಳಂತಹ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದವರಿಗೆ ಮೀಸಲಾದುದು ಎಂದು ನ್ಯಾಯಮೂರ್ತಿ ಓಕಾ ಹೇಳಿದರು.
ಪರಿಸರ ಸಂರಕ್ಷಿಸಲು ಭಾರತ ದೃಢವಾದ ತೀರ್ಪುಗಳನ್ನು ಈ ಹಿಂದಿನಿಂದಲೂ ನೀಡುತ್ತ ಬಂದಿದ್ದರೂ ಪರಿಸರ ಸಂರಕ್ಷಣೆಯ ಸಿದ್ಧಾಂತಗಳನ್ನು ಕಾರ್ಯರೂಪಕ್ಕೆ ತರಲುವಲ್ಲಿ ಸವಾಲುಗಳು ಇರುತ್ತವೆ. ಜೊತೆಗೆ ಪರಿಸರ ಸಂರಕ್ಷಣೆ ಕೇವಲ ಆದರ್ಶವಾದಿ ಆಕಾಂಕ್ಷೆ ಎನಿಸಿಕೊಳ್ಳದೆ ನಿಜವಾದ ಸಾಮೂಹಿಕ ಬದ್ಧತೆಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಂಜಯ್ ಕರೋಲ್, ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಜಸ್ಮೀತ್ ಸಿಂಗ್, ಎಸ್‌ಐಎಲ್‌ಎಫ್ ಮತ್ತು ಸಿಐಐ ಕಾನೂನು ಸೇವಾ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ. ಲಲಿತ್ ಭಾಸಿನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.